ಕಂಬಳಕ್ಕೆ ಬ್ರಿಜ್ ಭೂಷಣ್ ಅತಿಥಿ; ಸಿದ್ದಿ ಸಮುದಾಯದ ಬೇಡಿಕೆ ಎಂದ ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ

Date:

ನವೆಂಬರ್ 25 ಮತ್ತು 26 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಎರಡು ದಿನಗಳ ಕಂಬಳ ಕಾರ್ಯಕ್ರಮಕ್ಕೆ ಲೈಂಗಿಕ ಕಿರುಕುಳ ಪ್ರಕರಣಗಳ ಆರೋಪಿ, ಬಿಜೆಪಿ ಸಂಸದ ಬ್ರಿಜ್ ಭೂಷಣ್‌ ಶರಣ್ ಸಿಂಗ್ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ.

ಆರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಬ್ರಿಜ್‌ ಭೂಷಣ್ ಎದುರಿಸುತ್ತಿದ್ದಾರೆ. ಹಲವು ಗಂಭೀರ ಅಪರಾಧ ಪ್ರಕರಣಗಳು ಬ್ರಿಜ್ ಭೂಷಣ್ ಮೇಲಿವೆ. ಅಂತಹ ವ್ಯಕ್ತಿಯನ್ನು ಕಾರ್ಯಕ್ರಮಕ್ಕೆ ಅತಿಥಿಯಾಗಿ ಬೆಂಗಳೂರು ಕಂಬಳ ಸಮಿತಿ ಆಹ್ವಾನಿನಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಕರ್ನಾಟಕ ಸರ್ಕಾರ ಕೂಡ ಈ ಕಂಬಳಕ್ಕಾಗಿ ಒಂದು ಕೋಟಿ ರೂ. ಘೋಷಣೆ ಮಾಡಿದೆ.

ನವೆಂಬರ್ 25 ರಂದು ಸ್ಥಳೀಯ ಕುಸ್ತಿಪಟುಗಳನ್ನು ಬ್ರಿಜ್ ಭೂಷಣ್ ಅಭಿನಂದಿಸಲಿದ್ದಾರೆ. ನಟ ದರ್ಶನ್, ಮಾಜಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟದ ಅಧ್ಯಕ್ಷ ವಿಶಾಲ್ ಸಿಂಗ್ ಸನ್ಮಾನ ಸಮಾರಂಭದಲ್ಲಿ ಇತರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಂಗಳೂರು ಕಂಬಳ ಸಮಿತಿ ಎಂಬ ಖಾಸಗಿ ಗುಂಪು ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ನವೆಂಬರ್ 25 ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಮುಖ್ಯ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಡಿವಿ ಸದಾನಂದ ಗೌಡ ಅವರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ. ಎರಡು ದಿನಗಳ ಕಾರ್ಯಕ್ರಮದ ಅಧಿಕೃತ ಆಹ್ವಾನ ಪಟ್ಟಿಯಲ್ಲಿ ಹಲವಾರು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಹೆಸರುಗಳಿವೆ.

“ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಕುಸ್ತಿಪಟುಗಳು ಪದಕ ಗೆದ್ದಿದ್ದಾರೆ. ಭಾರತೀಯ ಕುಸ್ತಿಪಟುಗಳಿಗೆ ಫೆಡರೇಶನ್‌ನಿಂದಾಗಿ ಅವಕಾಶ ಸಿಕ್ಕಿತು. ವಿಜೇತರನ್ನು ಸಂಸದ ಬ್ರಿಜ್ ಭೂಷಣ್ ಅವರು ಅಭಿನಂದಿಸಲು ಬಯಸಿದ್ದರು” ಎಂದು ಆಯೋಜಕರು ತಿಳಿಸಿರುವುದಾಗಿ ವರದಿಯಾಗಿದೆ.

ಆಹ್ವಾನ ಪತ್ರಿಕೆಯಲ್ಲಿ ’ಬ್ರಿಜ್ ಭೂಷಣ್ ಶರಣ್ ಸಿಂಗ್’ ಹೆಸರು

’ಈದಿನ.ಕಾಂ’ಗೆ ಪ್ರತಿಕ್ರಿಯೆ ನೀಡಿದ ಕಂಬಳ ಸಮಿತಿಯ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ರೈ, “ಸಿದ್ದಿ ಜನಾಂಗದ ಸಂಘಟನೆಯವರು ಬಂದು ಬ್ರಿಜ್ ಭೂಷಣ್ ಅವರನ್ನು ಕರೆಯುವಂತೆ ತಿಳಿಸಿದರು. ಎಲ್ಲ ಜಾತಿ ಜನಾಂಗದವರ ಮುಖಂಡರನ್ನು ಕರೆಯಲಾಗುತ್ತಿದೆ. ಸಮುದಾಯದ ಕೋರಿಕೆ ಮೇರೆಗೆ ಬ್ರಿಜ್ ಭೂಷಣ್‌ ಅವರನ್ನು ಆಹ್ವಾನಿಸಲಾಗಿದೆ. ಅವರು ಕಾರ್ಯಕ್ರಮಕ್ಕೆ ಬರುತ್ತಾರೆಂಬುದು ಖಚಿತವಿಲ್ಲ” ಎಂದಿದ್ದಾರೆ.

“ಅವರು ಕಾರ್ಯಕ್ರಮಕ್ಕೆ ಬಂದರೂ ಕಂಬಳಕ್ಕೆ ಹೊರತುಪಡಿಸಿ ಬೇರೆ ವಿಚಾರಗಳ ಕುರಿತು ಮಾತನಾಡಲು ಅನುಮತಿ ಕೊಡುವುದಿಲ್ಲ” ಎಂದು ತಿಳಿಸಿದ್ದಾರೆ.

ಈದಿನ: ಬ್ರಿಜ್ ಭೂಷಣ್ ಏನು ಮಾತನಾಡುತ್ತಾರೆ ಎಂಬುದು ಮುಖ್ಯವಲ್ಲ. ಕರಾವಳಿಯ ಸಾಂಸ್ಕೃತಿಕ ಅಸ್ಮಿತೆಯ ಕಂಬಳ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಬ್ರಿಜ್ ಭೂಷಣ್ ಥರದ ವ್ಯಕ್ತಿಗೆ ಆಹ್ವಾನ ನೀಡಿರುವುದನ್ನು ಆಯೋಜಕರು ಸಮರ್ಥಿಸುತ್ತೀರಾ? ಭಾರತದ ಪ್ರಖ್ಯಾತ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಹೋರಾಡುತ್ತಿದ್ದಾರೆ, ಹೀಗಿರುವಾಗ ಕಂಬಳ ಆಯೋಜಕರಿಗೆ ಕೆಟ್ಟ ಹೆಸರು ಬರುವುದಿಲ್ಲವೇ? ಒಂದು ಕೋಟಿ ರೂ. ಕೊಟ್ಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಅಪಚಾರ ಎಸಗಿದಂತಲ್ಲವೇ? ಯಾರೋ ಹೇಳಿದರೆಂದು ಮಾತ್ರಕ್ಕೆ ಪೋಕ್ಸೋ ಪ್ರಕರಣದ ಆರೋಪಿ ಮುರುಘಾ ಶರಣರನ್ನೂ ಆಹ್ವಾನಿಸುತ್ತೀರಾ?

ಅಶೋಕ್ ರೈ: ಬ್ರಿಜ್ ಭೂಷಣ್ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಚರ್ಚೆ ಮಾಡಿಲ್ಲ. ಅದರ ಬಗ್ಗೆ ಗೊತ್ತಿಲ್ಲ. ಸಿದ್ದಿ ಜನಾಂಗದ ವಿನಂತಿ ಕಾರಣಕ್ಕಾಗಿ ಕರೆದಿದ್ದೇವೆ. ಅವರು ಬರುವ ಗ್ಯಾರಂಟಿ ಏನೂ ಇಲ್ಲ. ಬಂದರೂ ಕಂಬಳ ಬಿಟ್ಟು ಬೇರೆ ವಿಚಾರ ಮಾತನಾಡಲು ಬಿಡಲ್ಲ. ಕರೆದಿದ್ದನ್ನೂ ಸ್ವಾಗತ ಮಾಡುತ್ತಿದ್ದೇವೆ ಎಂದು ಅರ್ಥವಲ್ಲ. ಬೇರೆ ಬೇರೆಯವರು ಬಂದು ಆಹ್ವಾನಿತರ ಹೆಸರು ತಿಳಿಸಿದ್ದಾರೆ. ಆಗುವುದಿಲ್ಲವೆಂದು ಹೇಳುವುದಕ್ಕೆ ಕಷ್ಟವಾಗುತ್ತದೆ. ನಮ್ಮ ಗಮನಕ್ಕೆ ವಿಚಾರವನ್ನು ತಂದಿದ್ದೀರಿ. ಈ ವರ್ಗದ ಜನರೊಂದಿಗೆ ಚರ್ಚೆ ಮಾಡಿ ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತೇವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಆರೋಪಿಯನ್ನು ವಿಐಪಿ ಸ್ಥಾನದಲ್ಲಿ ಕೂರಿಸಿ ಶಾಲು ಹೊದಿಸಿ ಹೂಗುಚ್ಛ ನೀಡಿ ಸ್ವಾಗತಿಸುವುದು ಎಷ್ಟು ಮಾತ್ರಕ್ಕೂ ಸಮರ್ಥನೀಯವಲ್ಲ.

    ಹತ್ತು ಹಲವು ಆರೋಪಗಳನ್ನು ಹೊತ್ತಿರುವ ವ್ಯಕ್ತಿಯನ್ನು ಎಲ್ಲಿ ಕೂರಿಸಬೇಕೋ, ಅಲ್ಲಿಯೇ ಕೂರಿಸಬೇಕು.

    ಗೌರವಕ್ಕೆ ಪಾತ್ರರಾದವರನ್ನು ಗೌರವಿಸುವವನು , ಗೌರವಾನ್ವಿತನಾಗಿರಬೇಕು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾತಿ ಗಣತಿಗೆ ವಿರೋಧ; ನಿರ್ದಯಿ ಸಾಮಾಜಿಕ ದ್ರೋಹ

ಹಿಂದುತ್ವ ಪ್ರೇರಿತ ರಾಜಕಾರಣವನ್ನು ಜೀವಂತವಾಗಿಟ್ಟುಕೊಳ್ಳಲು ದಲಿತ ಹಿಂದುಳಿದ ವರ್ಗಗಳ ಹಿತರಕ್ಷಣೆಯ ಮಾತಾಡುತ್ತಿರುವ...

ಬೆಂಗಳೂರು ಕಂಬಳ | ಪಾತಕಿ ಶ್ಯಾಮ್ ಕಿಶೋರ್ ಗರಿಕಪಟ್ಟಿಗೆ ಆಹ್ವಾನ: ಮುಂಬಯಿ ತುಳುವರಿಗೆ ಅಚ್ಚರಿ!

80-90ರ ದಶಕದಲ್ಲಿ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ 'ಅಂಡರ್ ವರ್ಲ್ಡ್‌' ಪಾತಕಿಗಳ ನೆತ್ತರ...

ಜಾತಿ ಸಮೀಕ್ಷೆಯ ಪರ-ವಿರೋಧಗಳ ಸುತ್ತಮುತ್ತ…

ಜಾತಿಯನ್ನು ಗುರುತಿಸಲು ಬಳಸಿದ ಗುಣಲಕ್ಷಣಗಳಲ್ಲಿ ಆರ್ಥಿಕ ಹಾಗು ರಾಜಕೀಯ ಅಂಶಗಳು ಸೇರದಿರುವುದು...

ಬ್ರಿಜ್‌ ಭೂಷಣ್‌ ಆಹ್ವಾನಕ್ಕೂ ನಮಗೂ ಸಂಬಂಧವಿಲ್ಲ: ಸಿದ್ಧಿ ಸಮುದಾಯ

ಸಿದ್ದಿ ಸಮುದಾಯವರು ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಅವರನ್ನು...