ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳು ಗ್ರಾಮ ಪಂಚಾಯಿತಿ ನೌಕರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು) ನೇತೃತ್ವದಲ್ಲಿ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘವನ್ನು ಕಟ್ಟಿಕೊಂಡು, ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ನೌಕರರ ಸಮಸ್ಯೆಗಳಿಗೆ ಧ್ವನಿಯಾಗಿರುವ ಸಂಘಟನೆ, ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಕಾರ್ಮಿಕರು ಹಾಗೂ ನೌಕರರ ಕಾನೂನುಬದ್ಧ ಹಕ್ಕು ಎಂದು ಪ್ರತಿಪಾದಿಸಿದೆ.
2026ರ ಜುಲೈ 9ರಂದು ಹೊಸ ಕನಿಷ್ಠ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯದ ಗ್ರಾಮ ಪಂಚಾಯಿತಿ ನೌಕರರು ಬೆಂಗಳೂರಿನಲ್ಲಿ ಹೋರಾಟ ನಡೆಸಿದ್ದರು. ಈ ಹೋರಾಟದಲ್ಲಿ ಯಾದಗಿರಿ ಜಿಲ್ಲೆಯ ಗ್ರಾಮ ಪಂಚಾಯಿತಿ ನೌಕರರೂ ಭಾಗವಹಿಸಿದ್ದರು. ಹೋರಾಟಕ್ಕೆ ತೆರಳುವ ಕುರಿತು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮುಂಚಿತವಾಗಿಯೇ ಪತ್ರದ ಮೂಲಕ ಮಾಹಿತಿ ನೀಡಲಾಗಿತ್ತು ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
ಆದರೆ, ‘ಹೋರಾಟಕ್ಕೆ ತೆರಳುವಾಗ ಅನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ ನೌಕರರ ವೇತನವನ್ನು ದುಪ್ಪಟ್ಟು ಪ್ರಮಾಣದಲ್ಲಿ ಕಡಿತಗೊಳಿಸುವಂತೆ ಉಪ ಕಾರ್ಯದರ್ಶಿಗಳು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಆರೋಪಿಸಿದರು. ಇದು ನೌಕರರ ಹೋರಾಟವನ್ನು ಹತ್ತಿಕ್ಕುವ ಹಾಗೂ ಸಂಘಟನೆಯನ್ನು ಒಡೆಯುವ ಉದ್ದೇಶದ ಕ್ರಮವಾಗಿದೆ’ ಎಂದು ಪ್ರತಿಭಟನಾಕಾರರು ದೂರಿದರು.
‘ಇತ್ತೀಚೆಗೆ ಯಾದಗಿರಿ ಜಿಲ್ಲಾ ಪಂಚಾಯಿತಿಯಲ್ಲಿ ನೌಕರರಿಗೆ ಅನುಮೋದನೆ ನೀಡುವ ಹಾಗೂ ಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಸಂಘದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತು ಜಿಲ್ಲಾ ಮಟ್ಟದಲ್ಲಿ ತಕರಾರು ಸಲ್ಲಿಸಿದರೂ ಸೂಕ್ತ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದಲ್ಲಿಯೂ ವಿಷಯ ಪ್ರಸ್ತಾಪಿಸಲಾಗಿತ್ತು. ಇದನ್ನೇ ನೆಪವಾಗಿಸಿಕೊಂಡು ಉಪ ಕಾರ್ಯದರ್ಶಿಗಳು ನೌಕರರಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ’ ಎಂದು ಸಂಘದ ಮುಖಂಡರು ಆರೋಪಿಸಿದರು.
‘ನೌಕರರಿಗೆ ಕಿರುಕುಳ ನೀಡುವ ಕ್ರಮವನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಜಾರಿಗೊಳಿಸಿರುವ ನೋಟಿಸ್‌ಗಳನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಮೂಲಸೌಕರ್ಯಕ್ಕೆ ಆಗ್ರಹಿಸಿ ಹಾಗರಗಾ ಪಂಚಾಯಿತಿ ವಿರುದ್ಧ ಸಿದ್ದೇಶ್ವರ ಕಾಲೋನಿ ನಿವಾಸಿಗಳ ಧರಣಿ
ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ನಾಡಗೌಡ, ರಾಜ್ಯ ಖಜಾಂಚಿ ಮಲ್ಲಿಕಾರ್ಜುನ ಬಳಿಚಕ್ರ, ರಾಜ್ಯ ಉಪಾಧ್ಯಕ್ಷರಾದ ಜಿ. ರಾಮಕೃಷ್ಣ, ಆರ್.ಎಸ್. ಬಸವರಾಜ್, ಗೋಪಾಲಕೃಷ್ಣ ಅರಳಳ್ಳಿ, ರಾಜ್ಯ ಕಾರ್ಯದರ್ಶಿ ಸಿದ್ರಾಜ್, ಜಿಲ್ಲಾ ಅಧ್ಯಕ್ಷ ಬಸವರಾಜ್ ದೊರೆ, ನೆಲೋಡಿ ರಾಜಸಾಬ್, ಚನ್ನಪ್ಪ, ಆನೆಗುಂದಿ, ಮಾರುತಿ ಸುಗ್ಗ (ಕಲಬುರಗಿ), ಮುತ್ತು ಪೂಜಾರಿ (ಉತ್ತರ ಕನ್ನಡ), ಹೊಳೆ ಬಸವರಾಜ್ (ಬಾಗಲಕೋಟ), ಪಾಪಣ್ಣ (ಚಿಕ್ಕಬಳ್ಳಾಪುರ), ಕೇಶವರಾವ್ (ಕೋಲಾರ), ಚಂದ್ರಶೇಖರ ಪಾಟೀಲ್ (ಕೊಪ್ಪಳ), ಜೈಲಾಲ್ ತೋಟದಮನೆ ಸೇರಿದಂತೆ ವಿವಿಧ ಜಿಲ್ಲೆಗಳ ಮುಖಂಡರು ಹಾಗೂ ನೌಕರರು ಭಾಗವಹಿಸಿದ್ದರು.




