ಬೆಳಗಾವಿ ಜಿಲ್ಲೆಯ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದ್ದು, ಜನರು ಉರಿಬಿಸಿಲಿನಿಂದ ಕೊಂಚ ನಿರಾಳತೆ ಅನುಭವಿಸಿದರು. ಬೆಳಗಾವಿ ನಗರದಲ್ಲಿ ಇಡೀ ದಿನ ಮೋಡ ಕವಿದ ವಾತಾವರಣವಿದ್ದು, ಸಂಜೆ 7 ಗಂಟೆ ಸುಮಾರಿಗೆ ಧಾರಾಕಾರ ಮಳೆ ಸುರಿಯಿತು.
ನಗರದ ಆಜಂ ನಗರ, ಪಾರ್ವತಿ ನಗರ, ವಡಗಾವಿ, ಶಹಾಪುರ, ಗೋಂದಳಿ ಗಲ್ಲಿ, ರಾಮಲಿಂಗ ಖಿಂಡ ಗಲ್ಲಿ ಸೇರಿದಂತೆ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು.
ಜಿಲ್ಲೆಯ ಸವದತ್ತಿ ಹಾಗೂ ಮುನವಳ್ಳಿ ಭಾಗಗಳಲ್ಲಿ ಗುಡುಗು-ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಹುಕ್ಕೇರಿ, ಗೋಕಾಕ ಮತ್ತು ಚಿಕ್ಕೋಡಿ ತಾಲ್ಲೂಕುಗಳಲ್ಲಿಯೂ ಉತ್ತಮ ಮಳೆಯಾಗಿದೆ.
ರಾಮದುರ್ಗ ತಾಲೂಕಿನ ಸಾಲಾಪೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರುಗಾಳಿ ಸಮೇತ ಮಳೆಯಾಗಿದ್ದು, ಕೆಲವೆಡೆ ಮರಗಳ ಕೊಂಬೆಗಳು ಮುರಿದು ಬಿದ್ದಿರುವ ಮಾಹಿತಿ ಲಭ್ಯವಾಗಿದೆ.
ಬೈಲಹೊಂಗಲ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಮಧ್ಯಾಹ್ನ ಸುಮಾರು ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದ ಜನರು ಬಿಸಿಗಾಳಿಯಿಂದ ತಾತ್ಕಾಲಿಕ ಮುಕ್ತಿ ಪಡೆದರು. ಮಳೆಯ ಬಳಿಕ ಎಲ್ಲೆಡೆ ತಂಪಿನ ವಾತಾವರಣ ನಿರ್ಮಾಣವಾಯಿತು.



