ತಮ್ಮ ವೃತ್ತಿಯ ಜೊತೆಗೆ ಸಮಾಜದಲ್ಲಿನ ಮೌಢ್ಯವನ್ನು ಪ್ರಶ್ನಿಸುವ ಮೂಲಕ ಬಸವಣ್ಣನವರ ಆಶಯಗಳಿಗೆ ಕೈಜೋಡಿಸಿದ ಹೆಗ್ಗಳಿಕೆ ಹಡಪದ ಅಪ್ಪಣ್ಣನವರಿಗೆ ಸಲ್ಲುತ್ತದೆ ಎಂದು ಹೊಸಮಠದ ಶ್ರೀ ಬಸವ ಶಾಂತಲಿಂಗ ಮಹಾಸ್ವಾಮೀಜಿ ಹೇಳಿದರು.
ಹಾವೇರಿ ಪಟ್ಟಣದ ಮಠದಲ್ಲಿ ಬಸವಕೇಂದ್ರ ಹೊಸಮಠದ ವತಿಯಿಂದ ಜರುಗಿದ ಶರಣ ಸಂಗಮದಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ವೇಳೆ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, “ಪ್ರತಿ ಧರ್ಮದಲ್ಲೂ ಶೋಷಣೆ ಇದೆ. ಆದರೆ ಮೌಢ್ಯ ಮತ್ತು ಕಂದಾಚಾರಗಳನ್ನು ಪ್ರಶ್ನಿಸುವ ಛಾತಿ ಇದ್ದದ್ದು ಅನುಭವ ಮಂಟಪಕ್ಕೆ. ಅಂಥ ವಿಶಿಷ್ಟ ವೇದಿಕೆಯಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ಮತ್ತು ಬದುಕಿನ ಸಾರ್ಥಕತೆ ಕುರಿತು ಅಪ್ಪಣ್ಣನವರು ತಮ್ಮ ವಚನಗಳಲ್ಲಿ ಸಾರಿರುವರು, ತಮ್ಮ ಪತ್ನಿ ಶರಣೆ ಲಿಂಗಮ್ಮನವರ ಜೊತೆಗೆ ಬದುಕಿನ ಸುಖ-ದುಃಖಗಳಲ್ಲಿ ಸಮಭಾಗಿ ಆದವರು. ಎಷ್ಟೇ ಕಷ್ಟ ಬಂದರೂ ಹಿಂದೆ ಸರಿಯದ ಶರಣ ದಂಪತಿಗಳವರು” ಎಂದರು.
ಹಡಪದ ಅಪ್ಪಣ್ಣ ಸೇವಾ ಸಂಘದ ಅಧ್ಯಕ್ಷ ಎಸ್.ಎನ್ ಕಾಯಕದ ಮಾತನಾಡಿ, “ನಮ್ಮ ಸಮಾಜದವರು ನಿಷ್ಕಲ್ಮಶ ಮನಸ್ಸಿನವರು. ಸದಾ ಶ್ರಮಜೀವಿಗಳು. ಶರಣ ಸಂಸ್ಕೃತಿ ಹೆಚ್ಷಿಸಲು ಎಲ್ಲರೂ ಸೇರಿ ಅಪ್ಪಣ್ಣನವರ ಜಯಂತಿ ಆಚರಿಸುತ್ತಿರುವುದು ಅಭಿಮಾನ ಮೂಡಿಸಿದೆ” ಎಂದರು.
ಸಮಾಜದ ಮುಖಂಡ ಎಸ್.ಬಿ. ಕ್ಯಾಲಕೊಂಡ ಮಾತನಾಡಿ, “ಬಸವಣ್ಣ ಹಾಗೂ ಹಡಪದ ಅಪ್ಪಣ್ಣ ಅವರ ಮಧ್ಯೆ ಸ್ವಾಮಿನಿಷ್ಠೆ ಇತ್ತು. ಎಲ್ಲ ಶರಣರ ಪ್ರೀತಿ ಗಳಿಸಿದ್ದರು. ಅನುಭವ ಮಂಟಪದಲ್ಲಿ ಪ್ರಮುಖ ನಿರ್ಣಯ ಕೈಗೊಳ್ಳುತ್ತಿದ್ದರು” ಎಂದರು.
ದಲಿತ ಮುಖಂಡ ಉಡಚಪ್ಪ ಮಾಳಗಿ ಮಾತನಾಡಿ, “ಬಸವಣ್ಣನವರ ತತ್ವಾದರ್ಶಗಳನ್ನು ಶ್ರೀಮಠ ಸದಾ ಬೆಂಬಲಿಸುತ್ತದೆ. ಅದು ನಮಗೆ ಹೆಮ್ಮೆ ಮೂಡಿಸುತ್ತದೆ. ಶ್ರೀಮಠದ ಕೃಪೆಯಿಂದ ನಾವೆಲ್ಲರೂ ಸುಖಿಯಾಗಿದ್ದೇವೆ” ಎಂದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಪತ್ರಕರ್ತ ಬಾಪು ನಂದಿಹಳ್ಳಿ ಅವರನ್ನು ಶ್ರೀಮಠದಿಂದ ಗೌರವಿಸಲಾಯಿತು. ಮಹಾಲಿಂಗಪ್ಪ ಹಡಪದ, ಅಂಬರೀಶ ಭಗವಾನಪುರ, ಬಸವರಾಜ ಕಾಯಕದ, ಶಿವಯೋಗೆಪ್ಪ ದೇವಗಿರಿ, ವಿರೂಪಾಕ್ಷಪ್ಪ ಹಡಪದ, ಲಲಿತಾ ಹಳಕೊಪ್ಪ, ಗೋಲಪ್ಪ ಹಳಕೊಪ್ಪ, ರಕ್ಷಿತಾ ಮಡಿವಾಳರ, ಕವಿತಾ ಬಣಕಾರ, ಶಶಿಕಲಾ ಬೈಲಣ್ಣನವರ, ಮುರಿಗೆಪ್ಪ ಹಳಕೊಪ್ಪ ಉಪಸ್ಥಿತರಿದ್ದರು. ಮಮತಾ ಮಾಗಳ ವಚನ ಗಾಯನ ಮಾಡಿದರು. ನಿಂಗಪ್ಪ ಆರೇರ ನಿರೂಪಿಸಿದರು. ಗೂಳಪ್ಪ ಅರಳಿಕಟ್ಟಿ ಸ್ವಾಗತಿಸಿ, ವಂದಿಸಿದರು.




