ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಷೇರುದಾರರಾಗಿರುವ ರೈತರಿಗೆ ಒಂದು ವಾರದೊಳಗಾಗಿ ಸಾಲ ಸೌಲಭ್ಯ ಮಂಜೂರು ಮಾಡಿ ವಿತರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾ ಸಹಕಾರ ಬ್ಯಾಂಕಿನ ಜನರಲ್ ಮ್ಯಾನೇಜರ್ ವಿನೋದ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ. ಮರಂಕಯ್ಯ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ ಹಾಗೂ ನಗರ ಅಧ್ಯಕ್ಷ ಧನಂಜಯ ಕಿರಿಜಾಜಿ ಅವರು ಮನವಿ ಸಲ್ಲಿಸಿ, ಸಮಸ್ಯೆಯನ್ನು ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರುವಂತೆ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೊಸೂರ್ ಕುಮಾರ್, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರಿಗೆ ಸಾಲ ಮಂಜೂರು ಮಾಡುವಂತೆ ಈಗಾಗಲೇ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ಕಾಲಾವಕಾಶ ಕೇಳಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಹನಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಸುಮಾರು 145 ರೈತರು ಕಳೆದ ಎರಡು ವರ್ಷಗಳಿಂದ ಬ್ಯಾಂಕಿನಲ್ಲಿ ಹಣ ಜಮಾ ಮಾಡಿದ್ದರೂ ಅವರಿಗೆ ಸಾಲ ಸೌಲಭ್ಯ ದೊರೆತಿಲ್ಲ. ಇದೇ ರೀತಿಯ ಸಮಸ್ಯೆ ಜಿಲ್ಲೆಯ ಇತರೆ ಕೆಲವು ಸಹಕಾರ ಸಂಘಗಳಲ್ಲಿಯೂ ಮುಂದುವರಿದಿದೆ. ಇದರಿಂದ ರೈತರು ಬಡ್ಡಿರಹಿತ ಸಾಲ ಸೌಲಭ್ಯದಿಂದ ವಂಚಿತರಾಗಿದ್ದು, ಬೇರೆ ಬ್ಯಾಂಕುಗಳಲ್ಲಿಯೂ ಸಾಲ ಪಡೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ಈ ವಿಶೇಷ ಲೇಖನ ಓದಿದ್ದೀರಾ? ಗಾಂಧೀಜಿ ತತ್ವಗಳ ಪ್ರಸ್ತುತತೆ: ಸಮಾನತೆಯ ಸಮಾಜಕ್ಕೆ ಶ್ರಮದ ಘನತೆಯೇ ಅಡಿಪಾಯ
ತಾಲ್ಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ, ಅಕ್ರಮಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ರೈತರಿಗೆ ಯಾವುದೇ ವಿಳಂಬವಿಲ್ಲದೆ ಒಂದು ವಾರದೊಳಗೆ ಸಾಲ ಸೌಲಭ್ಯ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವಿಶೇಷ ಲೇಖನ ಓದಿದ್ದೀರಾ? ಕಾಲಜ್ಞಾನ ಸಾರಿದ ಮಂಟೇದಲಿಂಗಯ್ಯ’: ನೀಲಗಾರರ ಸ್ವರವಚನಗಳಲ್ಲಿ ಅಡಗಿರುವ ಜನಪದ ತತ್ವ
ನಿಗದಿತ ಒಂದು ವಾರದೊಳಗೆ ರೈತರಿಗೆ ಸಾಲ ಸೌಲಭ್ಯ ಕಲ್ಪಿಸದಿದ್ದರೆ, ರೈತರ ಸಂಕಷ್ಟ ನಿವಾರಣೆಗಾಗಿ ರಾಜ್ಯ ರೈತ ಸಂಘ ಮುಂದಿನ ದಿನಗಳಲ್ಲಿ ಗಂಭೀರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವಿಶೇಷ ಲೇಖನ ಓದಿದ್ದೀರಾ? ಹಳೇ ಮೈಸೂರು | ಕಲ್ಯಾಣದಿಂದ ಬೊಪ್ಪೇಗೌಡನಪುರದವರೆಗೆ: ಜನಪದ ಕಾವ್ಯದ ಬೆಳಕಿನಲ್ಲಿ ಮಂಟೇಸ್ವಾಮಿ
ಈ ಸಂದರ್ಭದಲ್ಲಿ ಹನಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯ ರೈತರಾದ ಹೊಂಬೆಗೌಡ, ಸಿ.ಎನ್. ನಾಗರಾಜು, ಅಲೆಕ್ಸ್ ಲೋಕೇಶ್, ಜಿ.ಆರ್. ನಾಗರಾಜು, ಮಂಜುನಾಥ್, ಸುಬ್ರಮಣಿ, ಸಂತೋಷ್ ಸೇರಿದಂತೆ ಹಲವರು ಇದ್ದರು.



