ರೈತರ ಹೊಲದಲ್ಲಿ ಕಾಣುತ್ತಿರುವ ಬೆಳೆ ಹಾನಿಯನ್ನು ಕೇವಲ ಅಂಕಿ ಅಂಶಗಳ ಮೂಲಕ ನೋಡದೆ, ಸ್ಥಳಕ್ಕೆ ತೆರಳಿ ವಾಸ್ತವ ಪರಿಸ್ಥಿತಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಈಗ ಅಗತ್ಯವಾಗಿದೆ. ಅಧಿಕಾರಿಗಳು, ಸಚಿವರು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ವಾಸ್ತವ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದು ರೈತರಿಗೆ ಪರಿಹಾರ ದೊರೆಯುವಂತೆ ಮಾಡಬೇಕಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ, ಯರಗಟ್ಟಿ ಹಾಗೂ ರಾಮದುರ್ಗ ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಹಲವು ಗ್ರಾಮಗಳಲ್ಲಿ ಶೇ.50ರಷ್ಟು ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಸರ್ಕಾರದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಈ ಮೂರೂ ತಾಲೂಕುಗಳು ಸೇರ್ಪಡೆಯಾಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಬಿತ್ತನೆ ಮಾಡಿದ್ದರು. ಬಿತ್ತನೆಬೀಜ, ಗೊಬ್ಬರ, ಔಷಧಿ ಹಾಗೂ ಕೂಲಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಬಿತ್ತನೆ ನಂತರ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಬೆಳೆಗಳು ಬಾಡತೊಡಗಿವೆ. ಕೆಲವೆಡೆ ಬೆಳೆ ಸಂಪೂರ್ಣ ಒಣಗಿದ್ದು, ಇನ್ನೂ ಕೆಲವೆಡೆ ಇಳುವರಿ ಕಡಿಮೆಯಾಗುವ ಪರಿಸ್ಥಿತಿ ಇದೆ.
ಬೆಳೆ ಹಾನಿಯಿಂದ ಕೃಷಿಗೆ ಮಾಡಿದ ಖರ್ಚು ಮರಳಿ ಬರುವುದಿಲ್ಲ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಸಾಲ ಮಾಡಿ ಕೃಷಿ ಮಾಡಿದವರು ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಮುಂದಿನ ಹಂಗಾಮಿಗೆ ಬಿತ್ತನೆ ಮಾಡಲು ಹಣ ಹೊಂದಿಸುವುದೂ ಕಷ್ಟವಾಗುವ ದುಃಸ್ಥಿತಿ ಎದುರಾಗಿದೆ.
ಬರ ವೀಕ್ಷಣೆ ನಡೆದರೂ ಪಟ್ಟಿಯಲ್ಲಿ ಸ್ಥಾನವಿಲ್ಲ
ಮಳೆ ಕೊರತೆ, ಬೆಳೆ ಹಾನಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸವದತ್ತಿ, ಯರಗಟ್ಟಿ ಹಾಗೂ ರಾಮದುರ್ಗ ತಾಲೂಕುಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆ ಮಾಡಿದ್ದಾರೆ. ಅಧಿಕಾರಿಗಳೂ ಕೂಡ ವಿವಿಧ ಗ್ರಾಮಗಳಲ್ಲಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಆದರೂ ಸರ್ಕಾರ ಪ್ರಕಟಿಸಿರುವ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಈ ಮೂರು ತಾಲೂಕುಗಳು ಸೇರ್ಪಡೆಯಾಗಿಲ್ಲ. ಇದರಿಂದ ರೈತರು ಅಸಮಾಧಾನಗೊಂಡಿದ್ದಾರೆ.
ಹೊಲದಲ್ಲಿ ಬೆಳೆ ಒಣಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಪ್ರತಿಯೊಂದು ಹೊಲದ ಪರಿಸ್ಥಿತಿಯನ್ನು ಪರಿಶೀಲಿಸಿ ವರದಿ ಮಾಡಬೇಕು. ಬೆಳೆ ಹಾನಿಯಾಗಿರುವ ರೈತರಿಗೆ ಸರ್ಕಾರದ ನೆರವು ದೊರೆಯಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ಮಾನದಂಡಗಳ ನಡುವೆ ರೈತರ ಸಂಕಷ್ಟ
“ಕೇಂದ್ರದ ಬರ ನಿರ್ವಹಣಾ ಕೈಪಿಡಿ-2020ರ ಪ್ರಕಾರ ಬರ ಘೋಷಣೆಗೆ ಮಳೆ ಕೊರತೆ, ಮೂರು ವಾರಗಳ ಒಣ ಅವಧಿ, ಬಿತ್ತನೆ ಪ್ರಮಾಣ, ಉಪಗ್ರಹ ಆಧಾರಿತ ಸೂಚ್ಯಂಕ, ಮಣ್ಣಿನ ತೇವಾಂಶ ಹಾಗೂ ಜಲ ಪರಿಸ್ಥಿತಿ ಸೇರಿದಂತೆ ಹಲವು ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ಈ ಮಾನದಂಡಗಳ ಆಧಾರದ ಮೇಲೆ ರಾಜ್ಯದಲ್ಲಿ 101 ತಾಲೂಕುಗಳನ್ನು ಬರಪೀಡಿತವೆಂದು ಗುರುತಿಸಲಾಗಿದೆ. ಆದರೆ ಸವದತ್ತಿ, ಯರಗಟ್ಟಿ ಹಾಗೂ ರಾಮದುರ್ಗ ತಾಲೂಕುಗಳಲ್ಲಿ ಕೆಲವು ಮಾನದಂಡಗಳು ಬರ ಘೋಷಣೆಗೆ ಹೊಂದಿಕೆಯಾಗದ ಕಾರಣ ಪಟ್ಟಿಯಿಂದ ಹೊರಗುಳಿದಿವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ರೈತರ ಪ್ರಕಾರ, ʼಕಾಗದದ ಮೇಲಿನ ಅಂಕಿ ಅಂಶಗಳಿಗಿಂತ ಹೊಲದಲ್ಲಿನ ವಾಸ್ತವ ಪರಿಸ್ಥಿತಿಯನ್ನು ಗಮನಿಸುವುದು ಮುಖ್ಯ. ಮಳೆ ಇಲ್ಲದೆ ಬೆಳೆ ಒಣಗಿರುವುದನ್ನು ಪರಿಗಣಿಸಿ ಮತ್ತೊಮ್ಮೆ ಸಮೀಕ್ಷೆ ನಡೆಸಬೇಕುʼ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಶೇ.11ರಷ್ಟು ಮಳೆ ಕೊರತೆ
ಜೂನ್ 1ರಿಂದ ಆಗಸ್ಟ್ 27ರವರೆಗೆ ಬೆಳಗಾವಿ ಜಿಲ್ಲೆಯಲ್ಲಿ ವಾಡಿಕೆಯಂತೆ 465 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ 414 ಮಿ.ಮೀ. ಮಾತ್ರ ಮಳೆಯಾಗಿದೆ. ಇದರಿಂದ ಶೇ.11ರಷ್ಟು ಮಳೆ ಕೊರತೆ ದಾಖಲಾಗಿದೆ. ಜೂನ್ನಲ್ಲಿ ಶೇ.29ರಷ್ಟು ಮಳೆ ಕೊರತೆಯಾಗಿದ್ದರೆ, ಜುಲೈನಲ್ಲಿ ವಾಡಿಕೆಗಿಂತ ಶೇ.12ರಷ್ಟು ಹೆಚ್ಚು ಮಳೆಯಾಗಿದೆ. ಆದರೂ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಕೃಷಿ ಮೇಲೆ ಮಳೆ ಕೊರತೆಯ ಪರಿಣಾಮ ಬೀರಿದೆ.
ಮರು ಸಮೀಕ್ಷೆಯ ನಿರೀಕ್ಷೆಯಲ್ಲಿ ರೈತರು
ಸವದತ್ತಿ, ಯರಗಟ್ಟಿ ಹಾಗೂ ರಾಮದುರ್ಗ ತಾಲೂಕುಗಳಲ್ಲಿ ಮತ್ತೊಮ್ಮೆ ಸಮಗ್ರ ಬರ ಸಮೀಕ್ಷೆ ನಡೆಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಗ್ರಾಮಗಳಿಗೆ ತೆರಳಿ ಬೆಳೆ ಹಾನಿಯ ಪ್ರಮಾಣವನ್ನು ಪರಿಶೀಲಿಸಿ, ವಾಸ್ತವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂಬುದು ರೈತರ ಮಾತಾಗಿದೆ.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, “ಬರಪೀಡಿತ ಘೋಷಣೆಗೆ ಇನ್ನೂ ಅವಕಾಶವಿದ್ದು, ಮರು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ಕುರಿತು ರಾಮದುರ್ಗ ತಾಲೂಕಿನ ರೈತ ಕರಿಯಪ್ಪ ಈ ದಿನ.ಕಾಮ್ ಜತೆಗೆ ಮಾತನಾಡಿ, “ಮಳೆ ಕೊರತೆಯಿಂದ ಹೆಸರು, ಉದ್ದು, ತೊಗರಿ ಹಾಗೂ ಗೋವಿನಜೋಳ ಬೆಳೆಗಳು ಒಣಗುತ್ತಿವೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ತೊಗರಿ ಬಿತ್ತನೆ ಮಾಡಿದ್ದಾರೆ. ಬಿತ್ತನೆ, ಗೊಬ್ಬರ, ಔಷಧಿ ಹಾಗೂ ಕೂಲಿಗೆ ಹಣ ಖರ್ಚು ಮಾಡಿದ್ದೇವೆ. ಮಳೆ ಇಲ್ಲದೆ ಬೆಳೆಗಳು ಹಾನಿಯಾಗಿವೆ. ಹೆಸರು ಸರಿಯಾಗಿ ಇಳುವರಿ ಬಂದಿಲ್ಲ. ಇದರಿಂದ ರೈತರಿಗೆ ನಷ್ಟವಾಗಿದೆ. ಅಧಿಕಾರಿಗಳು ಹೊಲಗಳಿಗೆ ಬಂದು ಪರಿಸ್ಥಿತಿ ಪರಿಶೀಲಿಸಿ ರೈತರಿಗೆ ಪರಿಹಾರ ಸಿಗುವಂತೆ ಮಾಡಬೇಕು” ಎಂದು ಮನವಿ ಮಾಡಿದರು.
ಸವದತ್ತಿ ತಾಲೂಕಿನ ರೈತ ಲಕ್ಷ್ಮಣ ಅವರು ಮಾತನಾಡಿ, “ನಾವು ಹೆಸರು ಉದ್ದು, ಹತ್ತಿ ಹಾಗೂ ಗೋವಿನ ಜೋಳ ಬಿತ್ತನೆ ಮಾಡಿದ್ದು, ಬೆಳೆಗಳ ಮೇಲೆ ಮಳೆ ಕೊರತೆಯ ಪರಿಣಾಮ ಬೀರಿದೆ. ಆರಂಭದಲ್ಲಿ ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದೆವು. ಆದರೆ ನಂತರ ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಒಣಗಿವೆ. ಬೆಳೆ ಹಾನಿಯಾಗಿರುವ ರೈತರಿಗೆ ಸರ್ಕಾರದಿಂದ ನೆರವು ದೊರೆಯಬೇಕು. ಹಾಗಾಗಿ ಸವದತ್ತಿ ತಾಲೂಕನ್ನೂ ಬರಪೀಡಿತ ತಾಲೂಕೆಂದು ಘೋಷಣೆ ಮಾಡಬೇಕು” ಎಂದು ಆಗ್ರಹಿಸಿದರು.
ಯರಗಟ್ಟಿ ತಾಲೂಕಿನ ರೈತ ಶಿವಾನಂದ ಮಾತನಾಡಿ, “ಮಳೆ ಕೊರತೆಯಿಂದ ಹೆಸರು, ಗೋವಿನಜೋಳ ಹಾಗೂ ಹತ್ತಿ ಬೆಳೆಗಳು ಹಾನಿಯಾಗಿವೆ. ಕೆಲವು ಕಡೆ ಬೆಳೆಗಳು ಒಣಗಿದ್ದು, ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಕೃಷಿಗಾಗಿ ಮಾಡಿದ ಖರ್ಚು ವಾಪಸ್ ಬರುವುದೇ ಎಂಬ ಚಿಂತೆಯಾಗಿದೆ. ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಬೆಳೆ ಹಾನಿಯ ನೈಜ ಪರಿಸ್ಥಿತಿ ಪರಿಶೀಲಿಸಬೇಕು. ಸಚಿವರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಬರಪರಿಶೀಲನೆ ಮಾಡಿದ್ದಾರೆ. ಆದರೂ ಬರ ಪಟ್ಟಿಯಲ್ಲಿ ಹೆಸರಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಸವದತ್ತಿ, ಯರಗಟ್ಟಿ ಹಾಗೂ ರಾಮದುರ್ಗ ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವಾಸ್ತವ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಬೇಕಿದೆ. ಬರಪೀಡಿತ ಪಟ್ಟಿಯಲ್ಲಿ ಮೂರು ತಾಲೂಕುಗಳು ಸೇರ್ಪಡೆಯಾಗದಿರುವುದರಿಂದ ಮತ್ತೊಮ್ಮೆ ಸಮಗ್ರ ಬೆಳೆ ಹಾನಿ ಸಮೀಕ್ಷೆ ನಡೆಸಿ, ರೈತರ ಪರಿಸ್ಥಿತಿಯನ್ನು ಸರ್ಕಾರಕ್ಕೆ ತಿಳಿಸುವ ಅಗತ್ಯವಿದೆ.
ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರು ಬೆಂಗಳೂರಿನಲ್ಲಿಯೇ ಕಾಲ ಕಳೆಯದೆ ತಾಲೂಕಿಗೆ ಆಗಮಿಸಿ, ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಬರ ಪರಿಶೀಲನೆ ನಡೆಸಿಸಬೇಕು. ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಅರಿತುಕೊಂಡು, ಈ ಕುರಿತು ಸರ್ಕಾರದ ಗಮನಕ್ಕೆ ತಂದು ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.
ಇದನ್ನೂ ಓದಿದ್ದೀರಾ? ರಾಜ್ಯದ ಅನ್ನದ ಬಟ್ಟಲಿಗೆ ಭಾರೀ ಹೊಡೆತ: ಬರಗಾಲದ ಡೊಮಿನೊ ಎಫೆಕ್ಟ್ ಹೇಗಿದೆ? ಓದಿ….
ಅದೇ ರೀತಿ ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅವರೂ ಕೂಡ ತಾಲೂಕಿನಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಮತ್ತು ಬೆಳೆ ಹಾನಿಯ ಕುರಿತು ಸರ್ಕಾರದ ಗಮನಕ್ಕೆ ತರಬೇಕು. ಯರಗಟ್ಟಿ ತಾಲೂಕಿನಲ್ಲಿಯೂ ಸಮಗ್ರವಾಗಿ ಮತ್ತೊಮ್ಮೆ ಬರ ಸಮೀಕ್ಷೆ ನಡೆಸಿ ರೈತರ ಸಮಸ್ಯೆಯನ್ನು ಸರ್ಕಾರದ ಮುಂದೆ ಇಡಬೇಕಿದೆ.
ರೈತರ ಹೊಲದಲ್ಲಿ ಕಾಣುತ್ತಿರುವ ಬೆಳೆ ಹಾನಿಯನ್ನು ಕೇವಲ ಅಂಕಿ ಅಂಶಗಳ ಮೂಲಕ ನೋಡದೆ, ಸ್ಥಳಕ್ಕೆ ತೆರಳಿ ವಾಸ್ತವ ಪರಿಸ್ಥಿತಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಈಗ ಅಗತ್ಯವಾಗಿದೆ. ಅಧಿಕಾರಿಗಳು, ಸಚಿವರು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ವಾಸ್ತವ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದು ರೈತರಿಗೆ ಪರಿಹಾರ ದೊರೆಯುವಂತೆ ಮಾಡಬೇಕಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು




