ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಸರ್ಕಾರಿ ಕಚೇರಿಯಲ್ಲಿ ಪಾರ್ಟಿ ನಡೆಸಿದ ಆರೋಪ ಹಿನ್ನೆಲೆ ಆರ್‌ಡಿಪಿಆರ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಸೇರಿದಂತೆ ಮೂವರು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡವರಲ್ಲಿ ಆರ್‌ಡಿಪಿಆರ್ ಎಇಇ ಹನುಮಪ್ಪ ಆದವಾನಿ, ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ರಾಮಣ್ಣ ಪೂಜಾರಿ ಹಾಗೂ ಕಾವಲುಗಾರ ಹನುಮಂತ ಸೇರಿದ್ದಾರೆ.
ಲಿಂಗಸುಗೂರಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ ಕಚೇರಿಯಲ್ಲಿ ಹೊರಗಿನ ವ್ಯಕ್ತಿಗಳ ಜೊತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾರ್ಟಿ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಸರ್ಕಾರಿ ಕಚೇರಿಯನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಿರುವುದು ಹಾಗೂ ಕರ್ತವ್ಯಲೋಪ ಎಸಗಿರುವ ಆರೋಪದ ಮೇರೆಗೆ ಇಲಾಖಾ ವಿಚಾರಣೆ ಬಾಕಿ ಇಟ್ಟುಕೊಂಡೇ ಅಮಾನತು ಆದೇಶ ಹೊರಡಿಸಿದೆ.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಗ್ಯಾಸ್ ಸಿಲಿಂಡರ್ ಸಂಕಷ್ಟ; ನೂರಕ್ಕೂ ಹೆಚ್ಚು ಜನ ಪರದಾಟ
ಈ ಕುರಿತು ಆರ್‌ಡಿಪಿಆರ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಚೇತನ್ ಎಂ. ಆದೇಶ ಹೊರಡಿಸಿದ್ದಾರೆ.




