ಐದು ದಿನಗಳ ಬ್ಯಾಂಕಿಂಗ್ ಕೆಲಸದ ವಾರ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಒಂದು ದಿನದ ಮುಷ್ಕರ ಹಮ್ಮಿಕೊಂಡ ಪ್ರಯುಕ್ತ ಬೀದರ್‌ನಲ್ಲಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದರು.
ಬೀದರ ನಗರದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂದಿ ಹಾಗೂ ಅಧಿಕಾರಿಗಳು ನಗರದ ಶಿವಾಜಿ ವೃತ್ತದಲ್ಲಿರುವ ಎಸ್‌ಬಿಐ ಬ್ಯಾಂಕ್ ಸಮೀಪ ಜಮಾಯಿಸಿದರು. ಬ್ಯಾಂಕ್‌ದಿಂದ ಆರಂಭವಾದ ಮೆರವಣಿಗೆ ಹರಳಯ್ಯ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಭಗತ್‌ಸಿಂಗ್ ವೃತ್ತದ ಮೂಲಕ ಸಾಗಿ ಎಸ್‌ಬಿಐ ಬ್ಯಾಂಕ್ ಸಮೀಪ ಮುಕ್ತಾಯಗೊಂಡಿತು.
ಸಂಘದ ಜಿಲ್ಲಾ ಘಟಕದ ಸಂಚಾಲಕ ರಮೇಶ ಶಿಂದೆ ಮಾತನಾಡಿ, “ಬ್ಯಾಂಕ್ ಸಿಬ್ಬಂದಿ ಮತ್ತು ಅಧಿಕಾರಿಗಳ ಬಹುದಿನಗಳ ಪ್ರಮುಖ ಬೇಡಿಕೆಯಾಗಿರುವ ಐದು ದಿನಗಳ ಬ್ಯಾಂಕಿಂಗ್ ಕೆಲಸದ ವಾರವನ್ನು ಯಾವುದೇ ವಿಳಂಬವಿಲ್ಲದೆ ಜಾರಿಗೆ ತರಬೇಕು. ಹೊಸದಾಗಿ ಜಾರಿಗೆ ತಂದಿರುವ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ ಯೋಜನೆಯನ್ನು ಹಿಂಪಡೆಯಬೇಕು ಹಾಗೂ ಬ್ಯಾಂಕ್ ಸಿಬ್ಬಂದಿ ಮತ್ತು ಅಧಿಕಾರಿಗಳ ಹಕ್ಕುಗಳನ್ನು ರಕ್ಷಿಸಬೇಕು” ಎಂದು ಆಗ್ರಹಿಸಿದರು.
“ವಾರದಲ್ಲಿ ಆರು ದಿನಗಳ ಕೆಲಸದ ಬದಲಾಗಿ ಐದು ದಿನಗಳ ಕೆಲಸದ ವಾರ ಜಾರಿಯಾದರೆ ಸಿಬ್ಬಂದಿಗೆ ಉತ್ತಮ ಕೆಲಸ–ಜೀವನ ಸಮತೋಲನ ದೊರೆಯುವುದರ ಜೊತೆಗೆ ಬ್ಯಾಂಕಿಂಗ್ ಕ್ಷೇತ್ರದ ಕಾರ್ಯಕ್ಷಮತೆಯೂ ಹೆಚ್ಚಲಿದೆ. ಹೊಸದಾಗಿ ಜಾರಿಗೆ ತಂದಿರುವ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ ಯೋಜನೆಯು ಸಿಬ್ಬಂದಿಯಲ್ಲಿ ತಾರತಮ್ಯಕ್ಕೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಅದನ್ನು ಹಿಂಪಡೆಯಬೇಕು. ಬ್ಯಾಂಕ್ ಸಿಬ್ಬಂದಿ ಮತ್ತು ಅಧಿಕಾರಿಗಳ ನಡುವೆ ವಿಭಜನೆ ಉಂಟುಮಾಡುವ ಏಕಪಕ್ಷೀಯ ಕ್ರಮಗಳನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಉದ್ಯಮ ಮಟ್ಟದ ಸಾಮೂಹಿಕ ಮಾತುಕತೆಯ ವ್ಯವಸ್ಥೆಯನ್ನು ರಕ್ಷಿಸುವುದರ ಜೊತೆಗೆ ಟ್ರೇಡ್ ಯೂನಿಯನ್ ಹಕ್ಕುಗಳಿಗೆ ಗೌರವ ನೀಡಬೇಕು. ಬ್ಯಾಂಕ್ ಆಡಳಿತ ಮತ್ತು ಸಿಬ್ಬಂದಿ ಸಂಘಟನೆಗಳ ನಡುವೆ ಅರ್ಥಪೂರ್ಣ ಸಂವಾದ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಹುಲಸೂರ ತಾಲೂಕು ಬರಪೀಡಿತ ಘೋಷಣೆಗೆ ಆಗ್ರಹ : ಮೂರನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ
ಮುಷ್ಕರದಲ್ಲಿ ಪ್ರಮುಖರಾದ ಶಶಿಕಾಂತ ಕಾಳೆ, ಪರಮೇಶ ರೆಡ್ಡಿ, ವಿಷ್ಣುಕಾಂತ ಫತ್ತೇಪೂರೆ, ಚಂದ್ರಶೇಖರ ಖನಗೊಂಡ, ಸಂತೋಷ ಫರ್ಮಾ, ವಿಶ್ವಭೂಷಣ, ಪವನ ಪೂಜಾರಿ, ಚಂದ್ರಶೇಖರ, ಸಚಿನ್, ಅಶೋಕ ಮಾಲಿ ಬಿರಾದಾರ, ಪ್ರಭಾಕರ, ಸದಾನಂದ, ಪ್ರಶಾಂತ, ದೀಪಿಕಾ ಮೋರೆ, ಸುನೀತಾ ಬಚ್ಚಾ, ಡಯಾನಾ, ಸಂಗೀತಾ, ಬಾಶಾ, ರಾಘವೇಂದ್ರ, ಅನಿತಾ ಬಸವರಾಜ ಮೇಟ್ಟಿ, ದಶರಥ, ಸೋಮನಾಥ ನೌಬಾದರೆ, ಸುಮೀತ, ಪರಮೇಶ್ವರ, ಸೀತಾ, ವಿಶ್ವಾ ಜಾಧವರ, ಸೂರ್ಯಪ್ರಕಾಶ, ಶ್ರೀನಿವಾಸ, ಸುನೀಲಕುಮಾರ, ಸಂತೋಷಕುಮಾರ, ನಾರಾಯಣ ದೇಶಪಾಂಡೆ, ಪವನ ಕಾಂಬಳೆ, ಶಾಮ, ಸುರೇಶ ಬಾಬು, ಕಿರಣ ಕುಂದೆ ಸೇರಿದಂತೆ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂದಿ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.





