ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪದಡಿ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಿಐಡಿ ತನಿಖೆ ವೇಗ ಪಡೆದುಕೊಂಡಿದೆ.
ಪ್ರಕರಣದ ತನಿಖೆಗೆ ಸಿಐಡಿ ಡಿಐಜಿ ಡಾ. ಭೀಮಾಶಂಕರ ಗುಳೇದ್ ಸ್ವತಃ ಅಖಾಡಕ್ಕಿಳಿದಿದ್ದು, ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿ ಜಿಲ್ಲಾಡಳಿತದ ವರದಿ ಹಾಗೂ ಪೊಲೀಸ್ ತನಿಖೆಯ ಪ್ರಗತಿ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ. ಬಳಿಕ ಸಿಐಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಆರ್‌ಬಿಐ ನಿಯಮ ಉಲ್ಲಂಘಿಸಿ ಸುಮಾರು 35 ಸಾವಿರ ಜನರಿಂದ ಸಾವಿರಾರು ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿದ ಆರೋಪದ ಹಿನ್ನೆಲೆಯಲ್ಲಿ ಶಿವಾನಂದ ನೀಲಣ್ಣವರನ್ನು ಶುಕ್ರವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಉಪವಿಭಾಗಾಧಿಕಾರಿ ಶ್ರವಣ ನಾಯಿಕ ನೇತೃತ್ವದಲ್ಲಿ ಕಂದಾಯ, ಸಹಕಾರ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಶಿವಾನಂದ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಸುದೀರ್ಘ ಪರಿಶೀಲನೆ ನಡೆಸಿದರು. ದಿನಪೂರ್ತಿ ನಡೆದ ತಪಾಸಣೆಯ ಬಳಿಕ ರಾತ್ರಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸಿಪಿ ಸತ್ಯ ನಾಯಿಕ ಹಾಗೂ ಸಿಪಿಐ ಬಿ.ಆರ್. ಗಡೇಕರ್ ನೇತೃತ್ವದಲ್ಲಿ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು.
ಬಂಧನದ ಬಳಿಕ ಶಿವಾನಂದರನ್ನು ವೈದ್ಯಕೀಯ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ಶಿವಬಸವ ನಗರದಲ್ಲಿರುವ ಕಚೇರಿಯಲ್ಲಿ ಸುಮಾರು 12 ಗಂಟೆಗಳ ಕಾಲ ನಡೆದ ಶೋಧ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ದಾಖಲೆಗಳು ಪತ್ತೆಯಾಗಿವೆ. ಎರಡು ಮೂಟೆಗಳಷ್ಟು ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದು, ಲ್ಯಾಪ್ಟಾಪ್, ಕಂಪ್ಯೂಟರ್, ಮೊಬೈಲ್, ಪೆನ್‌ಡ್ರೈವ್ ಸೇರಿದಂತೆ ಹಲವು ಡಿಜಿಟಲ್ ಸಾಧನಗಳನ್ನು ವಶಕ್ಕೆ ಪಡೆದಿದ್ದಾರೆ.
ಆನ್‌ಲೈನ್ ಹಣಕಾಸು ವ್ಯವಹಾರಗಳ ಕುರಿತಂತೆ ಅಧಿಕಾರಿಗಳು ವಿಶೇಷ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದಲ್ಲಿ ಇನ್ನಷ್ಟು ಅಂಶಗಳು ಬಹಿರಂಗವಾಗುವ ಸಾಧ್ಯತೆ ಇದೆ.



