ಹಾಗರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದೇಶ್ವರ ಕಾಲೋನಿ ಹಾಗೂ ರಾಮದೇವ ನಗರಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸಿದ್ದೇಶ್ವರ ಕಾಲೋನಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನೆ ಆರಂಭಿಸಿದ ಸಂಘದ ಪದಾಧಿಕಾರಿಗಳು ಹಾಗೂ ನಿವಾಸಿಗಳು, ಅಲ್ಲಿಂದ ಮೆರವಣಿಗೆಯಲ್ಲಿ ಹಾಗರಗಾ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಧರಣಿ ನಡೆಸಿದರು. ಬಳಿಕ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.

ಮನವಿ ಸಲ್ಲಿಸಿ ಡಾ. ಪ್ರಕಾಶ ಹಾಗರಾಗಿ ಮಾತನಾಡಿ, ‘ಕಳೆದ 15 ವರ್ಷಗಳಿಂದ ಸಿದ್ದೇಶ್ವರ ಕಾಲೋನಿಯಲ್ಲಿ ಸುಮಾರು 500 ಕುಟುಂಬಗಳು ವಾಸಿಸುತ್ತಿದ್ದು, ನಿವಾಸಿಗಳು ಪ್ರತಿವರ್ಷ ಗ್ರಾಮ ಪಂಚಾಯಿತಿಗೆ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ, ಬಡಾವಣೆಗೆ ಸಮರ್ಪಕ ಕುಡಿಯುವ ನೀರು, ರಸ್ತೆ, ಬೀದಿ ದೀಪ ಹಾಗೂ ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಲ್ಲ’ ಎಂದು ಆರೋಪಿಸಿದರು.
‘ಕುಡಿಯುವ ನೀರಿನ ಸಮಸ್ಯೆಯಿಂದ ನಿವಾಸಿಗಳು ಪರದಾಡುತ್ತಿದ್ದು, ಹದಗೆಟ್ಟ ರಸ್ತೆಗಳು ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿವೆ. ಬೀದಿ ದೀಪಗಳ ಕೊರತೆಯಿಂದ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಸಮಸ್ಯೆಯಾಗುತ್ತಿದೆ. ಮನೆಗಳ ತ್ಯಾಜ್ಯ ನೀರು ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ನಿಂತು ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ’ ಎಂದು ಆರೋಪಿಸಿದರು.
‘ಸಿದ್ದೇಶ್ವರ ಕಾಲೋನಿ ಹಾಗೂ ರಾಮದೇವ ನಗರಕ್ಕೆ ಪ್ರತಿದಿನ ಶುದ್ಧ ಕುಡಿಯುವ ನೀರು ಪೂರೈಸಿ, ಪ್ರತಿ ಮನೆಗೂ ನಳ ಸಂಪರ್ಕ ಕಲ್ಪಿಸಬೇಕು. ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಅಗತ್ಯ ಬೀದಿ ದೀಪ ಅಳವಡಿಸಿ ವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ಇದೇ ವೇಳೆ, ‘2024–25 ಹಾಗೂ 2025–26ನೇ ಸಾಲಿನಲ್ಲಿ ಹಾಗರಗಾ ಗ್ರಾಮ ಪಂಚಾಯಿತಿಯ ತೆರಿಗೆ ವಸೂಲಾತಿ, ಬೋರ್‌ವೆಲ್ ಕಾಮಗಾರಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಅನುದಾನದ ಬಳಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದರು. ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉನ್ನತ ಅಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
‘ತೆರಿಗೆ ವಸೂಲಾತಿಯ ಕ್ರಿಯಾ ಯೋಜನೆ, ಜಮಾ ಹಾಗೂ ಖರ್ಚಿನ ವಿವರಗಳನ್ನು ಬಹಿರಂಗಪಡಿಸಬೇಕು. ಪಂಚಾಯಿತಿಯ ಚೆಕ್‌ಬುಕ್‌ಗಳ ಸಂಖ್ಯೆ, ಗುತ್ತಿಗೆದಾರರಿಗೆ ನೀಡಿರುವ ಮುಂಗಡ ಚೆಕ್‌ಗಳು ಹಾಗೂ ಈಗಾಗಲೇ ನೀಡಿರುವ ಚೆಕ್‌ಗಳ ಕುರಿತು ಪರಿಶೀಲನೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ತೆರಿಗೆ ವಸೂಲಾತಿಗೆ ಸಂಬಂಧಿಸಿದ ಪಂಚಾಯಿತಿ ಬ್ಯಾಂಕ್ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು’ ಎಂದರು.

ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸದಿದ್ದರೆ ಹಾಗರಗಾ ಗ್ರಾಮ ಪಂಚಾಯಿತಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಜಿ.ಪಂ ಉಪ ಕಾರ್ಯದರ್ಶಿಗಳ ಕಿರುಕುಳ ಖಂಡಿಸಿ ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ
ಧರಣಿಯಲ್ಲಿ ಸಂಘದ ಗೌರವಾಧ್ಯಕ್ಷ ಶಿವಾಜಿ ಪೂಜಾರಿ, ಉಪಾಧ್ಯಕ್ಷ ದೇವಿದಾಸ ರೆಡ್ಡಿ, ಸಲಹೆಗಾರ ಡಾ. ಪ್ರಕಾಶ ಹಾಗರಗ, ಪಂಡಿತ ಪಾಸ್ಟರ್, ನಾಗರಾಜ ಭಾವಿದೊಡ್ಡಿ, ಮಹೇಶ್ ಗುತ್ತೇದಾರ, ಶರಣಬಸಪ್ಪ, ನಾಗಪ್ಪ, ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.





