ಜಿಲ್ಲೆಯಲ್ಲಿ ಆಡಳಿತಾತ್ಮಕ ವರ್ಗಾವಣೆ ಆದೇಶಗಳು ಕಾಗದಕ್ಕಷ್ಟೇ ಸೀಮಿತವಾಗಿವೆಯೇ ಎಂಬ ಗಂಭೀರ ಪ್ರಶ್ನೆ ಮೂಡಿದೆ. ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಆದೇಶವಿದ್ದರೂ, ಕೆ.ಜಿ.ಎಫ್‌ನ ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯಕ್ಕೆ ವರ್ಗಾವಣೆಗೊಂಡಿರುವ ಪೇಷ್ಕರ್ ವೇಣುಗೋಪಾಲ್ ಅವರು ನೂತನ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ವರ್ಗಾವಣೆ ಆದೇಶ: ಕೋಲಾರ ಜಿಲ್ಲಾಧಿಕಾರಿಗಳ ಅಧಿಕೃತ ಜ್ಞಾಪನ ಪತ್ರದ ಅನ್ವಯ (ಸಂಖ್ಯೆ: ಡಿವಿಸಿ(1)ನಿಆರ್:37/2025-26, ದಿನಾಂಕ: 30/07/2026), ಕೊಂಡರಾಜನಹಳ್ಳಿಯ ಶ್ರೀ ಆಂಜನೇಯಸ್ವಾಮಿ (ಮಾರುತಿ) ದೇವಾಲಯದಲ್ಲಿದ್ದ ಪೇಷ್ಕರ್ ವೇಣುಗೋಪಾಲ್ ಅವರನ್ನು ಕೆ.ಜಿ.ಎಫ್‌ನ ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯಕ್ಕೆ ತಕ್ಷಣವೇ ಜಾರಿಗೆ ಬರುವಂತೆ ಸ್ಥಳಾಂತರಿಸಲಾಗಿತ್ತು.
ಕಾರ್ಯನಿರ್ವಾಹಕ ಅಧಿಕೃತ ಸೂಚನೆ: ಜಿಲ್ಲಾಧಿಕಾರಿಗಳ ಆದೇಶದಂತೆ, ಕೊಂಡರಾಜನಹಳ್ಳಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ದಿನಾಂಕ 10/08/2026 ರಂದು ಅಪರಾಹ್ನದಿಂದಲೇ ಅನ್ವಯವಾಗುವಂತೆ ಪೇಷ್ಕರ್ ಅವರನ್ನು ಬಿಡುಗಡೆಗೊಳಿಸಿ, ಕೆ.ಜಿ.ಎಫ್‌ನ ನೂತನ ದೇವಸ್ಥಾನದಲ್ಲಿ ವರದಿ ಮಾಡಿಕೊಳ್ಳಲು ಅಧಿಕೃತವಾಗಿ ಸೂಚಿಸಿದ್ದರು.
ಡ್ಯೂಟಿ ರಿಪೋರ್ಟ್ ಮಾಡಿಕೊಂಡು ಗೈರಾದ ಪೇಷ್ಕರ್: ನಿಯಮಾನುಸಾರ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ವೇಣುಗೋಪಾಲ್ ಅವರು ಕರ್ತವ್ಯಕ್ಕೆ ಗೈರುಹಾಜರಾಗಿ, ಆಡಳಿತಾತ್ಮಕ ಆದೇಶವನ್ನು ಧಿಕ್ಕರಿಸಿದ್ದಾರೆ.
ಶ್ರಾವಣ ಮಾಸದ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ: ಪ್ರಸ್ತುತ ಪವಿತ್ರ ಶ್ರಾವಣ ಮಾಸದ ಎರಡನೇ ಶನಿವಾರ ಸಮೀಪಿಸುತ್ತಿದ್ದು, ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಜನದಟ್ಟಣೆ ಅಧಿಕವಿರಲಿದೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ಸಿಬ್ಬಂದಿ ಗೈರುಹಾಜರಾಗಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಸಾರ್ವಜನಿಕ ಒತ್ತಡ:
ದೇವಸ್ಥಾನದಂತಹ ಧಾರ್ಮಿಕ ಮತ್ತು ಸೂಕ್ಷ್ಮ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಆದೇಶವನ್ನೇ ಧಿಕ್ಕರಿಸಿ ಸಿಬ್ಬಂದಿಗಳು ನಿರ್ಲಕ್ಷ್ಯ ತೋರುತ್ತಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಮುಂಬರುವ ಶ್ರಾವಣ ಶನಿವಾರದ ಸಿದ್ಧತೆಗಳಿಗೆ ತೊಂದರೆಯಾಗುತ್ತಿರುವುದರಿಂದ, ಕರ್ತವ್ಯಕ್ಕೆ ಹಾಜರಾಗದ ಪೇಷ್ಕರ್ ವೇಣುಗೋಪಾಲ್ ಅವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು ಅಥವಾ ಕಠಿಣ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಮಾನವ ಹಕ್ಕುಗಳ ಅಧ್ಯಕ್ಷ ಎಲ್.ಬಾಬು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ..?ಕೋಲಾರ | ರೈತರ ಹತ್ಯೆ ಆರೋಪ: ಅರಣ್ಯಾಧಿಕಾರಿಗಳ ಬಂಧನಕ್ಕೆ ರೈತ ಸಂಘ ಆಗ್ರಹ
ಈ ಕುರಿತು ಸಂಬಂಧಪಟ್ಟ ಮೇಲಾಧಿಕಾರಿಗಳು ಯಾವ ಕ್ರಮಕೈಗೊಳ್ಳಲಿದ್ದಾರೆ ಕಾದು ನೋಡಬೇಕಿದೆ.




