- ಬುಧವಾರ ರಾತ್ರಿ 11 ಗಂಟೆಗೆ ನಡೆದಿದ್ದು, ತಡವಾಗಿ ಬೆಳಕಿಗೆ
- ‘ಘಟನೆ ಬಗ್ಗೆ ದೂರು ಬಂದಿತ್ತು. ಎಫ್‌ಐಆರ್ ದಾಖಲಾಗಿಲ್ಲ’ ಎಂದ ಮುಲ್ಕಿ ಪೊಲೀಸ್
ನೆರೆಮನೆಯ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದ ವೇಳೆ ಸಂಘಪರಿವಾರದ ಕಾರ್ಯಕರ್ತನೊಬ್ಬ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲೂ ಹರಿದಾಡಿದೆ.
ಉಡುಪಿ ಕಾಲೇಜಿನಲ್ಲಿ ಮೊಬೈಲ್ ಚಿತ್ರೀಕರಣ ಘಟನೆ ಇನ್ನೂ ಚರ್ಚೆಯಲ್ಲಿರುವಾಗಲೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಕಳೆದ ಬುಧವಾರ ಮಂಗಳೂರು ಕಮಿಷನರೇಟ್‌ನ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ವರದಿಯಾಗಿದ್ದು, ಆರೋಪಿ ಯುವಕನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು ಎಂದು ವರದಿಯಾಗಿದೆ.
ಘಟನೆಯು ಮಂಗಳೂರು ಸಮೀಪದ ಮುಲ್ಕಿಯ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷಿಕೆರೆ ಹೊಸಕಾಡು ಎಂಬಲ್ಲಿ ಬುಧವಾರ ರಾತ್ರಿ 11 ಗಂಟೆಗೆ ನಡೆದಿದ್ದು, ಶುಕ್ರವಾರ ತಡವಾಗಿ ಬೆಳಕಿಗೆ ಬಂದಿದೆ.
ಬಂಧಿತ ಯುವಕನನ್ನು ಮುಲ್ಕಿ ಸಮೀಪದ ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ್ ಪೂಜಾರಿ (22) ಎಂದು ಮಾಹಿತಿ ಹರಿದಾಡುತ್ತಿದ್ದು, ಈತ ಹಿಂದೂ ಜಾಗರಣ ವೇದಿಕೆಯ ಸ್ಥಳೀಯ ಘಟಕದ ಸಕ್ರಿಯ ಕಾರ್ಯಕರ್ತ ಎಂದು ತಿಳಿದು ಬಂದಿದೆ.
ಆರೋಪಿ ಸುಮಂತ್ ತನ್ನ ನೆರೆಮನೆಯ ಮಹಿಳೆಯೊಬ್ಬರು ಸ್ನಾನ ಮಾಡುವುದನ್ನು ವೀಡಿಯೊ ಮಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಮೊಬೈಲ್ ಕ್ಯಾಮರಾ ಗಮನಿಸಿದ ಮಹಿಳೆ ಕಿರುಚಾಡಿದ್ದು, ಈ ವೇಳೆ ನೆರೆಮನೆಯವರು ಸುಮಂತ್‌ನನ್ನು ಹಿಡಿದು ಧಳಿಸಿದ್ದಾರೆ ಎನ್ನಲಾಗಿದೆ.
ಬಂಧಿತ ಯುವಕ ಸುಮಂತ್ ಪೂಜಾರಿ ಫೋಟೋ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ಪೊಲೀಸರು ‘ಸ್ಟೇಷನ್ ಬೇಲ್’ನ ಮೇಲೆ ಬಿಟ್ಟು ಕಳುಹಿಸಿದ್ದಾರೆ ಎಂದೂ ವರದಿಯಾಗಿದೆ. ಸಂಘಪರಿವಾರದ ನಾಯಕರ ಒತ್ತಡಕ್ಕೆ ಮಣಿದ ಪೊಲೀಸರು, ಯುವಕನ ವಿರುದ್ಧ ಠಾಣೆಯಲ್ಲೇ ಜಾಮಿನು ನೀಡಬಹುದಾದ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್ ಮುಲ್ಕಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ, ‘ಘಟನೆ ಬಗ್ಗೆ ದೂರು ಬಂದಿತ್ತು. ಎಫ್‌ಐಆರ್ ದಾಖಲಾಗಿಲ್ಲ. 107 ನಿಯಮದ ಮೇಲೆ ದೂರು ದಾಖಲಾಗಿತ್ತು. ಸ್ಟೇಷನ್ ಜಾಮೀನಿನ ಮೇಲೆ ಕಳುಹಿಸಲಾಗಿದೆ’ ಎಂದು ತಿಳಿಸಿದರು.
ವಿಡಿಯೋ ದಾಖಲೆ ಏನಾದರೂ ಸಿಕ್ಕಿತ್ತೇ? ಎಂದು ಪ್ರಶ್ನಿಸಿದಾಗ ‘ಈ ಬಗ್ಗೆ ಮೇಲಾಧಿಕಾರಿ ಬಳಿ ಕೇಳಿ. ನಮಗೆ ಮಾಹಿತಿ ಇಲ್ಲ’ ಎಂದು ತಿಳಿಸಿದರು.
ಬಳಿಕ ಮುಲ್ಕಿ ಪೊಲೀಸ್ ಇನ್ಸ್‌ಪೆಕ್ಟರ್ ಅವರಿಗೆ ಈ ದಿನ.ಕಾಮ್ ಕರೆ ಮಾಡಿ ವಿಚಾರಿಸಿದಾಗ, ‘ನಾನು ಪೋಕ್ಸೋ ಕೇಸಿನ ಸಂಬಂಧ ಹೊರಗಡೆ ಇದ್ದೇನೆ. ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಮಾಹಿತಿ ಇಲ್ಲ’ ಎಂದು ಉತ್ತರಿಸಿದ್ದಾರೆ.
ಈ ಘಟನೆಯ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್, ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಮಾಧ್ಯಮಗಳಿಗೆ ಹಂಚಿಲ್ಲ.