ದೇಶದ ಪ್ರಗತಿ ಕೇವಲ ಸರ್ಕಾರದ ಪ್ರಯತ್ನದಿಂದ ಸಾಧ್ಯವಲ್ಲ. ಸಮಾಜದ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರಸಭೆಯ ಪೌರಾಡಳಿತ ಆಯುಕ್ತ ಭಾಗ್ಯಶ್ರೀ ಹುಗ್ಗಿ ಹೇಳಿದರು.
ನಗರದ ದೇವಲಾಪುರ ರಸ್ತೆಯ ಕಾರ್ಮೆಲ್ ಶಾಲೆಯ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶೇಷ ಮಕ್ಕಳಿಗೆ ಶಿಕ್ಷಣ, ಪಾಲನೆ, ಪೋಷಣೆ ಹಾಗೂ ಅಗತ್ಯ ಮಾರ್ಗದರ್ಶನ ನೀಡಿ ಆತ್ಮವಿಶ್ವಾಸ ಮೂಡಿಸುವ ಮೂಲಕ ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರ್ಮೆಲ್ ಸಂಸ್ಥೆಯ ಸೇವೆ ಶ್ಲಾಘನೀಯವಾಗಿದೆ. ವಿಶೇಷ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಇಂತಹ ಸಂಸ್ಥೆಗಳ ಸೇವೆ ಮಹತ್ವದ್ದಾಗಿದೆ ಎಂದರು.
ಸ್ವಾತಂತ್ರ್ಯವೆಂದರೆ ಪ್ರತಿಯೊಬ್ಬರಿಗೂ ಸಮಾನ ಅವಕಾಶ ದೊರೆಯುವ ಸಮಾಜ ನಿರ್ಮಾಣ. ವಿಶೇಷ ಚೇತನ ಮಕ್ಕಳ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಸೂಕ್ತ ಅವಕಾಶ ಕಲ್ಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅವರ ಬದುಕಿನಲ್ಲಿ ಬೆಳಕು ಮೂಡಿಸುವ ಕಾರ್ಯವೇ ನಿಜವಾದ ದೇಶಸೇವೆ ಎಂದು ಹೇಳಿದರು.
ಶಾಲೆಯ ಸುಪೀರಿಯರ್ ಸಿಸ್ಟರ್ ಡೈನಾ ಸೆರವೊ, ಪ್ರಾಂಶುಪಾಲೆ ಸಿಸ್ಟರ್ ತೆರೆಷಾ ಶಾಂತಿ, ಸಿಸ್ಟರ್ ರೀಟಾ ಪಿಂಟು, ಸಿಸ್ಟರ್ ಲಿಲಿಯಾನ್, ಸಿಸ್ಟರ್ ರಿನೆಟ್ ಫೆರ್ನಾಂಡಿಸ್, ಸಿಸ್ಟರ್ ರಿನೆಟ್ ಬರೆಟೊ, ಸಿಸ್ಟರ್ ಲೂಸಿ, ಶಿಕ್ಷಕಿಯರಾದ ಕುಡ್ಲಿಯಾ ರೆಜಾ, ಸುಧಾ ಹಿರೇಮಠ, ನೇತ್ರಾವತಿ ಗೀರನವರ, ಕಾವೇರಿ ಹಂಪನ್ನವರ್, ಸುಕನ್ಯಾ ಸೇರಿದಂತೆ ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿಶೇಷ ಮಕ್ಕಳು ಉಪಸ್ಥಿತರಿದ್ದರು.



