ಮುಂಡಗೋಡ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘SIR ವಿರೋಧಿ ಕರ್ನಾಟಕ’, ನಾಗರಿಕ ಮತಕಾವಲು ಸಮಿತಿ, ಜಾತ್ಯತೀತ ಪಕ್ಷಗಳು ಹಾಗೂ ವಿವಿಧ ನಾಗರಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿರುವ ‘SIR ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’ಕ್ಕೆ ನೂರ್ ಶ್ರೀಧರ್ ಅವರಿಂದ ಚಾಲನೆ ನೀಡಲಾಯಿತು.
ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಿಂದ ಬಡವರು, ಆದಿವಾಸಿಗಳು ಸೇರಿದಂತೆ ಹಲವು ವರ್ಗದ ಜನರು ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕವಿದೆ ಎಂದು ಸಂಘಟನೆಗಳ ಮುಖಂಡರು ತಿಳಿಸಿದರು. ಮುಂಡಗೋಡಿನ ಗಾಂಧಿನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಲಾಯಿತು.

ನಂತರ ತಂಡವು ತಾಲೂಕಿನ ಮೈನಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಿದ್ದಿ ಹಾಗೂ ಗೌಳಿ ಸಮುದಾಯದ ಜನರೊಂದಿಗೆ ಸಂವಾದ ನಡೆಸಿತು. ಗ್ರಾಮಸ್ಥರು ತಮ್ಮ ಸಾಂಪ್ರದಾಯಿಕ ಜನಪದ ನೃತ್ಯ ಮತ್ತು ಹಾಡುಗಳ ಮೂಲಕ ತಂಡವನ್ನು ಸ್ವಾಗತಿಸಿದರು. ಈ ವೇಳೆ ಗ್ರಾಮಸ್ಥರು SIR ಪ್ರಕ್ರಿಯೆ ಸಂದರ್ಭದಲ್ಲಿ ಎದುರಾಗುತ್ತಿರುವ ಸಮಸ್ಯೆಗಳು, ಅಗತ್ಯ ದಾಖಲೆಗಳ ಕೊರತೆ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಕಾಣಿಸದಿರುವುದು ಸೇರಿದಂತೆ ಹಲವು ವಿಚಾರಗಳನ್ನು ಮುಖಂಡರ ಗಮನಕ್ಕೆ ತಂದರು.
ಈ ಸುದ್ದಿ ಓದಿದ್ದೀರಾ? ಭಟ್ಕಳ | ಮಟ್ಕಾ ದಂಧೆ ವಿರುದ್ಧ ಪೊಲೀಸರ ಕಾರ್ಯಾಚರಣೆ; ಕಿಂಗ್‌ಪಿನ್‌ಗಳ ಪತ್ತೆ ಎಂದು?
ಸ್ಥಳೀಯರ ಅಹವಾಲುಗಳನ್ನು ಆಲಿಸಿದ ತಂಡವು SIR ಪ್ರಕ್ರಿಯೆ ಕುರಿತು ಅಗತ್ಯ ಮಾಹಿತಿ ಹಾಗೂ ಜಾಗೃತಿ ಮೂಡಿಸಿತು. ಕರ್ನಾಟಕದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ ಸುಮಾರು 1.8 ಕೋಟಿ ಜನರು ASDDO ಪಟ್ಟಿಯಲ್ಲಿದ್ದಾರೆ ಹಾಗೂ 43 ಲಕ್ಷಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಲಾಗಿದೆ ಎಂದು ಪ್ರವಾಸದ ಆಯೋಜಕರಾದ ಇಸ್ಬೆಲ್ಲಾ ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದಾಖಲೆಗಳನ್ನು ಒದಗಿಸುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಬಡ ಹಾಗೂ ಶೋಷಿತ ವರ್ಗದ ಜನರು ತೊಂದರೆ ಎದುರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. SIR ಪ್ರಕ್ರಿಯೆಯ ಕುರಿತು ಜಾಗೃತಿ ಮೂಡಿಸುವ ಈ ಪ್ರವಾಸದಲ್ಲಿ ನಟ ಹಾಗೂ ಚಿಂತಕ ಪ್ರಕಾಶ್ ರಾಜ್, ನಟ ಕಿಶೋರ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಹಿತಿ, ಕಲಾವಿದರು ಹಾಗೂ ಸಾಮಾಜಿಕ ಸಂಘಟನೆಗಳ ಪ್ರಮುಖರು ಭಾಗವಹಿಸುತ್ತಿದ್ದಾರೆ.
ಮೈನಳ್ಳಿ ಅಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನೂರ್ ಶ್ರೀಧರ್, ಗೌಳಿ ಸಮುದಾಯದ ರಾಜ್ಯ ಅಧ್ಯಕ್ಷರಾದ ದೇವು ಪಾಟೀಲ, ಸಾಧನಾ ಸಂಸ್ಥೆಯ ಇಸ್ಬೆಲ್ಲಾ ಕ್ಸೇವಿಯರ್, ಅಕ್ಷತಾ, ತನ್ವೀರ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜ್ಞಾನೇಶ್ವರ ಗುಡಿಯಾಳ ಮುಖಂಡರಾದ ವಿಠ್ಠು ಗಾವಡೆ, ಸಿದ್ದಿ ಸಮುದಾಯದ ಮುಖಂಡರಾದ ಜೂಜೆ ಸಿದ್ದಿ, ಸವೇರಾ ಸಿದ್ದಿ, ಸುನೀಲ ಸಿದ್ದಿ, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಂದರ್ಭದಲ್ಲಿ ಮುಂಡಗೋಡ ಗಾಂಧಿನಗರ ಜೈಭೀಮ್ ಸಂಘಟನೆಯ ಬಸವರಾಜ ಹಳ್ಳಮ್ಮನ್ನವರ, ಮೈಲಾರಿ ಹುಲಗುರ, ಸುರೇಶ ಚಲವಾದಿ ಹಾಗೂ ಸಂಘಟನೆಯ ಕಾರ್ಯಕರ್ತರು, DSS ರಾಜ್ಯ ಸಂಘಟನಾ ಸಂಚಾಲಕ ಎಸ್. ಫಕ್ಕಿರಪ್ಪ, , ಆದಿಜಾಂಭವ ಶಾಲೆಯ ಮುಖ್ಯೋಪಾಧ್ಯಾಯ ಸೋಮಣ್ಣ ಮುಡೆಣ್ಣನವರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂವಿಧಾನ ನೀಡಿರುವ ಮತದಾನದ ಹಕ್ಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೆ.22ರಿಂದ 30ರವರೆಗೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಈ ಪ್ರವಾಸ ನಡೆಯಲಿದೆ.




