ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿ ಆರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶಾಸಕ ಅಶೋಕ ಪಟ್ಟಣ ಅವರಿಗೆ ಮನವಿ ಸಲ್ಲಿಸಲಾಯಿತು.
ಭೂಮಿ, ನಿವೇಶನ, ಮನೆ ಸೇರಿದಂತೆ ಆಸ್ತಿ ನೋಂದಣಿ ಕಾರ್ಯಗಳಿಗೆ ಸಾರ್ವಜನಿಕರು ದೂರದ ರಾಮದುರ್ಗಕ್ಕೆ ತೆರಳಬೇಕಾಗಿರುವುದರಿಂದ ರೈತರು, ಬಡವರು ಹಾಗೂ ವಯೋವೃದ್ಧರಿಗೆ ಸಮಯ ಮತ್ತು ಹಣ ವ್ಯಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಟಕೋಳದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ ಮಾಡಲಾಯಿತು.
ಅದೇ ರೀತಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕಟಕೋಳದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಆರಂಭಿಸಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಸುರೇಶ ಈರಪ್ಪ ಗುಂಜೇರಿ, ರಾಜು ಬಸಿ ನಾಯಕರ, ಕಲ್ಲನಗೌಡ ನಿಂಗನಗೌಡ್ರ, ಕಿರಣ್ ನರಗುಂದ, ಶಿವರಾಜ್ ನಲವಡೆ, ರಾಜು ಹುದ್ದಾರ, ನವೀನ್ ಇಂದುಲಕರ ಸೇರಿದಂತೆ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.



