ಬೆಳಗಾವಿ ನಗರದ ಟಿಳಕವಾಡಿ ಪ್ರದೇಶದಲ್ಲಿ ಪತಿಯಿಂದಲೇ ಗೃಹಬಂಧನಕ್ಕೊಳಗಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿದ್ದ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ‘ಅಕ್ಕ ಪಡೆ’ ತಂಡ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ.
ದಿಲ್ಲಿಯಿಂದ ಲಭಿಸಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿದರು. ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಅವರ ನಿರ್ದೇಶನದಂತೆ ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ಡಿ.ಪಿ. ನಿಂಬಾಳ್ಳರ್ ಅವರ ನೇತೃತ್ವದಲ್ಲಿ ತಂಡ ಸ್ಥಳವನ್ನು ಪತ್ತೆಹಚ್ಚಿತು.
ಬಳಿಕ ಮನೆಯೊಳಗೆ ಬಂಧನದಲ್ಲಿದ್ದ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಲಾಯಿತು. ಸಂತ್ರಸ್ತೆಯ ದೂರಿನ ಮೇರೆಗೆ ಪತಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ರಕ್ಷಿಸಲ್ಪಟ್ಟ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಬಳಿಕ ವಿಮಾನದ ಮೂಲಕ ತವರೂರಾದ ದಿಲ್ಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.



