ಭೀಮರಾಜ್ ಸೇನಾ ಸಂಘಟನೆಯ ವತಿಯಿಂದ ಸಮಾಜಮುಖಿ ಕಾರ್ಯದ ಭಾಗವಾಗಿ ಗ್ರಾಮದ ಆರ್ಥಿಕವಾಗಿ ಹಿಂದುಳಿದ ಹಾಗೂ ನಿರ್ಗತಿಕ ವೃದ್ಧರಿಗೆ ಪ್ರತಿ ತಿಂಗಳು ಪಿಂಚಣಿ ವಿತರಿಸುವ ಮಹತ್ವದ ಯೋಜನೆಯನ್ನು ಆರಂಭಿಸಲಾಗಿದ್ದು,ಈಚೆಗೆ ಭಾಲ್ಕಿ ತಾಲೂಕಿನ ಡೊಣಗಾಪುರ ಗ್ರಾಮದಲ್ಲಿ ಫಲಾನುಭವಿಗಳಿಗೆ ಪಿಂಚಣಿ ಮೊತ್ತ ವಿತರಿಸಲಾಯಿತು.
ಸಮಾಜದಲ್ಲಿ ವೃದ್ಧರು ಗೌರವ, ಘನತೆ ಹಾಗೂ ಸ್ವಾಭಿಮಾನದಿಂದ ಬದುಕು ನಡೆಸಲು ಸಹಕಾರಿಯಾಗಬೇಕೆಂಬ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಪ್ರತಿ ತಿಂಗಳು ಆಯ್ಕೆಯಾದ ವೃದ್ಧರಿಗೆ ಮಾಸಿಕ 500 ರೂ. ಪಿಂಚಣಿಯನ್ನು ನೀಡಲಾಗುವುದು. ಈ ಕಾರ್ಯಕ್ರಮವು ಕೇವಲ ಒಂದು ದಿನದ ಸೇವಾ ಕಾರ್ಯವಾಗಿರದೆ, ನಿರಂತರವಾಗಿ ಪ್ರತಿ ತಿಂಗಳು ನಡೆಸಲಾಗುವುದು ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಹರ್ಷಿತ ದಾಂಡೇಕರ ತಿಳಿಸಿದ್ದಾರೆ.
ಭೀಮರಾಜ್ ಸೇನಾ ಸಂಘಟನೆಯು ಶಿಕ್ಷಣ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವ ಮುಖಾಂತರ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸದಾ ಶ್ರಮಿಸುತ್ತಿದ್ದು, ವೃದ್ಧರ ಪಿಂಚಣಿ ಯೋಜನೆಯು ಸಹ ಅದರ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದರು.

ಈ ಸಮಾಜಮುಖಿ ಸಹಾಯಹಸ್ತ ಕಂಡು ಗ್ರಾಮದ ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರು ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಆಶಿಸಿದ್ದಾರೆ. ಗ್ರಾಮದ ನಿರ್ಮಲಾ, ರೇವಮ್ಮ ಹಾಗೂ ಗೀತಾಬಾಯಿ ಎಂಬುವವರಿಗೆ ಪಿಂಚಣಿ ಮೊತ್ತ ವಿತರಿಸಿದರು.
ಇದನ್ನೂ ಓದಿ : ಕನೇರಿ ಶ್ರೀ ಬಸವಕಲ್ಯಾಣ ಪ್ರವೇಶಕ್ಕೆ ತಡೆ ನೀಡಿ : ಸಚಿವ ಈಶ್ವರ ಖಂಡ್ರೆಗೆ ಮನವಿ ಸಲ್ಲಿಸಿದ ಮಠಾಧೀಶರ ಒಕ್ಕೂಟ
ಈ ಸಂಧರ್ಭದಲ್ಲಿ ಭೀಮರಾಜ್ ಸೇನಾ ಸಂಘಟನೆಯ ಡೊಣಗಾಪುರ ಗ್ರಾಮ ಅಧ್ಯಕ್ಷ ಚಂದ್ರಕಾಂತ್ ಮೋರೆ, ಲಕ್ಷ್ಮಣ್, ಧೋಂಡಿಬಾ ನಾರೇ, ಶಿವಾಜಿ, ರಂಜಿತ್, ವಿಶಾಲ, ಕಪಿಲ್ ಧೋಂಡಿಬಾ ಗಾಯಕವಾಡ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.




