ರಾಜ್ಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ತಿರಸ್ಕೃತವಾಗಿದೆ ಎಂದು ಹೇಳಲಾಗುತ್ತಿದ್ದರೂ, ಶಾಲಾ ಶಿಕ್ಷಣದಲ್ಲಿ ಇನ್ನೂ ಅದೇ ನೀತಿಯ ಶಿಫಾರಸ್ಸುಗಳು ಮುಂದುವರಿದಿವೆ. ಆದರೆ ಈ ತಿರಸ್ಕಾರಕ್ಕೆ ಅಧಿಕೃತ ನೋಟಿಫಿಕೇಶನ್ ಹೊರಬಂದಿಲ್ಲ ಎಂದು ಸಮಾನ ಶಿಕ್ಷಣ ಹೋರಾಟಗಾರ ಬಿ. ಶ್ರೀಪಾದ್ ಭಟ್ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಆಯೋಜಿಸಲಾದ ಪ್ರೊ. ಮಾಧವ ಗಾಡ್ಗೀಳ ನೆನಪಿನ ಪರಿಸರ ಮತ್ತು ಶಿಕ್ಷಣ ಸಮ್ಮೇಳನದ ರವಿವಾರದ ಅಧಿವೇಶನದಲ್ಲಿ ‘ಶಾಲಾ ಶಿಕ್ಷಣದ ಸದ್ಯದ ಬಿಕ್ಕಟ್ಟುಗಳು’ ವಿಷಯವಾಗಿ ಅವರು ಮಾತನಾಡಿದರು.
2028ರಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಇನ್ನೂ ಸ್ಪಷ್ಟ ಶಿಕ್ಷಣ ನೀತಿ ರೂಪುಗೊಂಡಿಲ್ಲ. ಒಂದೆಡೆ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಪ್ರಶ್ನಾರ್ಥಕವಾಗಿದ್ದರೆ, ಇನ್ನೊಂದೆಡೆ ರಾಜ್ಯ ಶಿಕ್ಷಣ ನೀತಿಯೂ ರೂಪುಗೊಳ್ಳದೆ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯ ಶಿಕ್ಷಣ ನೀತಿ ರೂಪಿಸಲು ರಚಿಸಲಾದ ಸಚಿವ ಸಂಪುಟದ ಉಪಸಮಿತಿಯಲ್ಲಿ ಶಿಕ್ಷಕರು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಿಲ್ಲ ಎಂದು ಟೀಕಿಸಿದ ಅವರು, ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳುವಷ್ಟರಲ್ಲಿ ಮತ್ತೆ ಚುನಾವಣೆ ಎದುರಾಗಲಿದೆ. ಮುಂದಿನ ಸರ್ಕಾರ ಮತ್ತೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದರೆ ಮಕ್ಕಳ ಭವಿಷ್ಯ ಹಾಳಾಗುವ ಅಪಾಯ ಇದೆ ಎಂದು ಎಚ್ಚರಿಸಿದರು.
ಭಾರತದ ಶಿಕ್ಷಣ ವ್ಯವಸ್ಥೆಯ ದೊಡ್ಡ ಬಿಕ್ಕಟ್ಟು “ಒಳಗೊಳ್ಳುವಿಕೆ”ಯ ಕೊರತೆ ಎಂದು ಅವರು ಹೇಳಿದರು. ಶಿಕ್ಷಣ ಸಾರ್ವತ್ರಿಕರಣವಾಗಿದೆ ಎನ್ನಲಾಗುತ್ತಿದ್ದರೂ, ಅದು ಯಾರಿಗೆ ಮತ್ತು ಎಷ್ಟರ ಮಟ್ಟಿಗೆ ತಲುಪಿದೆ ಎಂಬ ಪ್ರಶ್ನೆ ಇನ್ನೂ ಉಳಿದಿದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಬಯಸಿದ ಶಿಕ್ಷಣದ ಮೌಲ್ಯಗಳಾದ ಪ್ರಾತಿನಿಧ್ಯ, ಸಬಲೀಕರಣ ಮತ್ತು ವಿಮೋಚನೆ ಇಂದಿಗೂ ಸಂಪೂರ್ಣ ಸಾಕಾರವಾಗಿಲ್ಲ. ಸಾರ್ವಜನಿಕ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ನ್ಯಾಯ ಪ್ರಜಾಪ್ರಭುತ್ವದ ಮೂಲಭೂತ ಸ್ತಂಭಗಳಾಗಿದ್ದು, ಇವು ದುರ್ಬಲವಾದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಹೇಳಿದರು.
ಶಿಕ್ಷಣದ ಪ್ರಮುಖ ಭಾಗಿದಾರರಾದ ಪೋಷಕರಿಗೆ ಶಿಕ್ಷಣ ನೀತಿಯ ಬಗ್ಗೆ ಅರಿವು ಕಡಿಮೆಯಾಗಿದೆ. ಸಾರ್ವಜನಿಕ ಶಿಕ್ಷಣದ ಬಗ್ಗೆ ಪೋಷಕರ ಆಸಕ್ತಿಯ ಕೊರತೆಯೇ ಅನೇಕ ಬಿಕ್ಕಟ್ಟುಗಳಿಗೆ ಕಾರಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
6ರಿಂದ 14 ವರ್ಷಗಳವರೆಗೆ ಇರುವ ಶಿಕ್ಷಣದ ಮೂಲಭೂತ ಹಕ್ಕನ್ನು 0ರಿಂದ 18 ವರ್ಷಗಳವರೆಗೆ ವಿಸ್ತರಿಸಬೇಕು. ಶಾಲಾ ಶಿಕ್ಷಣವನ್ನು ರಾಜ್ಯ ಪಟ್ಟಿಗೆ ತರಬೇಕು. ನಿಷ್ಕ್ರಿಯವಾಗಿರುವ ಶಿಕ್ಷಣ ಕೇಂದ್ರ ಸಲಹಾ ಮಂಡಳಿಯನ್ನು ಸಕ್ರಿಯಗೊಳಿಸಬೇಕು. ದ್ವಿಭಾಷಾ ನೀತಿ ಬಗ್ಗೆ ಸ್ಪಷ್ಟತೆ ತರಬೇಕು. ಸಾರ್ವಜನಿಕ ಶಿಕ್ಷಣ ಮತ್ತು ಅಂಗನವಾಡಿ ವ್ಯವಸ್ಥೆಯನ್ನು ಬಲಪಡಿಸಬೇಕು. ಶೋಷಿತ ವರ್ಗಗಳಿಗೆ ಪ್ರತ್ಯೇಕ ಶಿಕ್ಷಣ ನೀತಿ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಚಿಂತಕ ಎಫ್.ಸಿ. ಚೇಗರೆಡ್ಡಿ ಮಾತನಾಡಿದರು. ಅಧ್ಯಕ್ಷತೆಯನ್ನು ಅಶೋಕ್ ಕುಂದಾಪುರ ವಹಿಸಿದ್ದರು. ಪೀಪಲ್ ಆರ್ಕೈವ್ ಆಫ್ ರೂರಲ್ ಇಂಡಿಯಾ ಕನ್ನಡ ಸಂಪಾದಕ ಶಂಕರ್ ಕೆಂಚನೂರು ಉಪಸ್ಥಿತರಿದ್ದರು. ರವೀಂದ್ರ ಕೋಣಿ ಕಾರ್ಯಕ್ರಮ ನಿರೂಪಿಸಿದರು.






