ಗೆಲುವಿನ ಘಾಟು ಎಬ್ಬಿಸಿದ ʼಕೆಂಪು ಬೆಡಗಿʼ: ದಾಖಲೆಯ ಧಾರಣೆ ಕಂಡ ಬ್ಯಾಡಗಿ ಮೆಣಸಿನಕಾಯಿ

Date:

ಬ್ಯಾಡಗಿ ಮೆಣಸಿನಕಾಯಿ ಕೇವಲ ಒಂದು ಪದಾರ್ಥವಲ್ಲ, ಕರ್ನಾಟಕದ ರೈತರ ಶ್ರಮ, ಸಂಸ್ಕೃತಿ ಮತ್ತು ಆರ್ಥಿಕ ಸಬಲೀಕರಣದ ಸಂಕೇತ. GI ಟ್ಯಾಗ್‌ನೊಂದಿಗೆ ಇದರ ಗುಣಮಟ್ಟ ರಕ್ಷಣೆಗೊಂಡಿದ್ದು, ಭವಿಷ್ಯದಲ್ಲಿ ಮತ್ತಷ್ಟು ಮೌಲ್ಯವರ್ಧನೆಯ ಅವಕಾಶಗಳು ತೆರೆದುಕೊಂಡಿವೆ.

ಗದಗದ ಮೆಣಸಿನಕಾಯಿ ರೈತರು ಬ್ಯಾಡಗಿ ಬ್ರಾಂಡ್‌ನ ಮೆಣಸಿನಕಾಯಿ ಕ್ವಿಂಟಲ್‌ಗೆ 1 ಲಕ್ಷ ರೂಪಾಯಿ ದಾಟುವ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯ ರೈತರೊಬ್ಬರು ಕ್ವಿಂಟಲ್‌ಗೆ 89,999 ರೂಪಾಯಿಗಳನ್ನು ಪಡೆಯುವ ಮೂಲಕ ದಾಖಲೆಯನ್ನು ಬರೆದಿದ್ದಾರೆ. ಸಗಟು ಬೆಲೆಗಳು ಹೆಚ್ಚುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ.

- Advertisement -

ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲೂ ಬ್ಯಾಡಗಿ ಮೆಣಸಿನಕಾಯಿ ಬೆಳೆಯಲಾಗಿದೆ. ಫೆ.6ರಂದು ಕ್ವಿಂಟಲ್‌ಗೆ 74,099 ರೂ. ಪಡೆದ ಲಕ್ಕುಂಡಿ ರೈತನ ದಾಖಲೆಯನ್ನು ಮುರಿದು ರೋಣದ ರೈತ ವಿಜಯಕುಮಾರ ಸಜ್ಜನರ ಐತಿಹಾಸಿಕ ಬೆಲೆ ದಾಖಲಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಮುಂಬೈ, ಹೈದರಾಬಾದ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ವ್ಯಾಪಾರಿಗಳು ಬಂದು ಬ್ಯಾಡಗಿ ಮೆಣಸಿನಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದು, ಮೆಣಸಿನಕಾಯಿ ಪುಡಿ ತಯಾರಿಕಾ ಕಂಪನಿಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಈ ಮೆಣಸಿನಕಾಯಿ ದರ ಪ್ರತಿ ಕ್ವಿಂಟಲ್‌ಗೆ ರೂ. 35,000ರಿಂದ 50,000 ನಡುವೆ ಇರುತ್ತದೆ. ಆದರೆ ಗುಣಮಟ್ಟ ಮತ್ತು ಬೇಡಿಕೆ ಹೆಚ್ಚಳದಿಂದ ಈ ಬಾರಿ ಇತಿಹಾಸದಲ್ಲೇ ಅತ್ಯಧಿಕ ದರ ದಾಖಲಾಗಿದೆ. ಐತಿಹಾಸಿಕ ಬೆಲೆ ಏರಿಕೆಯಿಂದ ರೈತರು ಹರ್ಷಗೊಂಡಿದ್ದಾರೆ ಮತ್ತು ಇದು ಶೀಘ್ರದಲ್ಲೇ ಒಂದು ಲಕ್ಷ ಗಡಿ ದಾಟಲಿದೆ ಎಂದು ವಿಶ್ವಾಸದಲ್ಲಿದ್ದಾರೆ. ಹಲವರು ಸಿಹಿತಿಂಡಿಗಳನ್ನು ವಿತರಿಸಿ ಸಂಭ್ರಮ ಆಚರಿಸುತ್ತಿದ್ದಾರೆ.

2023ರ ಜನವರಿಯಲ್ಲಿ, ಕೊಟುಮಚಗಿಯ ರೈತ ಶರಣಪ್ಪ 70,499 ರೂ.ಗಳನ್ನು ಪಡೆದಿದ್ದರು. 2026ರ ಫೆಬ್ರವರಿಯಲ್ಲಿ ಮೊದಲ ವಾರದಲ್ಲಿ ಲಕ್ಕುಂಡಿಯ ರೈತ ಚಂದ್ರು ಎಂಬವವರು ಕ್ವಿಂಟಲ್‌ಗೆ 74,099 ರೂ.ಗಳನ್ನು ಪಡೆದರು. ಇದೀಗ ವಿಜಯಕುಮಾರ್ ತಮ್ಮ ಬೆಳೆಗೆ ಸಾರ್ವಕಾಲಿಕ ಗರಿಷ್ಠ ಬೆಲೆ 89,999 ರೂ.ಗಳನ್ನು ಪಡೆದಿದ್ದಾರೆ.

ಗದಗ ಜಿಲ್ಲೆಯ ರೈತ ವಿಜಯಕುಮಾರ್‌ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನನ್ನ ಬೆಳೆಗೆ ಐತಿಹಾಸಿಕ ಬೆಲೆ ಸಿಕ್ಕಿದ್ದರಿಂದ ನನಗೆ ತುಂಬಾ ಸಂತೋಷವಾಗಿದೆ. ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ ಸಂಪೂರ್ಣವಾಗಿ ಸಾವಯವ ಕೃಷಿ ಮೂಲಕ ಮೆಣಸಿನಕಾಯಿ ಬೆಳೆದಿರುವುದರಿಂದ ನನಗೆ ನ್ಯಾಯಯುತ ಬೆಲೆ ಸಿಗುತ್ತದೆ ಅಂದುಕೊಂಡಿದ್ದೆ. ಆದರೆ ನನ್ನ ನಿರೀಕ್ಷೆಗೆ ಮೀರಿದ ಬೆಲೆ ಸಿಕ್ಕಿದೆ. ಇದರಿಂದ ನನಗೆ ತೃಪ್ತಿಯಾಗಿದೆ. ಎಲ್ಲ ರೈತರು ಇದನ್ನು ಸಂಭ್ರಮಾಚರಿಸಿದರು. ಉತ್ತಮ ಗುಣಮಟ್ಟದ ಬೆಳೆಗೆ ಶೀಘ್ರದಲ್ಲೇ ಒಂದು ಲಕ್ಷ ರೂಪಾಯಿಗೂ ದಾಟಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರೈತ ಮುಖಂಡ ಮಲ್ಲಿಕಾರ್ಜುನ್‌ ಅವರು ಈ ದಿ.ಕಾಮ್‌ನೊಂದಿಗೆ ಮಾತನಾಡಿ, “ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿರುವ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹಲವು ಪ್ರದೇಶಗಳಿಂದ ಮೆಣಸಿನಕಾಯಿ ಬರುತ್ತದೆ. ಬ್ಯಾಡಗಿ ಮೆಣಸಿನಕಾಯಿಯನ್ನು ಸಾಮಾನ್ಯವಾಗಿ ಗದಗ, ಧಾರವಾಡ, ಹಾವೇರಿ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಆದರೆ ಈ ವರ್ಷ ಇಲ್ಲೂ ಕೂಡ ಉತ್ಪಾದನೆ ಕಡಿಮೆಯಾಗಿದೆ. ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರಗಳಿಂದಲೂ ಬ್ಯಾಡಗಿ ಮಾರುಕಟ್ಟೆಗೆ ಲಕ್ಷಾಂತರ ಮೆಣಸಿನಕಾಯಿ ಚೀಲಗಳು ಆವಕವಾಗುತ್ತವೆ” ಎಂದು ಹೇಳಿದರು.

“ಬ್ಯಾಡಗಿಯಲ್ಲಿ ಈ ಬಾರಿ ಒಂದೇ ಒಂದು ಎಕರೆಯಲ್ಲೂ ಮೆಣಸಿನಕಾಯಿ ಬೆಳೆದಿಲ್ಲ. ರೋಗ ತಗುಲಿ ನಷ್ಟ ಅನುಭವಿಸುವ ಸಲುವಾಗಿ ಏಳೆಂಟು ವರ್ಷಗಳಿಂದ ಮೆಣಸಿನಕಾಯಿ ಬೆಳೆಯನ್ನು ಕೈಬಿಡಲಾಗಿದೆ. ಆದರೆ ಬ್ಯಾಡಗಿ ಮಾರುಕಟ್ಟೆ ವ್ಯವಸ್ಥೆ ಶಿಸ್ತುಬದ್ಧವಾಗಿದ್ದು, ಇ-ಟೆಂಡರ್‌ ಮೂಲಕ ವ್ಯಾಪಾರ ವಹಿವಾಟು ನಡೆಯುತ್ತದೆ. ಅಲ್ಲದೆ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಬ್ಯಾಡಗಿ ಮೆಣಸಿನಕಾಯಿಗೆ ಬೇಡಿಕೆ ಇರುವುದರಿಂದ ವ್ಯಾಪಾರಸ್ಥರು ಬೇರೆ ಮಾರುಕಟ್ಟೆಯಿಂದ ತಂದು ಮಾರಾಟ ಮಾಡುವ ಬದಲಿಗೆ ಒಂಚೂರು ರೇಟ್‌ ಜಾಸ್ತಿಯಾದರೂ ಪರವಾಗಿಲ್ಲ, ಬ್ಯಾಡಗಿ ಮಾರುಕಟ್ಟೆಯಲ್ಲೇ ಖರೀದಿಸಿ ರಫ್ತು ಮಾಡಬಹುದು ಅಂದುಕೊಳ್ಳುತ್ತಾರೆ. ಹಾಗಾಗಿ ಕಾಂಪಿಟೇಷನ್‌ ಜಾಸ್ತಿಯಾಗಿ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಸ್ಥಳೀಯವಾಗಿ ಬೆಳೆ ಕಡಿಮೆಯಾದರೂ, ಮಾರುಕಟ್ಟೆಯನ್ನು ಕಳೆದುಕೊಂಡಿಲ್ಲ. ಹೊರಗಿನಿಂದ ಮಾರುಕಟ್ಟೆಗೆ ತರುವ ರೈತರಿಗೆ ಲಾಭವಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲ. ನೇರವಾಗಿ ರೈತರ ಖಾತೆಗೆ ಹಣ ಜಮೆಯಾಗುವುದರಿಂದ ರೈತರಿಗೆ ಅನುಕೂಲವಾಗಿದೆ” ಎಂದು ಹೇಳಿದರು.

ಬ್ಯಾಡಗಿ ಮೆಣಸು

“ಈ ವರ್ಷ ಬ್ಯಾಡಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ನೀರಿಕ್ಷಿತ ಪ್ರಮಾಣದಲ್ಲಿ ಮೆಣಸಿನಕಾಯಿಗಳು ಚೀಲಗಳು ಬಂದಿರಲಿಲ್ಲ. ಪ್ರತಿ ವರ್ಷ ಡಿಸೆಂಬರ್‌ನಿಂದ ಮಾರ್ಚ್ ವೇಳೆಗೆ ಲಕ್ಷಾಂತರ ಚೀಲಗಳಿಂದ ತುಂಬಿರುವ ಮಾರುಕಟ್ಟೆ ಈ ಬಾರಿ ಮೆಣಸಿನಕಾಯಿ ಇಲ್ಲದೇ ಭಣಗುಡುತ್ತಿತ್ತು. ಕಾರಣ, ಕಳೆದ ವರ್ಷ ಮೆಣಸಿನಕಾಯಿಗೆ ಸೂಕ್ತ ದರ ಸಿಗದ ಹಿನ್ನೆಲೆಯಲ್ಲಿ ರೈತರು ನಷ್ಟ ಅನುಭವಿಸಿದ್ದರು. ಹೀಗಾಗಿ ಈ ವರ್ಷ ರೈತರು ಕಡಿಮೆ ಪ್ರಮಾಣದಲ್ಲಿ ಬೆಳೆ ಬೆಳೆದಿದ್ದಾರೆ. ಮೆಣಸಿನಕಾಯಿ ಬದಲಾಗಿ ಬೇರೆ ಬೇರೆ ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆದಿದ್ದಾರೆ. ಹೀಗಾಗಿ ಮೆಣಸಿನಕಾಯಿ ಪೂರೈಕೆ ಕೊರತೆ ಉಂಟಾಗಿದೆ. ಪೂರೈಕೆ ಕಡಿಮೆಯಾಗುತ್ತಿದ್ದಂತೆ ಬೇಡಿಕೆ ಮತ್ತು ಬೆಲೆಯೂ ಕೂಡ ಏರಿಕೆಯಾಗಿದೆ” ಎಂದು ಹೇಳಿದರು.

ಕಳೆದ 2021ರಿಂದ ದರ ನೋಡುವುದಾದರೆ ಪ್ರತಿ ಕ್ವಿಂಟಲ್ ಬ್ಯಾಡಗಿ ಮೆಣಸಿನಕಾಯಿಗೆ 36,000 ರೂಪಾಯಿ, 2022ರಲ್ಲಿ 50,000-70,000 ರೂಪಾಯಿ, 2023ರಲ್ಲಿ 35,000-44,000 ರೂಪಾಯಿ, 2024ರಲ್ಲಿ 30,000 ರಿಂದ 40,000 ರೂಪಾಯಿ ಹಾಗೂ 2025ರಲ್ಲಿ 35,000 ರೂಪಾಯಿ ಇತ್ತು. ಈ ಬಾರಿ ಬರೋಬ್ಬರಿ 90,000 ರೂಪಾಯಿಗೆ ಒಂದು ಕ್ವಿಂಟಲ್ ಮೆಣಸಿನಕಾಯಿ ಮಾರಾಟವಾಗಿದೆ.

ಬ್ಯಾಡಗಿ ಮೆಣಸಿನಕಾಯಿಯ ಇತಿಹಾಸ

ರಾಜ್ಯದ ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಿಂದ ಹುಟ್ಟಿದ ಬ್ಯಾಡಗಿ ಮೆಣಸಿನಕಾಯಿ ಇಂದು ಜಗತ್ತಿನಾದ್ಯಂತ ಖ್ಯಾತಿ ಪಡೆದಿದೆ. ಕಡುಗೆಂಪು ಬಣ್ಣ, ಸೌಮ್ಯ ಖಾರ ಮತ್ತು ಅಪೂರ್ವ ಪರಿಮಳಕ್ಕೆ ಹೆಸರಾದ ಈ ಮೆಣಸಿನಕಾಯಿ 2011ರ ಫೆಬ್ರವರಿಯಲ್ಲಿ ಭೌಗೋಳಿಕ ಸೂಚನೆ(GI) ಟ್ಯಾಗ್ ಪಡೆದು GI ಸಂಖ್ಯೆ 126ರೊಂದಿಗೆ ಕರ್ನಾಟಕದ ಕೃಷಿ ವೈಭವಕ್ಕೆ ಮತ್ತೊಂದು ರತ್ನ ಸೇರಿಸಿತು. ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮುಖ್ಯವಾಗಿ ಬೆಳೆಯುವ ಈ ತಳಿಯು ಭಾರತೀಯ ಅಡುಗೆಯಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಬಣ್ಣದ ಬೆಡಗಿಯಾಗಿ ಕಂಗೊಳಿಸುತ್ತಿದೆ.

ಬ್ಯಾಡಗಿ ಮೆಣಸಿನಕಾಯಿಯ ಇತಿಹಾಸ 17ನೇ ಶತಮಾನದ ಪೋರ್ಚುಗೀಸ್ ಪರಿಚಯದಿಂದ ಆರಂಭವಾಗುತ್ತದೆಂದು ನಂಬಲಾಗಿದೆ. ಬ್ರಿಟಿಷ್ ಕಾಲದಿಂದಲೇ ಇದರ ಕಡುಗೆಂಪು ಬಣ್ಣಕ್ಕೆ ಜಗತ್ತಿನ ಗಮನ ಸೆಳೆಯಿತು. ಬ್ಯಾಡಗಿ ಪ್ರದೇಶವು ಒಂದು ಕಾಲದಲ್ಲಿ ಭಾರತದ ಅತಿದೊಡ್ಡ ಮೆಣಸು ವ್ಯಾಪಾರ ಕೇಂದ್ರವಾಗಿ ಹೊರಹೊಮ್ಮಿತ್ತು. ಇದರಲ್ಲಿ ಡಬ್ಬಿ(ಗುಂಡು, ಬೀಜ ಹೆಚ್ಚು) ಮತ್ತು ಕಡ್ಡಿ (ತೆಳು, ಉದ್ದ, ಬೀಜ ಕಡಿಮೆ) ಎಂಬ ಎರಡು ಪ್ರಮುಖ ತಳಿಗಳು GI ಟ್ಯಾಗ್ ಪಡೆದಿವೆ. ಇವುಗಳಲ್ಲಿ ಡಬ್ಬಿ ತಳಿಯು ಬಣ್ಣದ ಮೌಲ್ಯಕ್ಕೆ ಹೆಚ್ಚು ಪ್ರಸಿದ್ಧವಾಗಿದೆ.

ಬ್ಯಾಡಗಿ ಮೆಣಸಿನ ವಿಶೇಷತೆಯೇ ಅದರ ಸೌಮ್ಯ ಕಟುತ್ವ(5000ದಿಂದ 15,000SHU) ಮತ್ತು ಅತ್ಯುತ್ತಮ ಬಣ್ಣ ಮೌಲ್ಯ(ASTA 150-250 ಯುನಿಟ್). ಇದು ಪಾಪ್ರಿಕಾ ಪುಡಿಯಂತೆ ಬಳಸಲು ಸೂಕ್ತವಾಗಿದೆ. ಖಾರ ಕಡಿಮೆ ಇರುವುದರಿಂದ ಮಕ್ಕಳು, ವೃದ್ಧರು ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರ ಆದರ್ಶ ಆಯ್ಕೆಯಾಗಿದೆ. ಇದರಲ್ಲಿ ಕ್ಯಾಪ್ಸಾಂಥಿನ್, ಕ್ಯಾಪ್ಸೋರುಬಿನ್ ಎಂಬ ಕ್ಯಾರೋಟಿನಾಯ್ಡ್ ವರ್ಣದ್ರವ್ಯಗಳು ಹೇರಳವಾಗಿರುವುದರಿಂದ ಆಹಾರದ ಬಣ್ಣವನ್ನು ಸಹಜವಾಗಿ ಹೆಚ್ಚಿಸುತ್ತದೆ.

ಬ್ಯಾಡಗಿ ಮೆಣಸಿನಕಾಯಿಯ ಉಪಯೋಗಗಳು

ಬ್ಯಾಡಗಿ ಮೆಣಸಿನಿಂದ ತಯಾರಾಗುವ ಉತ್ಪನ್ನಗಳು ವೈವಿಧ್ಯಪೂರ್ಣವಾಗಿವೆ. ಒಣ ಮೆಣಸು(ಕಡ್ಡಿ ಮತ್ತು ಡಬ್ಬಿ ವಿಧ), ಬಣ್ಣದ ಪುಡಿ, ಚಿಲ್ಲಿ ಫ್ಲೇಕ್ಸ್, ಚಟ್ನಿ ಪೇಸ್ಟ್ ಮತ್ತು ಮುಖ್ಯವಾಗಿ ಒಲಿಯೋರೆಸಿನ್(ಎಣ್ಣೆ ರೂಪದ ಸಾರ). ಈ ಒಲಿಯೋರೆಸಿನ್‌ನನ್ನು ಆಹಾರ, ಕಾಸ್ಮೆಟಿಕ್ಸ್(ಲಿಪ್‌ಸ್ಟಿಕ್, ನೈಲ್ ಪಾಲಿಷ್), ಔಷಧಿ, ಪಶುಆಹಾರ ಮತ್ತು ಟೆಕ್ಸ್‌ಟೈಲ್ ಉದ್ಯಮಗಳಲ್ಲಿ ಬಣ್ಣವಾಗಿ ಬಳಸುತ್ತಾರೆ. ಒಂದು ಟನ್ ಒಣ ಮೆಣಸಿನಿಂದ ಸುಮಾರು 50 ಲೀಟರ್‌ ಒಲಿಯೋರೆಸಿನ್ ತಯಾರಾಗುತ್ತದೆ. ಕೇರಳದಲ್ಲಿ ಶುದ್ಧೀಕರಣಗೊಂಡು ಅಮೆರಿಕಾ, ಯುರೋಪ್, ಜಪಾನ್, ಚೀನಾ ಸೇರಿದಂತೆ ಹಲವು ದೇಶಗಳಿಗೆ ರಫ್ತಾಗುತ್ತದೆ.

2026ರ ಫೆಬ್ರವರಿಯಲ್ಲಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿಯಾಗಿದ್ದು, ಡಬ್ಬಿ ತಳಿಯ ಒಣ ಮೆಣಸು ಕ್ವಿಂಟಲ್‌ಗೆ 86,999 ರೂ.ಗೆ ತಲುಪಿದೆ. ಕಡ್ಡಿ ತಳಿ 69,999 ರೂ. ದಾಖಲೆ ಬೆಲೆಯನ್ನು ದಾಟಿದೆ. ರೈತರಿಗೆ ಇದು ಸಂತಸದ ಸುದ್ದಿಯಾಗಿದ್ದರೆ, ಉದ್ಯಮಿಗಳಿಗೆ ಅಂತಾರಾಷ್ಟ್ರೀಯ ಬೇಡಿಕೆಯ ಪ್ರತಿಫಲವಾಗಿದೆ. ಆಚಿ, ಎಂಟಿಆರ್, ಆಶೀರ್ವಾದ್, ಸಮ್ಮತಿ, ರಾಣಿ, ಎಂಡಿಎಚ್‌ ಸೇರಿದಂತೆ ಹಲವು ಬ್ರ್ಯಾಂಡ್‌ಗಳು ಬ್ಯಾಡಗಿ ಮೆಣಸು ಪುಡಿಯನ್ನು ತಮ್ಮ ಉತ್ಪನ್ನಗಳಲ್ಲಿ ಬಳಸುತ್ತವೆ.

ಇದನ್ನೂ ಓದಿದ್ದೀರಾ? ಮೋದಿ-ಟ್ರಂಪ್ ವ್ಯಾಪಾರ ಒಪ್ಪಂದ: ರೈತರ ಬದುಕಿಗೆ ಕೊಡಲಿಯಾಗುವುದೇ?

ಅಡುಗೆಯಲ್ಲಿ ಬ್ಯಾಡಗಿ ಮೆಣಸು ಸಾಂಬಾರ್, ರಸಂ, ಬಿಸಿಬೇಳೆಬಾತ್, ಪಿಕಲ್, ಗ್ರೇವಿ ಮತ್ತು ಮಸಾಲೆಗಳಿಗೆ ಸುಂದರ ಕೆಂಪು ಬಣ್ಣ ಮತ್ತು ಸೌಮ್ಯ ರುಚಿ ನೀಡುತ್ತದೆ. ಬ್ಯಾಡಗಿ ಮೆಣಸಿನಕಾಯಿ ಕೇವಲ ಒಂದು ಪದಾರ್ಥವಲ್ಲ, ಕರ್ನಾಟಕದ ರೈತರ ಶ್ರಮ, ಸಂಸ್ಕೃತಿ ಮತ್ತು ಆರ್ಥಿಕ ಸಬಲೀಕರಣದ ಸಂಕೇತ. GI ಟ್ಯಾಗ್‌ನೊಂದಿಗೆ ಇದರ ಗುಣಮಟ್ಟ ರಕ್ಷಣೆಗೊಂಡಿದ್ದು, ಭವಿಷ್ಯದಲ್ಲಿ ಮತ್ತಷ್ಟು ಮೌಲ್ಯವರ್ಧನೆಯ ಅವಕಾಶಗಳು ತೆರೆದುಕೊಂಡಿವೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌ ಪ್ರಶಸ್ತಿ ಪಡೆದ ಸಂಶೋಧನೆಯ ಸುತ್ತ ಒಂದು ನೋಟ

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ...

ಸುಪ್ರೀಂ ಕೋರ್ಟ್’ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ: ಕಾರಾಗೃಹ ಡಿಐಜಿ ಸೋಮಶೇಖರ್ ಬಂಧನ

ನಕಲಿ ಸುಪ್ರೀಂ ಕೋರ್ಟ್ ಆದೇಶವನ್ನು ಬಳಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬನನ್ನು...

ರೈತನ ಭೂಹಕ್ಕಿಗೆ ‘ಪೋಡಿ’ ಅಡ್ಡಿ: ಆನ್‌ಲೈನ್ ಸೇವೆಯಿದ್ದರೂ ಮುಗಿಯದ ಅಲೆದಾಟ!

ರೈತನಿಗೆ ಭೂಮಿಯೇ ಬದುಕು. ಆ ಭೂಮಿಯ ಗಡಿ ಎಲ್ಲಿ? ಎಷ್ಟು ವಿಸ್ತೀರ್ಣ?...

₹50 ಸಾವಿರ ಕೋಟಿ ಹೂಡಿಕೆ, 1 ಲಕ್ಷ ಉದ್ಯೋಗ; ಕೈಗಾರಿಕಾ ವಲಯಕ್ಕೆ ಸರ್ಕಾರದ ಬಿಗ್ ಪ್ಲಾನ್

ರೈತರಿಗೆ ತಂತ್ರಜ್ಞಾನ ಆಧಾರಿತ ಸೇವೆ ಒದಗಿಸುವುದರಿಂದ ಹಿಡಿದು ಹೂಡಿಕೆ ಮತ್ತು ಉದ್ಯೋಗ...