ಸೌಜನ್ಯ ಪ್ರಕರಣದಲ್ಲಿ ಧರ್ಮಸ್ಥಳ ಟ್ರಸ್ಟ್ ವಿರುದ್ಧ ಅವಹೇಳನ ಮಾಡಲಾಗುತ್ತಿದೆ ಎಂದು ಆರೋಪಿ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಪರವಾಗಿ ಧರ್ಮಸ್ಥಳದಲ್ಲಿ ವಿವಿಧ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿತ್ತು.
ಈ ಪ್ರತಿಭಟನೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಮತ್ತು ಅವರ ಕುಟುಂಬ ಸದಸ್ಯರು ಕಾಣಿಸಿಕೊಂಡಿದ್ದರು. ಈ ವೇಳೆ ಪ್ರತಿಭಟನಾನಿರತನೊಬ್ಬ ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದ. ಘಟನೆಯ ವಿಡಿಯೋ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಸೌಜನ್ಯ ತಾಯಿ ಮಾನಹಾನಿಗೆ ಯತ್ನ ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಕುಸುಮಾವತಿ, ‘ಅಪರಿಚಿತ ವ್ಯಕ್ತಿ ಹಾಗೂ ಇತರರು ತನ್ನ ಮೇಲೆ ಮಾನಹಾನಿಗೆ ಯತ್ನಿಸಿದ್ದಾರೆ. ಅಲ್ಲದೇ, ತನ್ನ ಮಗನಿಗೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಮಹಿಳೆ ಸ್ನಾನ ಮಾಡುವಾಗ ವೀಡಿಯೊ ಚಿತ್ರೀಕರಣ : ಸಂಘಪರಿವಾರದ ಕಾರ್ಯಕರ್ತ ಬಂಧನ, ಬಿಡುಗಡೆ!
‘ತನ್ನ ಮಗಳು ಸೌಜನ್ಯ ಸುಮಾರು 11 ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿ ಇದರ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುವಂತೆ ನಾನು 11 ವರ್ಷದಿಂದ ಹೋರಾಟ ನಡೆಸುತ್ತಿದ್ದು, ಅದೇ ಉದ್ದೇಶದಿಂದ ಆ.4ರಂದು ಉಜಿರೆಯಲ್ಲಿ ಸಭೆಯೊಂದನ್ನು ಆಯೋಜಿಸಿದ್ದರು. ಅದನ್ನು ತಿಳಿದು ನ್ಯಾಯಕ್ಕಾಗಿ ಕುಟುಂಬದೊಂದಿಗೆ ತೆರಳಿದ್ದೆ. ಈ ಸಂದರ್ಭ ವ್ಯಕ್ತಿಯೊಬ್ಬನು, ಇತರರೊಂದಿಗೆ ಸೇರಿಕೊಂಡು ತನ್ನನ್ನು ತಡೆದು ಮೈಗೆ ಕೈಹಾಕಿ ತಾನು ಧರಿಸಿದ್ದ ಚೂಡಿದಾರದ ವೇಲನ್ನು ಹಿಡಿದೆಳೆದು ಮಾನಹಾನಿಗೆ ಯತ್ನಿಸಿದ್ದಲ್ಲದೆ, ತನ್ನ ಮಗ ಜಯರಾಮನಿಗೂ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.