ನಾಡಿನ ಏಕೀಕರಣದ ಆಶಯವನ್ನು ಸಾರುವ ಉದ್ದೇಶದಿಂದ ‘ನಾವು ದ್ರಾವಿಡ ಕನ್ನಡಿಗರು’ ಚಳುವಳಿಯ ವತಿಯಿಂದ ನವೆಂಬರ್ 29ರಂದು ಆಯೋಜಿಸಿರುವ ಐತಿಹಾಸಿಕ ‘ಕನ್ನಡದೂರು ಜಾತ್ರೆ’ಗೆ ಆಗಮಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ನೀಡಲಾಗಿದ್ದು, ತುಂಗಭದ್ರಾ ನದಿ ತೀರದಲ್ಲಿ ತ್ರಿವೇಣಿ ಸಂಗಮ ಮಾದರಿ ಸೇತುವೆ ಹಾಗೂ ವಿಶ್ವದ ಅತಿ ಎತ್ತರದ ಕನ್ನಡ ಧ್ವಜಸ್ತಂಭ ನಿರ್ಮಿಸುವಂತೆ ಮನವಿ ಸಲ್ಲಿಸಲಾಗಿದೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳಿಗೆ ಆಹ್ವಾನ ಪತ್ರ ಹಾಗೂ ವಿಶೇಷ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಜಾತ್ರೆಯ ಉದ್ದೇಶವನ್ನು ತಿಳಿದು ಸಂತಸ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಕುರಿತು ಮಾತನಾಡಿದ ‘ನಾವು ದ್ರಾವಿಡ ಕನ್ನಡಿಗರು’ ಚಳುವಳಿಯ ಮುಂದಾಳು ಅಭಿ ಒಕ್ಕಲಿಗ, ನವೆಂಬರ್ 29ರ ಭಾನುವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತುಂಗಭದ್ರಾ ನದಿ ತೀರದಲ್ಲಿ ಕನ್ನಡದೂರು ಜಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಕರ್ನಾಟಕದ ಮೂರು ಪ್ರಮುಖ ಪ್ರಾಂತ್ಯಗಳಾದ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಹಾಗೂ ಹಳೇ ಮೈಸೂರು ಪ್ರಾಂತ್ಯಗಳು ಸಂಗಮಿಸುವ ಪ್ರದೇಶದಲ್ಲಿ ಈ ಜಾತ್ರೆ ಆಯೋಜಿಸಲಾಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ವಟ್ಲಹಳ್ಳಿ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹಿರೇಬಿದರಿ ಹಾಗೂ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಚಿಕ್ಕಬಿದರಿ ಗ್ರಾಮಗಳ ಸಮ್ಮಿಲನದ ನೆಲೆಯಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

‘ಬೆಂಗಳೂರು ಉಳಿಯಲಿ, ಕನ್ನಡದೂರು ಬೆಳೆಯಲಿ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುವ ಜಾತ್ರೆಯು ನಾಡಿನ ಮೂರು ಭಾಗಗಳ ಜನರನ್ನು ಭಾವನಾತ್ಮಕವಾಗಿ ಬೆಸೆಯುವ ಜೊತೆಗೆ ಪ್ರಾದೇಶಿಕ ಅಸಮಾನತೆ ನಿವಾರಣೆ ಮತ್ತು ಸಮಗ್ರ ಕರ್ನಾಟಕದ ಅಭಿವೃದ್ಧಿಯ ಆಶಯವನ್ನು ಬಿತ್ತರಿಸಲಿದೆ ಎಂದು ಹೇಳಿದರು.
ಈ ವಿಶೇಷ ಲೇಖನ ಓದಿದ್ದೀರಾ? ಗಾಂಧೀಜಿ ತತ್ವಗಳ ಪ್ರಸ್ತುತತೆ: ಸಮಾನತೆಯ ಸಮಾಜಕ್ಕೆ ಶ್ರಮದ ಘನತೆಯೇ ಅಡಿಪಾಯ
ಕರ್ನಾಟಕದ ಮೂರು ಪ್ರಾಂತ್ಯಗಳನ್ನು ಬೆಸೆಯುವ ಉದ್ದೇಶದಿಂದ ತುಂಗಭದ್ರಾ ನದಿಗೆ ಮೂರು ದಿಕ್ಕುಗಳನ್ನು ಸಂಪರ್ಕಿಸುವ ತ್ರಿವೇಣಿ ಸಂಗಮ ಮಾದರಿಯ ವಿಶೇಷ ಸೇತುವೆ ನಿರ್ಮಿಸಬೇಕು. ಈ ಸೇತುವೆಯ ಮೇಲೆ ವಿಶ್ವದ ಅತಿ ಎತ್ತರದ ಕನ್ನಡ ಧ್ವಜಸ್ತಂಭ ಸ್ಥಾಪಿಸಬೇಕು. ಆ ಮೂಲಕ ಕನ್ನಡದೂರು ಪ್ರದೇಶವನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂಬ ಬೇಡಿಕೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಈ ವಿಶೇಷ ಲೇಖನ ಓದಿದ್ದೀರಾ? ಕಾಲಜ್ಞಾನ ಸಾರಿದ ಮಂಟೇದಲಿಂಗಯ್ಯ’: ನೀಲಗಾರರ ಸ್ವರವಚನಗಳಲ್ಲಿ ಅಡಗಿರುವ ಜನಪದ ತತ್ವ
ಮುಖ್ಯಮಂತ್ರಿಗಳು ಜಾತ್ರೆಗೆ ಖುದ್ದಾಗಿ ಆಗಮಿಸಿ ಉದ್ಘಾಟಿಸುವ ಮೂಲಕ ಈ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಚಳುವಳಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಈ ವಿಶೇಷ ಲೇಖನ ಓದಿದ್ದೀರಾ? ಹಳೇ ಮೈಸೂರು | ಕಲ್ಯಾಣದಿಂದ ಬೊಪ್ಪೇಗೌಡನಪುರದವರೆಗೆ: ಜನಪದ ಕಾವ್ಯದ ಬೆಳಕಿನಲ್ಲಿ ಮಂಟೇಸ್ವಾಮಿ
ಈ ಸಂದರ್ಭದಲ್ಲಿ ಚಳುವಳಿಯ ಪ್ರಮುಖರಾದ ಅಭಿ ಒಕ್ಕಲಿಗ, ಕನಕಪುರ ವಿಶ್ವಣ್ಣ ದೂಂತೂರು, ಅಭಿ ರತ್ನ, ಸಚಿನ್, ಚೇತನ್, ಸಿದ್ದೇಶ್, ಎಂ. ಬೆಟ್ಟಪ್ಪ, ವೀರಪ್ಪ, ಉ. ಕರಿಬಸಪ್ಪ ಸೇರಿದಂತೆ ಹಲವರು ಇದ್ದರು.



