ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರ ಹೆಸರಿನಲ್ಲಿ ಥೈಲ್ಯಾಂಡ್ ದೇಶದ ಕಂಟ್ರಿ ಕೋಡ್ (+66) ಹೊಂದಿರುವ ನಕಲಿ ವಾಟ್ಸಾಪ್ ಖಾತೆ ತೆರೆದು ಸೈಬರ್ ವಂಚಕರು ನಡೆಸುತ್ತಿದ್ದ ಮೋಸದ ಜಾಲಕ್ಕೆ ಜಿಲ್ಲೆಯ ಅಧಿಕಾರಿಯೊಬ್ಬರು ಮೋಸ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಸಿಲುಕಿದ್ದು, ಜಿಲ್ಲಾಧಿಕಾರಿಯವರ ಹೆಸರಿನಲ್ಲಿ ಬಂದ ವಾಟ್ಸಾಪ್ ಸಂದೇಶದಲ್ಲಿ ತುರ್ತು ಬ್ಯಾಂಕಿಂಗ್ ಸಮಸ್ಯೆ ಉಂಟಾಗಿದೆ ಎಂದು ಹೇಳಿ ಹಣ ಸಹಾಯ ಮಾಡುವಂತೆ ಕೇಳಲಾಗಿದೆ. ಜಿಲ್ಲಾಧಿಕಾರಿಯವರ ಅಧಿಕೃತ ಭಾವಚಿತ್ರ ಮತ್ತು ಹುದ್ದೆಯ ವಿವರಗಳನ್ನು ನೋಡಿ ನಿಜವಾಗಿಯೂ ಅವರಿಂದಲೇ ಸಂದೇಶ ಬಂದಿದೆ ಎಂದು ನಂಬಿದ ಉಪ ನಿರ್ದೇಶಕ ಅವರು, ವಂಚಕ ಸೂಚಿಸಿದ ಖಾತೆಗೆ ₹50,000 ಅನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ್ದಾರೆ.
ಮತ್ತೊಮ್ಮೆ ಹಣ ಕೇಳುತ್ತಿದ್ದಂತೆ ಅನುಮಾನ:
ಮೊದಲ ಮೊತ್ತ ವರ್ಗಾವಣೆಯಾದ ಬಳಿಕ ವಂಚಕ ಮತ್ತೊಮ್ಮೆ ₹50,000 ಕಳುಹಿಸುವಂತೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ಅನುಮಾನಗೊಂಡ ಉಪ ನಿರ್ದೇಶಕ ಅವರು ಜಿಲ್ಲಾಧಿಕಾರಿಯವರ ಆಪ್ತ ಕಾರ್ಯದರ್ಶಿ (PA) ಅವರನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ಆ ವೇಳೆ ಜಿಲ್ಲಾಧಿಕಾರಿಯವರ ಕಚೇರಿಯಿಂದ ಯಾವುದೇ ಹಣದ ಬೇಡಿಕೆ ಮಾಡಲಾಗಿಲ್ಲ ಎಂಬುದು ತಿಳಿದುಬಂದಿದ್ದು, ಇದೊಂದು ಸೈಬರ್ ಇಂಪರ್ಸನೇಷನ್ ವಂಚನೆ ಎಂಬ ಸತ್ಯ ಬಹಿರಂಗವಾಗಿದೆ.
ಉಪ ನಿರ್ದೇಶಕ ಅವರು ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಣ ವರ್ಗಾವಣೆಯಾದ ಖಾತೆಯ ವಿವರಗಳು, ವಾಟ್ಸಾಪ್ ನಂಬರ್ ಮತ್ತು ಸಂಬಂಧಿತ ಡಿಜಿಟಲ್ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ಆರಂಭಿಸಿದ್ದಾರೆ. ಜಿಲ್ಲಾಧಿಕಾರಿಯವರ ಹೆಸರಿನಲ್ಲಿ ವಿದೇಶಿ ನಂಬರ್ ಬಳಸಿ ನಕಲಿ ಖಾತೆ ಸೃಷ್ಟಿಸಿರುವ ಕುರಿತು ಸಾರ್ವಜನಿಕರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿತ್ತು. ಆದರೂ ಅಧಿಕಾರಿಯೊಬ್ಬರೇ ವಂಚನೆಗೆ ಒಳಗಾಗಿರುವುದು ಸೈಬರ್ ಖದೀಮರು ಬಳಸುತ್ತಿರುವ ತಂತ್ರ ಎಷ್ಟು ನಂಬಿಸುವಂತಿದೆ ಎಂಬುದನ್ನು ತೋರಿಸಿದೆ. ಸೈಬರ್ ಪೊಲೀಸರು ಸಾರ್ವಜನಿಕರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಕೆಳಕಂಡ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ:
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಅರಣ್ಯ ಭೂಮಿ ಸಮಸ್ಯೆಗೆ ಶಾಶ್ವತ ಪರಿಹಾರ; ಹೆಚ್. ಡಿ ತಮ್ಮಯ್ಯ
* ವಿದೇಶಿ ನಂಬರ್‌ಗಳಿಂದ ಬಂದ ಅಧಿಕಾರಿಗಳ ಹೆಸರಿನ ಸಂದೇಶಗಳನ್ನು ತಕ್ಷಣ ನಂಬಬೇಡಿ.
* ಹಣದ ಬೇಡಿಕೆ ಬಂದರೆ ನೇರವಾಗಿ ದೂರವಾಣಿ ಮೂಲಕ ದೃಢಪಡಿಸಿಕೊಳ್ಳಿ.
* ಯಾವುದೇ ಕಾರಣಕ್ಕೂ ಬ್ಯಾಂಕ್ ವಿವರ, ಓಟಿಪಿ ಅಥವಾ ಆನ್‌ಲೈನ್ ವರ್ಗಾವಣೆ ಮಾಡಬೇಡಿ.
* ಅನುಮಾನಾಸ್ಪದ ವಾಟ್ಸಾಪ್ ಖಾತೆಗಳನ್ನು ಬ್ಲಾಕ್ ಮತ್ತು ರಿಪೋರ್ಟ್ ಮಾಡಿ.
* ವಂಚನೆ ನಡೆದರೆ ತಕ್ಷಣ 1930 ರಾಷ್ಟ್ರೀಯ ಸೈಬರ್ ಸಹಾಯವಾಣಿ ಅಥವಾ ಸಮೀಪದ ಸೈಬರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ.




