ವರ್ಕ್ ಫ್ರಮ್ ಹೋಮ್ ಉದ್ಯೋಗ ಕೊಡುವುದಾಗಿ ನಂಬಿಸಿ, ನೂರಾರು ಮಹಿಳೆಯರಿಂದ ಕೋಟ್ಯಂತರ ರೂ. ಡೆಪಾಸಿಟ್ ಪಡೆದು ವಂಚಿಸಿ, ಪರಾರಿಯಾಗಿದ್ದು, ಆರೋಪಿಸಿ ನೊಂದ ಮಹಿಳೆಯರು ಮಂಗಳವಾರ ಹಾವೇರಿ ಶಹರ ಠಾಣೆಗೆ ಧಾವಿಸಿದ್ದರು.
ಹಾವೇರಿ ಪಟ್ಟಣದ ಅಶ್ವಿನಿ ನಗರದಲ್ಲಿರುವ ‘ಎಸ್‌ಎಲ್‌ವಿ ಮಹಿಳಾ ಮಾರ್ಟ್ ಆ್ಯಂಡ್ ಮಾರ್ಕೆಟಿಂಗ್’ ಕಛೇರಿ ಸಿಬ್ಬಂದಿ ಹಣ ಪಡೆದು ವಂಚಿಸಿದ್ದಾರೆ ಎಂದು ಶಹರ ಠಾಣೆಗೆ ದೂರು ನೀಡಿದ್ದು, ಮಹಿಳೆಯರು ಅಳಲನ್ನು ತೋಡಿಕೊಂಡರು.
ಹಾವೇರಿ ತಾಲೂಕು ನೆಲೋಗಲ್ಲ ಗ್ರಾಮದ ವಿನಾಯಕ ಆನ್ವೇರಿ ಎಂಬಾತ ಕೋಟ್ಯಂತರ ರೂಪಾಯಿ ವಂಚಿಸಿ ನಾಪತ್ತೆಯಾಗಿದ್ದು, ಆತನನ್ನು ಬಂಧಿಸಿ ಹಣ ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದರು.
‘ಎಸ್‌ಎಲ್‌ವಿ ಮಹಿಳಾ ಮಾರ್ಟ್ ಆ್ಯಂಡ್ ಮಾರ್ಕೆಟಿಂಗ್’ ಹೆಸರಲ್ಲಿ ಕಚೇರಿ ತೆರದಿದ್ದ ಆರೋಪಿಗಳು, ‘ಮನೆಯಿಂದಲೇ ಕೆಲಸ ಮಾಡಿ’ ಎಂದು ಪ್ರಚಾರ ಮಾಡಿದ್ದರು. ಊದಬತ್ತಿ, ಮೇಣದ ಬತ್ತಿ, ಕರ್ಪೂರ, ಧೂಪ ಸೇರಿದಂತೆ 10 ರೀತಿಯ ಸಾಮಗ್ರಿಗಳನ್ನು ಕೊಡುತ್ತೇವೆ. ಅವುಗಳನ್ನು ಮನೆಯಲ್ಲೇ ಪ್ಯಾಕಿಂಗ್ ಮಾಡಿ ವಾಪಸು ಕೊಡಬೇಕು. ಪ್ಯಾಕಿಂಗ್ ಆಧಾರದಲ್ಲಿ ಹಣ ನೀಡಲಾಗುವುದು’ ಎಂದು ಕಂಪನಿಯವರು ಭರವಸೆ ನೀಡಿದ್ದರು.
ರಾಜ್ಯದಲ್ಲಿ ನಮ್ಮದು 9 ಶಾಖೆಗಳಿವೆ. ಕನಿಷ್ಠ 25 ಸಾವಿರ ರೂ.ನಿಂದ 5 ಲಕ್ಷ ರೂ.ವರೆಗೆ ಡೆಪಾಸಿಟ್ ಇಡಬೇಕು. ಒಂದು ಲಕ್ಷಕ್ಕೆ ಪ್ರತಿ ತಿಂಗಳಿಗೆ 26 ಸಾವಿರ ರೂ. ಆದಾಯ ಕೊಡುತ್ತೇವೆ ಎಂದು ನಂಬಿಸಿದ್ದರು. ಇದನ್ನು ನಂಬಿದ ಹಾವೇರಿ ಜನರು ಹಣ ಕೊಟ್ಟಿದ್ದರು. ಕೊಟ್ಟ ಹಣವನ್ನು ತೆಗೆದುಕೊಂಡು ವಂಚಕ ಪರಾರಿಯಾಗಿದ್ದಾನೆ.
“ನಾನು ಮೊದಲು ಒಂದು ಲಕ್ಷ ರೂ. ಡೆಪಾಸಿಟ್ ಮಾಡಿದ್ದೆ. ನಾಲ್ಕೈದು ತಿಂಗಳು ಹಣ ಕೊಟ್ಟರು. ನಂತರ ಮತ್ತೆ ಎರಡು ಲಕ್ಷ ರೂ. ಪಾವತಿಸಿದ್ದೆ. ಆಗ ಒಂದು ರೂ. ಕೊಡದೇ ವಂಚಿಸಿದ್ದಾರೆ” ಎಂದು ರಾಣೆಬೆನ್ನೂರ ತಾಲೂಕಿನ ಜೋಯಿಸರಹರಳಹಳ್ಳಿಯ ಶಂಕ್ರಮ್ಮ ಆರೋಪಿಸಿದರು.
‘ಎಸ್‌ಎಲ್‌ವಿ ಮಹಿಳಾ ಮಾರ್ಟ್ ಆ್ಯಂಡ್ ಮಾರ್ಕೆಟಿಂಗ್’ ಹೆಸರಲ್ಲಿ ಕಂಪನಿ ತೆರೆದು, ₹ 8 ಕೋಟಿಯಿಂದ 10 ಕೋಟಿ ವರೆಗೆ ವಂಚಿಸಿರುವ ಮಾಹಿತಿ ಇದೆ. ನ್ಯಾಯಕ್ಕಾಗಿ ಶಹರ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತಿದೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಬೇಕು’ ಎಂದು ಸಂತ್ರಸ್ತರು ಒತ್ತಾಯಿಸಿದರು.





