ಸ್ಥಳೀಯ ಬುಡಕಟ್ಟು ಸಮುದಾಯಗಳು, ಸುತ್ತಲಿನ ಗ್ರಾಮಸ್ಥರು ವಿದ್ಯುತ್, ಆರೋಗ್ಯ ರಕ್ಷಣೆ ಮತ್ತು ರಸ್ತೆ ಸಂಪರ್ಕದಂತಹ ಮೂಲಭೂತ ಸೌಲಭ್ಯಗಳನ್ನು ಪಡೆಯಲು ದಶಕಗಳಿಂದ ಹೆಣಗಾಡುತ್ತಿದ್ದಾರೆ. ಆದರೆ ಅವರ ಮನವಿಗೆ ಸ್ಪಂದಿಸದ ಅರಣ್ಯ ಇಲಾಖೆ ಅಧಿಕಾರಿಗಳು, ಮಾಜಿ ಶಾಸಕನ ರೆಸಾರ್ಟ್‌ಗೆ, ತಾವೇ ಮುಂದೆ ನಿಂತು ಅರಣ್ಯ ಭೂಮಿ ವರ್ಗಾವಣೆ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕುಂಬಿ ಗ್ರಾಮದಲ್ಲಿ ಖಾಸಗಿ ರೆಸಾರ್ಟ್‌ಗೆ ರಸ್ತೆ ನಿರ್ಮಾಣ ಮತ್ತು ವಿದ್ಯುತ್ ಸರಬರಾಜಿಗೆ ಬಳಸಲು 0.0642 ಹೆಕ್ಟೇರ್ ಅರಣ್ಯ ಭೂಮಿ ವರ್ಗಾವಣೆ ಮಾಡಲು, ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ(DCF) ಶಿಫಾರಸು ಮಾಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಅರಣ್ಯ ಇಲಾಖೆಯ ಇಬ್ಬಗೆ ನೀತಿಯನ್ನು ಬಯಲು ಮಾಡಿದೆ.
ಬೆಳಗಾವಿ ಉತ್ತರದ ಮಾಜಿ ಶಾಸಕ ಅನಿಲ್ ಬೆನಕೆ ಅಭಿವೃದ್ಧಿಪಡಿಸುತ್ತಿರುವ ಖಾಸಗಿ ರೆಸಾರ್ಟ್‌ಗೆ ತೆರಳಲು ರಸ್ತೆ ಸಂಪರ್ಕ ಮತ್ತು ವಿದ್ಯುತ್ ಕಂಬಗಳನ್ನು ಅಳವಡಿಸಲು ಅರಣ್ಯ ಭೂಮಿ ವರ್ಗಾವಣೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸಿಎಫ್ ಅಧಿಕಾರಿ ಎನ್.ಇ. ಕ್ರಾಂತಿ, ಈ ಪ್ರಸ್ತಾವನೆಗೆ ಶಿಫಾರಸು ನೀಡಿದ್ದಾರೆ.
ಅಪರೂಪದ ಪ್ರಭೇದಗಳಿರುವ ಸೂಕ್ಷ್ಮ ಸಂರಕ್ಷಣಾ ವಲಯದ ವ್ಯಾಪ್ತಿಯಲ್ಲಿ ಈ ಭೂಮಿ ಬರುತ್ತದೆ. ಆದರೂ ಇಲ್ಲಿ ರಸ್ತೆ ಮತ್ತು ವಿದ್ಯುತ್ ಕಂಬಗಳನ್ನು ಅಳವಡಿಸುವುದರಿಂದ ಅರಣ್ಯ ಮತ್ತು ವನ್ಯಜೀವಿಗಳ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ ಎಂದು ಡಿಸಿಎಫ್ ಸಮರ್ಥಿಸಿಕೊಂಡಿದ್ದರು.
ಭೀಮಗಡ ವನ್ಯಜೀವಿ ಅಭಯಾರಣ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಖಾನಾಪುರ ತಾಲೂಕಿನಾದ್ಯಂತ ನಿವಾಸಿಗಳು ವಿದ್ಯುತ್, ಆರೋಗ್ಯ ರಕ್ಷಣೆ ಮತ್ತು ರಸ್ತೆ ಸಂಪರ್ಕದಂತಹ ಮೂಲಭೂತ ಸೌಲಭ್ಯಗಳನ್ನು ಪಡೆಯಲು ದಶಕಗಳಿಂದ ಹೆಣಗಾಡುತ್ತಿದ್ದಾರೆ. ಕನಕುಂಬಿ ಶ್ರೇಣಿ ವ್ಯಾಪ್ತಿಯ ಅರಣ್ಯವಾಸಿಗಳು ಮೂಲಸೌಕರ್ಯಕ್ಕಾಗಿ ಬೇಡಿಕೆಗಳನ್ನು ಸಲ್ಲಿಸಿದಾಗ, ಪರಿಸರ ಕಾಳಜಿ, ಅರಣ್ಯ ಸಂರಕ್ಷಣೆಯ ನೆಪ ಹೇಳಿ ಅಧಿಕಾರಿಗಳು ನಿವಾಸಿಗಳ ಅನುಮತಿಗಳನ್ನು ನಿರಾಕರಿಸಿದ್ದಾರೆ. ಹೀಗಿರುವಾಗ ಮಾಜಿ ಶಾಸಕನ ಖಾಸಗಿ ರೆಸಾರ್ಟ್ ರಸ್ತೆ ಸಂಪರ್ಕಕ್ಕೆ ಸಂಬಂಧಿಸಿದ ಪ್ರಸ್ತಾವನೆ ಶಿಫಾರಸು ದೊರೆತಿರುವುದರಿಂದ ಈ ಪ್ರಕರಣ ಟೀಕೆಗೆ ಗುರಿಯಾಗಿದೆ. ಅಲ್ಲದೆ ದೊಡ್ಡ ವಿವಾದವನ್ನು ಸೃಷ್ಟಿಸಿದೆ.
ಸ್ಥಳೀಯರ ಸಮಸ್ಯೆ ಮತ್ತು ಅಭಿವೃದ್ಧಿ ನಿರೀಕ್ಷೆ
ಈ ಬಗ್ಗೆ ಜಂಬೋಟಿ ಗ್ರಾಮದ ನಿವಾಸಿ ಶ್ರೀನಾಥ್ ಎಂಬುವವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಖಾನಾಪುರ ತಾಲೂಕಿನ ಅರಣ್ಯವಾಸಿಗಳು ದಶಕಗಳಿಂದಲೂ ರಸ್ತೆ, ವಿದ್ಯುತ್, ಆರೋಗ್ಯ ಮತ್ತು ಸಂಪರ್ಕ ಸೌಲಭ್ಯಗಳಿಗಾಗಿ ಹೋರಾಡುತ್ತಿದ್ದೇವೆ. ಆದರೆ ಭೀಮಗಡ ವನ್ಯಜೀವಿ ಅಭಯಾರಣ್ಯ ಸುತ್ತಮುತ್ತಲಿನ ಪ್ರದೇಶ ಸೂಕ್ಷ್ಮ ಪ್ರದೇಶವೆಂದು ಬೇಡಿಕೆಗಳನ್ನು ತಿರಸ್ಕರಿಸಲಾಗುತ್ತಿದೆ. ಆದರೆ ಖಾಸಗಿ ವಾಣಿಜ್ಯ ಯೋಜನೆಗೆ ಅನುಕೂಲ ಮಾಡಿಕೊಡುವುದು ಇಬ್ಬಗೆ ನೀತಿಯಾಗಿದೆ” ಎಂದು ಆರೋಪಿಸಿದರು.
“ಖಾನಾಪುರ ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ನಮಗೆ ಮೂಲ ಸೌಲಭ್ಯಗಳನ್ನು ಒದಗಿಸದೆ ಅರಣ್ಯ ಸಂರಕ್ಷಣೆ ಮಾಡುವುದಾಗಿ ಹೇಳುವ ಅರಣ್ಯ ಅಧಿಕಾರಿಗಳು ಖಾಸಗಿ ರೆಸಾರ್ಟ್ ಅಭಿವೃದ್ಧಿಗೆ ಸೌಲಭ್ಯಗಳನ್ನು ಒದಗಿಸುವುದು ಅಸಮಾನತೆಯನ್ನು ಹೆಚ್ಚಿಸುತ್ತದೆ. ಮೊದಲು ಇಲ್ಲಿನ ಗ್ರಾಮಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಿ, ನಂತರ ವಾಣಿಜ್ಯ ಯೋಜನೆಗಳನ್ನು ಪರಿಗಣಿಸಬೇಕು” ಎಂದು ಸ್ಥಳೀಯರು ಆಗ್ರಹಿಸಿದರು.
“ಪಶ್ಚಿಮ ಘಟ್ಟಗಳು ಜೀವ ವೈವಿಧ್ಯತೆಯ ಹಾಟ್‌ಸ್ಪಾಟ್ ಆಗಿದೆ. ಅರಣ್ಯ ಭೂಮಿ ವರ್ಗಾವಣೆಗಳು ದೀರ್ಘಕಾಲದ ಪರಿಣಾಮ ಬೀರಬಹುದು. ರಸ್ತೆ ನಿರ್ಮಾಣ ಮತ್ತು ವಿದ್ಯುತ್ ಲೈನ್‌ಗಳು ವನ್ಯಜೀವಿಗಳ ಓಡಾಟಕ್ಕೆ ಅಡ್ಡಿಯಾಗಬಹುದು, ಪರಿಸರ ಸಮತೋಲನವನ್ನು ಹಾಳುಮಾಡಬಹುದು. ಹಾಗಾಗಿ ರೆಸಾರ್ಟ್‌ಗೆ ಭೂಮಿ ವರ್ಗಾವಣೆ ಶಿಫಾರಸು ಮಾಡಿರುವುದು ಅರಣ್ಯ(ಸಂರಕ್ಷಣೆ) ಕಾಯಿದೆ, ವನ್ಯಜೀವಿ ಸಂರಕ್ಷಣೆ ಕಾಯಿದೆ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿ(NBWL) ನಿಯಮಗಳಿಗೆ ವಿರುದ್ಧವಾಗಿದೆ” ಎಂಬುದು ಪರಿಸರವಾದಿಗಳ ಅಭಿಪ್ರಾಯವಾಗಿದೆ.
ರೈತ ಸಂಘಟಕರಾದ ಪ್ರಸಾದ್ ಕುಲಕರ್ಣಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಅರಣ್ಯಗಳು ನಮ್ಮ ಜೀವನಾಡಿ; ಅವುಗಳನ್ನು ಸಂರಕ್ಷಿಸುವಾಗ ಎಲ್ಲರಿಗೂ ಸಮಾನ ನೀತಿ ಅನ್ವಯವಾಗಬೇಕು. ಈ ಪ್ರಕರಣದಲ್ಲಿ ಅಧಿಕಾರಿಗಳು, ರಾಜಕೀಯ ನಾಯಕರು ಮತ್ತು ಪರಿಸರವಾದಿಗಳು ಜವಾಬ್ದಾರಿಯುತವಾಗಿ ವರ್ತಿಸುವುದು ಅಗತ್ಯವಾಗಿದೆ. ಖಾನಾಪುರದ ಅರಣ್ಯಗಳು ಮತ್ತು ಅಲ್ಲಿ ವಾಸಿಸುವ ಜನರ ಭವಿಷ್ಯ ಸಮನ್ವಯ ನೀತಿ ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ. ಈ ಪ್ರಕರಣದ ಕುರಿತು ಚರ್ಚೆ ಮತ್ತು ತನಿಖೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗುವುದು” ಎಂದು ಹೇಳಿದರು.
“ಸಾಮಾನ್ಯ ಜನರು ಅಲ್ಲಿಯ ಪರಿಸರದಲ್ಲಿ ಓಡಾಡಲೂ ಕೂಡ ಬಿಡುವುದಿಲ್ಲ. ಆದರೆ, ಅಧಿಕಾರಸ್ಥರಿಗೆ ಎಂತಹ ಅನುಕೂಲಗಳಾದರೂ ದೊರೆಯುತ್ತವೆ. ಅನುಮತಿಗಳೂ ಸಿಗುತ್ತವೆ. ಅಲ್ಲದೆ ಅಧಿಕಾರಿಗಳ ಕುಟುಂಬಸ್ಥರೆಲ್ಲ ಕಾಡಿನೊಳಗೆ ಓಡಾಡಿಕೊಂಡು ಅಲ್ಲಿನ ಸೊಬಗನ್ನು ಅನುಭವಿಸಬಹುದು. ಆದರೆ ಸಾಮಾನ್ಯರು ಅಲ್ಲಿನ ಪರಿಸರವನ್ನು ನೋಡಬೇಕೆಂದುಕೊಂಡು ಹೋದರೆ ಅವಕಾಶ ನೀಡುವುದಿಲ್ಲ. ಅವರವರ ಅನುಕೂಲಗಳಿಗೆ ತಕ್ಕಂತೆ ರೂಲ್ಸ್‌ಗಳನ್ನು ಮಾಡಿಕೊಂಡಿದ್ದಾರೆ. ಉಳ್ಳವರು ಮತ್ತು ಇಲ್ಲದವರ ನಡುವೆ ಇಬ್ಬಗೆ ನೀತಿಯನ್ನು ಅನುಸರಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಉತ್ತಮ ಗುಣಮಟ್ಟದ ಸಂಪರ್ಕ ರಸ್ತೆ ಮತ್ತು ವಿದ್ಯುತ್ ವ್ಯವಸ್ಥೆಗೆ ಕೆಲವು ತಿಂಗಳ ಹಿಂದೆ ಶಿಫಾರಸು ಮಾಡಲಾಗಿತ್ತು. ಈಗ ಆ ಪ್ರಸ್ತಾವನೆಯನ್ನು ಕೆಲವು ಅವಲೋಕನಗಳೊಂದಿಗೆ ಸಂಬಂಧಿಸಿದವರಿಗೆ ಹಿಂದಿರುಗಿಸಲಾಗಿದೆ. ಜತೆಗೆ ವಿವರವಾದ ಸ್ಪಷ್ಟೀಕರಣಗಳನ್ನು ಕೋರಲಾಗಿದೆ. ಆದರೆ ರೆಸಾರ್ಟ್ ಮಾಲೀಕರ ರಾಜಕೀಯ ಸಂಬಂಧದ ಬಗ್ಗೆ ತನಗೆ ತಿಳಿದಿಲ್ಲ” ಎಂದು ಡಿಸಿಎಫ್ ಅಧಿಕಾರಿ ಕ್ರಾಂತಿ ಎನ್.ಇ. ಪ್ರತಿಕ್ರಿಯಿಸಿದ್ದಾರೆ.
ಖಾನಾಪುರ ತಾಲೂಕು ಪಶ್ಚಿಮ ಘಟ್ಟಗಳ ಭಾಗವಾಗಿದ್ದು, ಭೀಮಗಢ ವನ್ಯಜೀವಿ ಅಭಯಾರಣ್ಯ, ಕನಕುಂಬಿ, ಜಂಬೋಟಿ ಮುಂತಾದ ಪ್ರದೇಶಗಳು ಜೈವಿಕ ವೈವಿಧ್ಯತೆಗೆ ಹೆಸರಾದವು. ಇಲ್ಲಿ ಹುಲಿ, ಚಿರತೆ, ಆನೆಗಳಂತಹ ವನ್ಯಜೀವಿಗಳು ಬಹುಸಂಖ್ಯೆಯಲ್ಲಿವೆ. ಹಾಗಾಗಿ ಹಿಂದಿನ ವರ್ಷಗಳಲ್ಲಿ ಇಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕೆಲವು ರೆಸಾರ್ಟ್‌ಗಳನ್ನು ತೆರವುಗೊಳಿಸಲಾಗಿತ್ತು. ಆದರೂ ಈಗ ಮತ್ತೆ ರೆಸಾರ್ಟ್ ಅಭಿವೃದ್ಧಿಗೆ ಅನುಮತಿ ನೀಡಿರುವುದು ಹೆಚ್ಚಿನ ಗಮನ ಸೆಳೆದಿದೆ.
ಈ ಭೂಮಿ ಅಪರೂಪ ಮತ್ತು ಸೂಕ್ಷ್ಮ ಪ್ರಭೇದಗಳನ್ನು ಹೊಂದಿರುವ ನೈಸರ್ಗಿಕ ಆವಾಸಸ್ಥಾನವಾಗಿದೆ ಎಂಬುದು ಗೊತ್ತಿದ್ದೂ ಕೂಡ ಭೂಮಿ ವರ್ಗಾವಣೆಗೆ ಶಿಫಾರಸು ನೀಡಿರುವುದರಿಂದ ಈ ಪ್ರಕರಣವು ಬೆಂಗಳೂರಿನ ಅರಣ್ಯ ಇಲಾಖೆಯ ನೋಡಲ್ ಏಜೆನ್ಸಿಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಶಿಫಾರಸು ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಹೆಚ್ಚುವರಿ ವಿವರಣೆಗಳ ಸ್ಪಷ್ಟೀಕರಣಕ್ಕೆ ಆದೇಶಿಸಿದ್ದಾರೆ.
ಇದು ಕೇವಲ ಒಂದು ರೆಸಾರ್ಟ್ ಪ್ರಕರಣವಲ್ಲ; ಅರಣ್ಯ ಭೂಮಿ ಬಳಕೆಯಲ್ಲಿ ಸಮಾನತೆ, ಪಾರದರ್ಶಕತೆ ಮತ್ತು ಪರಿಸರ ಸಂರಕ್ಷಣೆಯ ಮೇಲಿನ ಚರ್ಚೆಯನ್ನು ಹುಟ್ಟುಹಾಕಿದೆ. ಈ ವಿವಾದವು ರಾಜ್ಯದ ಅರಣ್ಯ ಪ್ರದೇಶಗಳ ಅಭಿವೃದ್ಧಿ ಮಾದರಿಯನ್ನು ಪ್ರಶ್ನಿಸುತ್ತಿದೆ. ಜನಸಾಮಾನ್ಯರ ಮೂಲಭೂತ ಅಗತ್ಯಗಳು ಮತ್ತು ಖಾಸಗಿ ವಾಣಿಜ್ಯ ಹಿತಗಳ ನಡುವಿನ ಇಬ್ಬಗೆಯ ನೀತಿಯನ್ನು ಬಯಲು ಮಾಡುತ್ತಿದೆ.
ಇದನ್ನೂ ಓದಿದ್ದೀರಾ? ಬೆಳಗಾವಿ | ಹೆಸರು ಬೆಳೆಯತ್ತ ರೈತರ ಒಲವು: ಉತ್ತಮ ಇಳುವರಿಯ ನಿರೀಕ್ಷೆ
ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆಯು ಪಾರದರ್ಶಕ ನಿರ್ಧಾರಗಳ ಮೂಲಕ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳುವುದು, ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಎರಡೂ ಸಾಧ್ಯವಾಗುವ ಮಾರ್ಗವನ್ನು ಕಂಡುಕೊಳ್ಳುವುದು ಪ್ರಸ್ತುತ ಅಗತ್ಯವಾಗಿದೆ.




