ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹಣಬೆ ಗ್ರಾಮದ ಮಹಿಳೆಯೊಬ್ಬಳ ವಿರುದ್ಧ ಗಂಭೀರ ವಂಚನೆ ಆರೋಪಗಳು ಕೇಳಿಬಂದಿವೆ. ಪ್ರೀತಿಸಿ ಮದುವೆಯಾಗಿ ಪುರುಷರಿಂದ ಲಕ್ಷಾಂತರ ರೂಪಾಯಿ ಹಣ ಲೂಟಿ ಮಾಡಿದ್ದಾಳೆ ಎಂಬ ಆರೋಪದೊಂದಿಗೆ ಮಹಿಳೆಯ ವಿರುದ್ಧ ಇಬ್ಬರು ಗಂಡಂದಿರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಆರೋಪಿತ ಮಹಿಳೆ ಸುಧಾರಾಣಿ ವಿರುದ್ಧ ಮೊದಲ ಗಂಡ ವೀರೇಗೌಡ ಹಾಗೂ ಎರಡನೇ ಗಂಡ ಅನಂತಮೂರ್ತಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಸುಧಾರಾಣಿ ಈಗಾಗಲೇ ಮೂರು ಮದುವೆ ಮಾಡಿಕೊಂಡಿದ್ದು, ಹಣವಿರುವವರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದಾಳೆ ಎಂದು ಮೊದಲ ಗಂಡ ಆರೋಪಿಸಿದ್ದಾರೆ.
ವೀರೇಗೌಡನನ್ನು ಪ್ರೀತಿಸುವುದಾಗಿ ಹೇಳಿ ಮದುವೆಯಾಗಿದ್ದ ಸುಧಾರಾಣಿ, ಮದುವೆಯ ನಂತರ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ ನಂತರ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ ಎಂಬ ಆರೋಪ ಇದೆ. ವೀರೇಗೌಡಗೆ ಕಾರು ಹಾಗೂ ಬುಲೆಟ್ ಬೈಕ್ ಓಡಿಸಲು ಬರಲಿಲ್ಲ ಎಂಬ ಕಾರಣ ಮುಂದಿಟ್ಟು ದೂರವಾಗಿದ್ದಾಳೆ ಎಂದು ಅವರು ದೂರಿದ್ದಾರೆ.
ಮೊದಲ ಗಂಡನನ್ನು ಬಿಟ್ಟ ಬಳಿಕ, ಡೆಲಿವರಿ ಬಾಯ್ ಆಗಿದ್ದ ಅನಂತಮೂರ್ತಿಗೆ ತನ್ನ ಗಂಡ ಮೃತಪಟ್ಟಿದ್ದಾನೆ ಎಂದು ಹೇಳಿ ಪ್ರೀತಿ ಬೆಳೆಸಿದ್ದಾಳೆ ಎನ್ನಲಾಗಿದೆ. ಮಹಿಳೆಯ ಮಾತು ನಂಬಿದ ಅನಂತಮೂರ್ತಿ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದಾನೆ. ಸುಮಾರು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಸಂಪರ್ಕದಲ್ಲಿದ್ದ ಸುಧಾರಾಣಿ, ಅನಂತಮೂರ್ತಿಯಿಂದ 15 ರಿಂದ 20 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
This video cannot be played in your browser. Open the video directly
ಇದನ್ನೂ ಓದಿ: ಬೆಂಗಳೂರು | ಜ.29ರಂದು ‘ಗೌರಿ ದಿನ’ ಕಾರ್ಯಕ್ರಮ; ನಟ ದುನಿಯಾ ವಿಜಯ್ ಭಾಗಿ!
ಹಣ ಪಡೆದ ನಂತರ ಇದೀಗ ಕನಕಪುರ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎನ್ನಲಾಗಿದ್ದು, ಇದರಿಂದಾಗಿ ಅನೇಕ ಜನರಿಗೆ ಸುಧಾರಾಣಿ ವಂಚನೆ ಮಾಡಿದ್ದಾಳೆ ಎಂಬ ಆರೋಪಗಳು ಮತ್ತಷ್ಟು ಬಲವಾಗಿವೆ.
ಹಣವಿರುವವರನ್ನು ಗುರುತಿಸಿ ಪ್ರೀತಿ ನಾಟಕವಾಡಿ ಹಣಕ್ಕಾಗಿ ಯಾಮಾರಿಸುತ್ತಿದ್ದಾಳೆ ಎಂದು ಮೊದಲ ಗಂಡ ವೀರೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಗಂಡಂದಿರು ಮಹಿಳೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.





