ಸ್ಥಳೀಯ ಸರ್ಕಾರಗಳು ಜನರ ನಂಬಿಕೆಯನ್ನು ಗಳಿಸುವುದು ಮತ್ತು ನ್ಯಾಯಯುತ ಚುನಾವಣೆ ನಡೆಸುವುದು ಪ್ರಜಾಪ್ರಭುತ್ವದ ಯಶಸ್ಸಿಗೆ ಅನಿವಾರ್ಯ. ಈ ವಿವಾದವನ್ನು ಶೀಘ್ರವಾಗಿ, ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಪರಿಹರಿಸುವುದರ ಮೂಲಕ ಮಾತ್ರ ತುಮಕೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳು ನಿಜವಾದ ಪ್ರಜಾಪ್ರಭುತ್ವದ ಆಚರಣೆಯಾಗಬಲ್ಲವು. ಸರ್ಕಾರ ಮತ್ತು ಆಡಳಿತವು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ತುಮಕೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಮೀಸಲಾತಿ ನಿಗದಿ ಪ್ರಕ್ರಿಯೆ ವಿವಾದದ ಕೇಂದ್ರಬಿಂದುವಾಗಿದೆ. ಸ್ಥಳೀಯ ಸರ್ಕಾರಗಳಿಗಾಗಿ ಮೀಸಲಾತಿ ನಿಗದಿಯಲ್ಲಿ ನಿಯಮ ಉಲ್ಲಂಘನೆ, ಪಾರದರ್ಶಕತೆಯ ಕೊರತೆ ಆರೋಪ ಕೇಳಿಬರುತ್ತಿದ್ದು, ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿವೆ.
ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಜನಸಂಖ್ಯೆಯ ಆಧಾರದ ಬದಲಾಗಿ ಪ್ರಭಾವ ಮತ್ತು ಹಣದ ಬಲದಿಂದ ಮೀಸಲಾತಿ ನಿಗದಿಪಡಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಸಾರ್ವಜನಿಕರು ಸಲ್ಲಿಸಿದ ಆಕ್ಷೇಪಣೆಗಳು ಮತ್ತು ದಾಖಲೆಗಳನ್ನು ಜಿಲ್ಲಾಡಳಿತ ಸಮರ್ಪಕವಾಗಿ ಪರಿಶೀಲಿಸದೆ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.
ತುಮಕೂರು ತಾಲೂಕಿನ ಒಂದು ಗ್ರಾಮ ಪಂಚಾಯಿತಿಯಲ್ಲಿ ಕಳೆದ ಮೂರು ಅವಧಿಗಳಲ್ಲೂ ಹಾಗೂ ಈ ಬಾರಿ ಪ್ರಕಟಿಸಿರುವ ಮೀಸಲಾತಿಯಲ್ಲೂ ಒಂದೇ ಸಮುದಾಯಕ್ಕೆ ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ. ಸುರುಳಿ(ರೋಟೇಷನ್) ಪದ್ಧತಿ ಅನುಸರಿಸದೆ ಒಂದೇ ವರ್ಗಕ್ಕೆ ನಿರಂತರವಾಗಿ ಮೀಸಲಾತಿ ನೀಡಿರುವುದು ಪಂಚಾಯತ್ ರಾಜ್ ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ತುಮಕೂರು ನಗರದ ಹೊರವಲಯದ ಒಂದು ಗ್ರಾಮ ಪಂಚಾಯಿತಿಯ ಮೀಸಲಾತಿ ಪಟ್ಟಿಯನ್ನು ರಾಜಕೀಯ ಮುಖಂಡರೊಬ್ಬರು ಅಧಿಕೃತ ಪ್ರಕಟಣೆಗೆ ಸುಮಾರು ಒಂದೂವರೆ ತಿಂಗಳ ಹಿಂದೆಯೇ ತಿಳಿಸಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿವೆ. ಬಳಿಕ ಅದೇ ಮಾದರಿಯಲ್ಲಿ ಮೀಸಲಾತಿ ಪ್ರಕಟವಾಗಿರುವುದು ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಅನುಮಾನ ಹುಟ್ಟಿಸಿದೆ.
ತುರುವೇಕೆರೆ ತಾಲೂಕಿನ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮೀಸಲಾತಿ ನಿಗದಿಯಲ್ಲಿ ಅಕ್ರಮ ನಡೆದಿದೆ ಎಂದು ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಕೊಟ್ಟೂರನ ಕೊಟ್ಟಿಗೆ ಗ್ರಾಮದ ಐದು ಸ್ಥಾನಗಳಲ್ಲಿ ಹಿಂದುಳಿದ ವರ್ಗ ‘ಬ’ ಮಹಿಳೆ, ಹಿಂದುಳಿದ ವರ್ಗ ‘ಅ’ ಮಹಿಳೆ, ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಪಡಿಸಲಾಗಿದ್ದರೆ, ಸೂಳೇಕೆರೆಯಲ್ಲಿ ಹಿಂದಿನ ಹಿಂದುಳಿದ ವರ್ಗ ‘ಅ’ ಮೀಸಲಾತಿಯನ್ನು ಸಾಮಾನ್ಯ ವರ್ಗಕ್ಕೆ ಬದಲಾಯಿಸಲಾಗಿದೆ. ಇದು ಸ್ಥಳೀಯ ಜನಸಂಖ್ಯೆಯ ಅನುಪಾತಕ್ಕೆ ವಿರುದ್ಧವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮೀಸಲಾತಿ ಕರಡು ಪಟ್ಟಿ ಪ್ರಕಟವಾದ ಬಳಿಕ ಸಾರ್ವಜನಿಕರಿಂದ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡಿ ಅಂತಿಮ ಪಟ್ಟಿ ಪ್ರಕಟಿಸಬೇಕು ಎಂಬುದು ನಿಯಮ. ಆದರೆ, ಹಲವು ದೂರುಗಳು ಸಲ್ಲಿಕೆಯಾಗಿದ್ದರೂ ಯಾವುದೇ ಬದಲಾವಣೆ ಮಾಡದೆ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ ಗ್ರಾಮ ಪಂಚಾಯಿತಿ ಮೀಸಲಾತಿ ನಿಗದಿಯಲ್ಲಿ ಈ ಪ್ರಮುಖ ನಿಯಮಗಳನ್ನು ಪಾಲಿಸಬೇಕು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಬೇಕು.
ಹಿಂದಿನ ಚುನಾವಣೆಯಲ್ಲಿ ಮೀಸಲಾಗಿದ್ದ ವಾರ್ಡ್‌ಗಳನ್ನು ಮುಂದಿನ ಚುನಾವಣೆಯಲ್ಲಿ ಬದಲಾಯಿಸಿ ಇತರ ಅರ್ಹ ವರ್ಗಗಳಿಗೆ ಅವಕಾಶ ಕಲ್ಪಿಸಬೇಕು. ಒಟ್ಟು ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಕಡ್ಡಾಯವಾಗಿದ್ದು, ಅದನ್ನು ಸಮತೋಲನದಿಂದ ಹಂಚಿಕೆ ಮಾಡಬೇಕು.
ಗ್ರಾಮ ಪಂಚಾಯಿತಿಯೇ ಸ್ಥಳೀಯ ಸ್ವರಾಜ್ಯದ ಮೂಲ ಘಟಕ. ಮೀಸಲಾತಿ ನಿಗದಿಯಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಪ್ರಜಾಪ್ರಭುತ್ವದ ಮೇಲಿನ ಜನರ ವಿಶ್ವಾಸ ಕುಸಿಯುವ ಸಾಧ್ಯತೆ ಇದೆ. ಅರ್ಹ ಸಮುದಾಯಗಳಿಗೆ ಸಿಗಬೇಕಾದ ರಾಜಕೀಯ ಅವಕಾಶ ಕಸಿದುಕೊಳ್ಳಲಾಗುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ.
ಕಾಂಗ್ರೆಸ್ ಮುಖಂಡ ಹೆತ್ತೇನಹಳ್ಳಿ ಮಂಜುನಾಥ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮೀಸಲು ನಿಗದಿ ಪ್ರಕ್ರಿಯೆಯಲ್ಲಿ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪದಿಂದ ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಕ್ಷೇತ್ರಗಳನ್ನು ಮೀಸಲಾತಿಗೆ ಒಳಪಡಿಸುವ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ವ್ಯಕ್ತವಾಗುತ್ತಿದೆ. ಆದ್ದರಿಂದ ಈಗಾಗಲೇ ಪ್ರಕಟಿಸಿರುವ ಮೀಸಲು ಪಟ್ಟಿಯನ್ನು ಪುನರ್‌ಪರಿಶೀಲಿಸಿ, ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದಂತೆ ಸಂಪೂರ್ಣ ಪಾರದರ್ಶಕ ಹಾಗೂ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಹೊಸ ಮೀಸಲು ಪಟ್ಟಿಯನ್ನು ಪ್ರಕಟಿಸಬೇಕು” ಎಂದು ತಿಳಿಸಿದ್ದಾರೆ
ಮೀಸಲಾತಿ ನಿಗದಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸಬೇಕು. ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ದೂರುಗಳು ಹಾಗೂ ದಾಖಲೆಗಳನ್ನು ಮರುಪರಿಶೀಲಿಸಿ, ನಿಯಮ ಉಲ್ಲಂಘನೆ ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಮೀಸಲಾತಿ ನಿಗದಿ ಪ್ರಕ್ರಿಯೆಯಲ್ಲಿ ಉದ್ಭವಿಸಿರುವ ವಿವಾದಗಳು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಾದ ಪಾರದರ್ಶಕತೆ, ನ್ಯಾಯ ಮತ್ತು ನಿಯಮಾನುಸಾರತೆಯನ್ನು ಪ್ರಶ್ನಾರ್ಹವಾಗಿಸಿವೆ. ನಿಯಮ ಉಲ್ಲಂಘನೆ ಮತ್ತು ಪಾರದರ್ಶಕತೆಯ ಕೊರತೆಯ ಆರೋಪಗಳು ಕೇವಲ ಆಡಳಿತಾತ್ಮಕ ಲೋಪಗಳಲ್ಲ; ಅವು ಸಮಾಜದ ವಿವಿಧ ವರ್ಗಗಳ, ವಿಶೇಷವಾಗಿ ಹಿಂದುಳಿದ ಮತ್ತು ಮಹಿಳಾ ಸಮುದಾಯಗಳ ಪ್ರಾತಿನಿಧ್ಯದ ಹಕ್ಕನ್ನು ಹಾನಿಗೊಳಿಸುವ ಸಂಭಾವ್ಯತೆಯನ್ನು ಹೊಂದಿವೆ.
ಇದನ್ನೂ ಓದಿದ್ದೀರಾ? ಅಧಿಕಾರ ವಿಕೇಂದ್ರೀಕರಣದ ಕಗ್ಗೊಲೆ: ಒಕ್ಕೂಟ, ನಾಡ ಆಳಿಕೆಗಳ ಇಬ್ಬಗೆಯ ನೀತಿಗೆ ಹಾದಿ ತಪ್ಪಿದ ಗ್ರಾಮ ಸ್ವರಾಜ್ಯ
ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಉನ್ನತ ಮಟ್ಟದ ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದು, ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಮೀಸಲಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ, ಕಾನೂನು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿ ಪುನರ್‌ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ತಪ್ಪುಗಳನ್ನು ಸರಿಪಡಿಸಿ, ಹೊಸ ಅಧಿಸೂಚನೆ ಹೊರಡಿಸುವುದು ಅಗತ್ಯ.
ಸ್ಥಳೀಯ ಸರ್ಕಾರಗಳು ಜನರ ನಂಬಿಕೆಯನ್ನು ಗಳಿಸುವುದು ಮತ್ತು ನ್ಯಾಯಯುತ ಚುನಾವಣೆ ನಡೆಸುವುದು ಪ್ರಜಾಪ್ರಭುತ್ವದ ಯಶಸ್ಸಿಗೆ ಅನಿವಾರ್ಯ. ಈ ವಿವಾದವನ್ನು ಶೀಘ್ರವಾಗಿ, ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಪರಿಹರಿಸುವುದರ ಮೂಲಕ ಮಾತ್ರ ತುಮಕೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳು ನಿಜವಾದ ಪ್ರಜಾಪ್ರಭುತ್ವದ ಆಚರಣೆಯಾಗಬಲ್ಲವು. ಸರ್ಕಾರ ಮತ್ತು ಆಡಳಿತವು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.




