- 75ನೇ ಸ್ವಾತಂತ್ರ್ಯ ವರ್ಷಾಚರಣೆಯ ಅಂಗವಾಗಿ ಶಿಬಿರ
- ಮೂರು ದಿನಗಳ ಕಾಲ ನಡೆಯಲಿರುವ ಅಧ್ಯಯನ ಶಿಬಿರ
75ನೇ ಸ್ವಾತಂತ್ರ್ಯ ವರ್ಷಾಚರಣೆ ಅಂಗವಾಗಿ ದೇಶದ ಮಹಾನ್ ಕ್ರಾಂತಿಕಾರಿಗಳ ಜೀವನ-ಸಂಘರ್ಷದ ಕುರಿತು ಏ.2, 3 ಮತ್ತು 4ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಆಯೋಜಿಸಲಾಗಿದೆ ಎಂದು ಎಐಡಿಎಸ್ಓ ತಿಳಿಸಿದೆ.
ಶಿಬಿರ ಕುರಿತು ಎಐಡಿಎಸ್ಓ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. “ದೇಶದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವಿಚಾರಗಳು, ಆದರ್ಶ, ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಮೈಸೂರು | ರಾಹುಲ್ ಗಾಂಧಿ ಅನರ್ಹತೆ ವಿರುದ್ಧ ವಿದ್ಯಾವಂತರು ದನಿ ಎತ್ತಬೇಕು: ಬಡಗಲಪುರ ನಾಗೇಂದ್ರ
“ಶಿಬಿರದ ಮೂಲಕ ಇಂದಿನ ಶಿಕ್ಷಣದ ವ್ಯಾಪಾರೀಕರಣ ಹಾಗೂ ಸಾಮಾಜಿಕ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಹೆಣ್ಣುಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ವಿದ್ಯಾರ್ಥಿಗಳಲ್ಲಿ ಅರಿವು ಮಾಡಿಲಾಗುತ್ತಿದೆ. ಇಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಂಡು ಎಲ್ಲ ವಿದ್ಯಾರ್ಥಿಗಳು ಸಜ್ಜಾಗಬೇಕಿದೆ” ಎಂದಿದ್ದಾರೆ.
“ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಶಿಬಿರದಲ್ಲಿ ವಿದ್ಯಾರ್ಥಿಗಳ ಚಳುವಳಿಯನ್ನು ಬೆಳೆಸುವ ಅವಶ್ಯಕತೆ, ವಿದ್ಯಾರ್ಥಿ ಹೋರಾಟದ ಮುಂದಿರುವ ಸವಾಲುಗಳು ಸೇರಿದಂತೆ ಇನ್ನಿತರ ಹಲವು ವಿಷಯಗಳ ಕುರಿತು ಚರ್ಚೆಗಳು, ಸಾಮಾಜಿಕ ಹಾಗೂ ಉತ್ತಮ ಅಭಿರುಚಿಯ ಸಿನಿಮಾ ಪ್ರದರ್ಶನ, ಸಾಂಸ್ಕ್ರತಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆಯಲಿವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.