ಬೆಳಗಾವಿ ನಗರದಲ್ಲಿ ನಡೆದ ಮನೆಗಳ್ಳತನ ಪ್ರಕರಣವನ್ನು ಭೇದಿಸಿರುವ ಶಹಾಪುರ ಠಾಣೆ ಪೊಲೀಸರು, ದೆಹಲಿ ಮೂಲದ ಓರ್ವ ಆರೋಪಿಯನ್ನು ಬಂಧಿಸಿ ₹44.86 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಗರದ ಶಹಾಪುರ ಭಾರತನಗರದಲ್ಲಿನ ಮನೆಯೊಂದರ ಕೀಲಿ ಮುರಿದು ಒಳನುಗ್ಗಿದ ಕಳ್ಳ, ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗಿದ್ದ. ವಿಶೇಷವೆಂದರೆ, ಈ ಕಳ್ಳತನ ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಮನೆಯಲ್ಲೇ ನಡೆದಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
ಪ್ರಕರಣ ದಾಖಲಿಸಿಕೊಂಡ ಶಹಾಪುರ ಠಾಣೆ ಪೊಲೀಸರು ಸತತ ಕಾರ್ಯಾಚರಣೆ ನಡೆಸಿ, ದೆಹಲಿಗೆ ತೆರಳಿ ಆರೋಪಿಯನ್ನು ಪತ್ತೆ ಹಚ್ಚಿ ಬೆಳಗಾವಿಗೆ ಕರೆತಂದಿದ್ದಾರೆ.
ಬಂಧಿತ ಆರೋಪಿಯನ್ನು ದೆಹಲಿಯ ತಿಲಕನಗರ ನಿವಾಸಿ ಮಿಂಟು ಅಲಿಯಾಸ್ ಚಿಂಟು ಕುಟಿ ವಿಶ್ವಾಸ (52) ಎಂದು ಗುರುತಿಸಲಾಗಿದೆ. ಆರೋಪಿಯಿಂದ 294.190 ಗ್ರಾಂ ತೂಕದ ₹44,86,390 ಮೌಲ್ಯದ ಗಟ್ಟಿ ಬಂಗಾರ ಹಾಗೂ ಕಳ್ಳತನಕ್ಕೆ ಬಳಸಿದ್ದ ₹70 ಸಾವಿರ ಮೌಲ್ಯದ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನ ಸೇರಿ ಒಟ್ಟು ₹45,56,390 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿ ವಿರುದ್ಧ ವಿವಿಧ ರಾಜ್ಯಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ಇನ್ನಷ್ಟು ವಿಚಾರಣೆ ಮುಂದುವರಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಎಸ್.ಎಸ್. ಸಿಮಾನಿ, ಪಿಎಸ್‌ಐ ಮಣಿಕಂಠ ಪೂಜಾರಿ, ಪ್ರವೀಣ ಬಿರಾದಾರ, ಮಂಜುನಾಥ ಭಜಂತ್ರಿ ಸೇರಿದಂತೆ ಶಹಾಪುರ ಠಾಣೆ ಸಿಬ್ಬಂದಿ ಭಾಗವಹಿಸಿದ್ದರು.
ಈ ತಂಡದ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ, ಡಿಸಿಪಿ ನಿರಂಜನ ರಾಜೆ ಅರಸ್ ಹಾಗೂ ಡಿಸಿಪಿ ನಾರಾಯಣ ಬರಮನಿ ಅಭಿನಂದಿಸಿದ್ದಾರೆ



