ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕಾಡಾನೆಯೊಂದು ತುಳಿದು ಕೊಂದಿರುವ ಘಟನೆ ಮಂಡ್ಯ ತಾಲೂಕಿನ ಲಾಳನಕೆರೆಯಲ್ಲಿ ನಡೆದಿದೆ. ಮೃತರನ್ನು ಸಾಕಮ್ಮ ಎಂದು ಗುರುತಿಸಲಾಗಿದೆ.
“ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಾಕಮ್ಮ ಅವರ ಮೇಲೆ ಆನೆ ದಾಳಿ ಮಾಡಿದೆ. ಸುತ್ತಮುತ್ತಲೂ ಆನೆಗಳು ಇರುವ ಬಗ್ಗೆ ತಮಗೆ ತಿಳಿದಿಲ್ಲ. ಸಾಕಮ್ಮ ಕಬ್ಬಿನ ಗದ್ದೆಯಲ್ಲಿ ಗೊಬ್ಬರ ಸಿಂಪಡಿಸುತ್ತಿದ್ದಾಗ ಎಲ್ಲಿಂದಲೋ ಬಂದ ಆನೆ ಅವಳ ಮೇಲೆ ದಾಳಿ ಮಾಡಿ ತುಳಿದಿದೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ” ಎಂದು ಹೊಲದ ಕಾರ್ಮಿಕರು ಹೇಳಿದರು.
ಉಳಿದ ಕಾರ್ಮಿಕರು ಕೂಡಲೇ ಸುರಕ್ಷಿತವಾಗಿ ಓಡಿಹೋದರು. ಆನೆಯಿಂದ ಯಾವುದೇ ಹಾನಿಯಿಲ್ಲದೆ ಪಾರಾಗಿದ್ದಾರೆ. ಘಟನೆಯ ಬಗ್ಗೆ ತಿಳಿದ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಆನೆಯ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ಹೆದರಿಸಲು ಪ್ರಯತ್ನಿಸಿದರು. ಆದರೆ ಆನೆಯ ಮೇಲೆ ಕಲ್ಲು ತೂರಾಟ ನಡೆಸದಂತೆ ಸೂಚಿಸಿದ ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಪ್ರದೇಶದಲ್ಲಿ ಮಾನವ-ಪ್ರಾಣಿ ಸಂಘರ್ಷವನ್ನು ತಡೆಗಟ್ಟಲು ಕ್ರಮಗಳನ್ನು ಪ್ರಾರಂಭಿಸುತ್ತಿಲ್ಲವೆಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸಂಚಾರ ನಿಯಮ ಉಲ್ಲಂಘನೆ; ಕ್ರಮಕ್ಕೆ ಮುಂದಾದ ಪೊಲೀಸರು
ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ, “ಕೃಷಿ ಭೂಮಿಯಲ್ಲಿ ಕೆಲಸ ಮಾಡುವಾಗ ಗ್ರಾಮಸ್ಥರು ಜಾಗರೂಕರಾಗಿರಬೇಕು” ಎಂದು ಮನವಿ ಮಾಡಿದರು.
ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.