- ಮೇಯರ್–ಉಪಮೇಯರ್ ಚುನಾವಣೆಗೆ ಎದುರಾಗಿದ್ದ ಅಡ್ಡಿ ನಿವಾರಣೆ
- ಬಿಜೆಪಿಯಿಂದ ಗೆದ್ದಿದ್ದ ಪ್ರಿಯಾಂಕಾ ಭೋಯಿ ಅವರ ಸದಸ್ಯತ್ವ ರದ್ದು
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಹುಮತಕ್ಕಿಂತ ಕಡಿಮೆ ಸೀಟುಗಳನ್ನು ಪಡೆದಿರುವ ಬಿಜೆಪಿ ಬೇರೆ ಜಿಲ್ಲೆಗಳಿಗೆ ಸೇರಿದ ವಿಧಾನ ಪರಿಷತ್ ಸದಸ್ಯರ ಹೆಸರುಗಳನ್ನು ಪಾಲಿಕೆ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸುವ ಮೂಲಕ ವಾಮಮಾರ್ಗದಿಂದ ಅಧಿಕಾರ ಪಡೆಯಲು ಹವಣಿಸುತ್ತಿದೆ. ಆದ್ದರಿಂದ, ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಗೆ ತಡೆ ನೀಡಬೇಕು ಎಂದು ಕೋರಿ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ವರ್ಷಾ ಜಾನೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ಕಲಬುರಗಿ ಪೀಠವು ವಜಾ ಮಾಡಿದೆ.
ಮಂಗಳವಾರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠವು, “ಈಗಾಗಲೇ ಚುನಾವಣೆ ಘೋಷಣೆಯಾಗಿರುವುದರಿಂದ ಈ ಹಂತದಲ್ಲಿ ತಡೆ ನೀಡಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾ ಮಾಡಿದೆ.
ಇದೇ 23ರಂದು ಮೇಯರ್–ಉಪಮೇಯರ್ ಚುನಾವಣೆ ನಿಗದಿಯಾಗಿದೆ. ಇದೀಗ ಚುನಾವಣೆ ನಡೆಯಲು ಎದುರಾಗಿದ್ದ ಅಡ್ಡಿ ನಿವಾರಣೆಯಾದಂತಾಗಿದೆ. ವಾರದ ಹಿಂದೆಯೇ ಪಾಲಿಕೆಯ ಮೇಯರ್–ಉಪಮೇಯರ್ ಆಯ್ಕೆಗೆ ಚುನಾವಣೆ ಘೋಷಿಸಿದ್ದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಸದಸ್ಯರಿಗೆ ಈ ಕುರಿತು ನೋಟಿಸ್ ನೀಡಿದ್ದರು.
55 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 27 ಸ್ಥಾನಗಳನ್ನು ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 23 ಸ್ಥಾನಗಳು, ಜೆಡಿಎಸ್ 4 ಸ್ಥಾನಗಳನ್ನು ಪಡೆದಿತ್ತು. ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಶಂಭುಲಿಂಗ ಬಳಬಟ್ಟಿ ಗೆಲುವು ಸಾಧಿಸಿದ್ದರು. ಆ ಬಳಿಕ ಮರಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಬಿಜೆಪಿಯಿಂದ ಗೆದ್ದಿದ್ದ ಪ್ರಿಯಾಂಕಾ ಭೋಯಿ ಅವರ ಸದಸ್ಯತ್ವವನ್ನು ನ್ಯಾಯಾಲಯ ರದ್ದು ಮಾಡಿದೆ.
ಬಿಜೆಪಿಯ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರ ಮತಗಳನ್ನು ಲೆಕ್ಕ ಹಾಕಿದರೆ 35 ಮತಗಳಾಗುತ್ತವೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮತ ಹಾಗೂ ಶಾಸಕರು, ವಿಧಾನಪರಿಷತ್ ಸದಸ್ಯರ ಮತಗಳನ್ನು ಕೂಡಿಸಿದರೆ 31 ಮತಗಳಾಗುತ್ತವೆ.
ಸರಳ ಬಹುಮತಕ್ಕೆ 36 ಮತಗಳ ಅವಶ್ಯಕತೆಯಿದ್ದು, ಬಿಜೆಪಿ ಅಧಿಕಾರಕ್ಕೆ ಸಮೀಪದಲ್ಲಿದೆ. ಒಂದು ವೇಳೆ ಜೆಡಿಎಸ್ ಕಾಂಗ್ರೆಸ್ ಬೆಂಬಲಿಸಿದರೂ ಒಟ್ಟು 35 ಮತಗಳು ಆಗುತ್ತವೆ. ಜೆಡಿಎಸ್ ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಂಡಿಲ್ಲ.