ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಕುರಿಗಾಹಿ ಹಾಗೂ 45 ಮೇಕೆ, ಕುರಿಗಳು ಸಜೀವ ದಹನವಾದ ಔರಾದ್ ತಾಲ್ಲೂಕಿನ ಬೋರಾಳ್ ಗ್ರಾಮಕ್ಕೆ ರಾಜ್ಯ ಕುರಿ ಮಹಾ ಮಂಡಳದ ನಿರ್ದೇಶಕ ಪಂಡಿತರಾವ್ ಚಿದ್ರಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಮಂಗಳವಾರ ಸಂಜೆ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಕೊಟ್ಟಿಗೆಯಲ್ಲಿ ಮಲಗಿದ್ದ ಕುರಿಗಾಹಿ ಶಂಕರ ಈರಗೊಂಡ ಮೇತ್ರೆ (62) ಹಾಗೂ ಅವರ 45 ಕುರಿಗಳು ಸಜೀವ ದಹನವಾಗಿವೆ. ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಬೆಂಕಿ ತಗುಲಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆಯಿಂದ ಶಂಕರ ಅವರ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದರು.
ಘಟನೆಯಲ್ಲಿ ಮೃತಪಟ್ಟ ಕುರಿಗಾಹಿಗೆ ರಾಜ್ಯ ಸರ್ಕಾರದಿಂದ ₹10 ಲಕ್ಷ ಪರಿಹಾರ ಕಲ್ಪಿಸಬೇಕು. ಸಂಬಂಧಪಟ್ಟ ಇಲಾಖೆಯವರು ಸತ್ತ ಕುರಿಗಳಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಹೇಳಿದರು.
ಇದನ್ನೂ ಓದಿ : ಬೀದರ್ ಜಿಲ್ಲೆಯ ಅರ್ಧದಷ್ಟು RO ಪ್ಲಾಂಟ್‌ಗಳಲ್ಲಿ ನೀರೇ ಇಲ್ಲ; ಕೋಟ್ಯಂತರ ಅನುದಾನ ಹರಿದದ್ದು ಎಲ್ಲಿಗೆ?
ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ನರಸಪ್ಪ, ಜೆಸ್ಕಾಂ ಎಇಇ ರಮೇಶ ಪಾಟೀಲ, ಕುರಿ ನಿಗಮದ ಅಧಿಕಾರಿ ಯೋಗೇಶ್ ಕುಲಕರ್ಣಿ, ಔರಾದ್ ತಹಶೀಲ್ದಾರ್ ಮಹೇಶ್ ಪಾಟೀಲ, ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಔರಾದ್ ತಾಲ್ಲೂಕು ಸಹಾಯಕ ನಿರ್ದೇಶಕ ಖುರೇಶಿ ಇದ್ದರು.




