ನಮ್ಮ ಡಿಸಿಎಂ | ಬಿಕ್ಕಟ್ಟುಗಳನ್ನೇ ಮೆಟ್ಟಿಲುಗಳನ್ನಾಗಿ ಬಳಸಿ ಬೆಳೆದ ಶಿವಕುಮಾರ್‌

Date:

ರಾಜಕಾರಣವೆಂದರೆ ಏರಿಳಿತದ ಜತೆಗೆ ಮುಳ್ಳಿನ ಮೇಲಿನ ನಡಿಗೆ ಕೂಡ ಎನ್ನುವುದನ್ನು ಅನುಭವದಿಂದ ಅರಿತಿರುವ ಡಿ ಕೆ ಶಿವಕುಮಾರ್, ಬಿಕ್ಕಟ್ಟುಗಳನ್ನೇ ಮೆಟ್ಟಿಲುಗಳನ್ನಾಗಿ ಬಳಸಿ ಬೆಳೆದ ರಾಜಕಾರಣಿ. ತಮ್ಮ ರಾಜಕೀಯ ಚಾಣಾಕ್ಷತನ, ದಾಢಸೀತನದ ಜೊತೆಗೆ ಅಹಂಕಾರದ ಮುದ್ದೆಯಂತೆ ಕಾಣುವ ಡಿಕೆ, ಅಪಾರ ದೈವಭಕ್ತರು.

2020ರ ಮಾರ್ಚಿ 11ರಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಿ.ಕೆ ಶಿವಕುಮಾರ್, ಅಲ್ಲಿಂದ ಇಲ್ಲಿಯವರೆಗೆ ಪಕ್ಷಕ್ಕಾಗಿ ಅಪಾರ ಹಣ, ಶ್ರಮ ಮತ್ತು ಸಮಯ ಸುರಿದಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಾಡಿ, ಕಾರ್ಯಕರ್ತರನ್ನು ಹುರಿದುಂಬಿಸಿ, ಪಕ್ಷ ಸಂಘಟಿಸಿದ್ದಾರೆ. ಜಡತ್ವದಿಂದ ನರಳುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಜೀವ ತುಂಬಿದ್ದಾರೆ. ಬಲಾಢ್ಯ ಬಿಜೆಪಿಯ ಎದುರು ಗೆಲ್ಲಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣದಲ್ಲೂ, ರಾಜ್ಯದ ಜನತೆಯ ಮನಗೆದ್ದು 135 ಸ್ಥಾನ ಗೆಲ್ಲಿಸಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಹಾಗಾಗಿ ಡಿಕೆಶಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಡುವುದು ಸಹಜ. ಅದು ರಾಜಕಾರಣದಲ್ಲಿ ಸರಿಯಾದ ನಡೆ ಕೂಡ. ಸ್ಥಾನ ಸಿಗುತ್ತದೋ ಇಲ್ಲವೋ, ಅದು ಬೇರೆ ಪ್ರಶ್ನೆ. ಆದರೆ ಬೇಡಿಕೆ ಇಡುವುದು, ಅದಕ್ಕಾಗಿ ಸಮರ್ಥ ಕಾರಣಗಳನ್ನು ಕೊಟ್ಟು ಪಟ್ಟು ಹಿಡಿಯುವುದು ರಾಜಕಾರಣದಲ್ಲಿ ಇದ್ದದ್ದೆ. ಆ ನಿಟ್ಟಿನಲ್ಲಿ ಶಿವಕುಮಾರ್ ಅವರ ಪಕ್ಷ ನಿಷ್ಠೆ, ಹೋರಾಟ ಮತ್ತು ಸಮಸ್ಯೆ-ಸವಾಲುಗಳನ್ನು ಎದುರಿಸಿದ ರೀತಿಯನ್ನು ಪರಿಗಣಿಸಲೇಬೇಕಾಗುತ್ತದೆ. ಅಕಸ್ಮಾತ್ ಅವರ ಬೇಡಿಕೆ ಈಡೇರದಿದ್ದರೆ ಭವಿಷ್ಯಕ್ಕೆ ಬುನಾದಿ ಎನ್ನುವುದು ಡಿಕೆಗೂ ಗೊತ್ತಿದೆ.

ಇವೆಲ್ಲವನ್ನು ಅಳೆದು ಸುರಿದ ಡಿ.ಕೆ ಶಿವಕುಮಾರ್, ಹೈಕಮಾಂಡಿನ ಆದೇಶಕ್ಕೆ ತಲೆಬಾಗಿ, ಉಪಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಕೈ ಜೋಡಿಸಿ, ಸರ್ಕಾರ ಸರಾಗವಾಗಿ ಸಾಗಲು ಸಹಕರಿಸುತ್ತಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅನುಭವದಿಂದ ಅರಿತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕನಕಪುರ ತಾಲೂಕಿನ ದೊಡ್ಡಾಲದಳ್ಳಿಯ ಸಾಮಾನ್ಯ ಕೃಷಿ ಕುಟುಂಬದಲ್ಲಿ 1962ರಲ್ಲಿ ಜನಿಸಿದ ಶಿವಕುಮಾರ್, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹತ್ತಿರದ ಬೆಂಗಳೂರಿಗೆ ಬಂದವರು. ಕಾಲೇಜು ದಿನಗಳಲ್ಲಿ ಹೋರಾಟಗಳಲ್ಲಿ ಭಾಗಿಯಾಗಿ ರಾಜಕಾರಣದತ್ತ ಆಕರ್ಷಿತರಾಗಿ ಕಾಂಗ್ರೆಸ್ ಪಕ್ಷ ಸೇರಿದರು. ಇದೇ ಸಮಯದಲ್ಲಿ ರೌಡಿ ಕೊತ್ವಾಲ್ ಸಹಚರನಾಗಿದ್ದು, ಆ ಜಗತ್ತಿನೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದರು. ಯುವ ಘಟಕದ ಕಾರ್ಯದರ್ಶಿಯಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.

ಈ ಸುದ್ದಿ ಓದಿದ್ಧೀರಾ: ರೈತರಿಂದ ಖರೀದಿಸುವ ಹಾಲಿನ ನಿಗದಿ ದರ ಕಡಿತ ಮಾಡಬೇಡಿ; ಸಿಎಂ ಸೂಚನೆ

ಅದೇ ಸಮಯಕ್ಕೆ 1985ರಲ್ಲಿ ಎದುರಾದ ವಿಧಾನಸಭಾ ಚುನಾವಣೆಗೆ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದರು. ಆಗ ರಾಜ್ಯದಲ್ಲಿ ಜನತಾಪಕ್ಷ ಆಡಳಿತದಲ್ಲಿತ್ತು. ದೇವೇಗೌಡರು ಬಲಿಷ್ಠ ಒಕ್ಕಲಿಗ ನಾಯಕರಾಗಿದ್ದು, ಹೆಗಡೆಯವರೊಂದಿಗೆ ರಾಜಕೀಯ ಕಾದಾಟಕ್ಕಿಳಿದಿದ್ದ ಸಂದರ್ಭವದು. ಆ ಚುನಾವಣೆಯಲ್ಲಿ ಗೌಡರು ಹೊಳೆನರಸೀಪುರ ಮತ್ತು ಸಾತನೂರು- ಎರಡೂ ಕಡೆಯಿಂದ ಸ್ಪರ್ಧಿಸಿದರು. ಸುಲಭವಾಗಿ ಗೆಲ್ಲಲು ಅಂದಿನ ಕಾಂಗ್ರೆಸ್ ಮುಖಂಡರಾದ ವೀರಪ್ಪ ಮೊಯ್ಲಿ ಮತ್ತು ಕೆ.ಎಚ್. ಪಾಟೀಲರೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಆ ಹೊಂದಾಣಿಕೆಯ ಫಲವಾಗಿ ಸಾತನೂರು ಕ್ಷೇತ್ರಕ್ಕೆ ಡಮ್ಮಿ ಕ್ಯಾಂಡಿಡೇಟ್ ಆಗಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದವರು ಡಿ.ಕೆ ಶಿವಕುಮಾರ್.  

ದೊಡ್ಡವರ ಹೊಂದಾಣಿಕೆ ಮತ್ತು ಲೆಕ್ಕಾಚಾರದ ಫಲವಾಗಿ ಶಿವಕುಮಾರ್ ಸೋತರೂ, ದೊಡ್ಡಗೌಡರೊಂದಿಗೆ ಸೆಣೆಸಿದ ಪುಟ್ಟ ಪೈಲ್ವಾನ ಎಂದು ಪ್ರಚಾರ ಪಡೆದು ರಾಜಕೀಯವಾಗಿ ನೆಲೆಯೂರಿದರು. 1987ರಲ್ಲಿ ಸಾತನೂರು ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದರು. 1989ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷದಿಂದ ಸಾತನೂರು ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಮೊತ್ತ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದರು.

ವಿಧಾನಸೌಧ ಪ್ರವೇಶಿಸಿದ ಮೊದಲ ಅವಧಿಯಲ್ಲಿಯೇ ಡಿಕೆಯವರ ಅದೃಷ್ಟ ಖುಲಾಯಿಸಿ, ಬಂದೀಖಾನೆ ಖಾತೆ ಸಚಿವರೂ ಆದರು. 1991ರಲ್ಲಿ ಮುಖ್ಯಮಂತ್ರಿಯಾದ ಎಸ್.ಬಂಗಾರಪ್ಪನವರು, ಡಿಕೆಗೆ ಸಚಿವ ಸ್ಥಾನ ನೀಡಿ, ರಾಜಕೀಯವಾಗಿ ಬೆಳೆಯಲು ಅವಕಾಶ ಕಲ್ಪಿಸಿಕೊಟ್ಟರು. ಆದರೆ 1994ರಲ್ಲಿ ಎದುರಾದ ಚುನಾವಣೆಗೆ ಡಿಕೆಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿತು. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದ ಡಿಕೆ, ಮತ್ತೆ ಕಾಂಗ್ರೆಸ್ ಸೇರಿದರು. 1999ರಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಎಸ್.ಎಂ.ಕೃಷ್ಣ ಪಾಂಚಜನ್ಯ ಮೊಳಗಿಸಿ, ಕಾಂಗ್ರೆಸ್ ಬಹುಮತ ಗಳಿಸಿ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿ ಮುಖ್ಯಮಂತ್ರಿಯಾದರು. ಎಸ್.ಎಂ ಕೃಷ್ಣರ ನೀಲಿಗಣ್ಣಿನ ಹುಡುಗನಾದ ಶಿವಕುಮಾರ್, ನಗರಾಭಿವೃದ್ಧಿ, ಸಹಕಾರ ಸಚಿವರಾಗಿ ರಾಜಕಾರಣದ ಒಳ-ಹೊರಗನ್ನು ಅರ್ಥ ಮಾಡಿಕೊಳ್ಳತೊಡಗಿದರು. ಅಧಿಕಾರವನ್ನು ಅಸ್ತ್ರವನ್ನಾಗಿ ಪ್ರಯೋಗಿಸಿ ಹಣ ಮಾಡುವ ಕಲೆಯನ್ನು ಕರಗತ ಮಾಡಿಕೊಂಡರು. ಕೃಷ್ಣರು ಕಲ್ಪಿಸಿದ ಅವಕಾಶವನ್ನು ಕೊಂಚ ಹೆಚ್ಚಾಗಿಯೇ ದುರುಪಯೋಗಪಡಿಸಿಕೊಂಡು ವಿರೋಧಿಗಳನ್ನು ಮಟ್ಟ ಹಾಕಿದರು. ಕಾಂಗ್ರೆಸ್ಸಿನ ಹಿರಿಯರನ್ನು ಹಿಂಬದಿಗೆ ಸರಿಸಿ ಮುಂಚೂಣಿ ನಾಯಕನಾಗಿ ಹೊರಹೊಮ್ಮಿದರು.  

ಹಳೇ ಮೈಸೂರು ಭಾಗದಲ್ಲಿ ಕೃಷ್ಣ-ಶಿವಕುಮಾರ್ ಒಂದಾಗಿ ಒಕ್ಕಲಿಗರನ್ನು ಒಗ್ಗೂಡಿಸುವ, ಸಮುದಾಯದ ಮುಖಂಡರಾಗಿ ಪ್ರಭಾವಿ ನಾಯಕರಾಗಿ ಹೊರಹೊಮ್ಮುವುದು ಮತ್ತೊಬ್ಬ ಒಕ್ಕಲಿಗ ನಾಯಕ ದೇವೇಗೌಡರಿಗೆ ಸಹಿಸಲಸಾಧ್ಯವಾದ ಸಂಕಟವಾಯಿತು. ಅದರ ಫಲವಾಗಿ 2004ರಲ್ಲಿ ರಚನೆಯಾದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಿವಕುಮಾರ್‌ಗೆ ಸ್ಥಾನ ನೀಡದೆ ಅವಮಾನಿಸಿ, ಅಧಿಕಾರದಿಂದ ದೂರವಿಡಲಾಯಿತು. ಆದರೆ ಸೈಡಿಗೆ ಸರಿಸಿದ್ದನ್ನೇ ಡಿಕೆ ಸವಾಲನ್ನಾಗಿ ಸ್ವೀಕರಿಸಿ, 2004ರ ಲೋಕಸಭಾ ಚುನಾವಣೆಯಲ್ಲಿ, ಕನಕಪುರ ಲೋಕಸಭಾ ಕ್ಷೇತ್ರದಿಂದ ದೇವೇಗೌಡರ ವಿರುದ್ಧ ರಾಜಕೀಯವಾಗಿ, ಸಾರ್ವಜನಿಕವಾಗಿ ಅಷ್ಟೇನೂ ಪರಿಚಿತರಲ್ಲದ ತೇಜಸ್ವಿನಿ ಎಂಬ ಪತ್ರಕರ್ತೆಯನ್ನು ಅಭ್ಯರ್ಥಿಯನ್ನಾಗಿ ಮಾಡಿ, ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದರು. ಇದಷ್ಟೇ ಅಲ್ಲ, ಚಿತ್ರನಟಿ ರಮ್ಯಾ ಅವರನ್ನೂ ರಾಜಕೀಯಕ್ಕೆ ಕರೆತಂದು, ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿ, ಗೆಲ್ಲಿಸಿಕೊಂಡು ಬರುವಲ್ಲಿ ಶಿವಕುಮಾರ್ ಯಶಸ್ವಿಯಾದರು. ಮಂಡ್ಯವನ್ನೂ ಮರಳಿ ಪಕ್ಷದ ತೆಕ್ಕೆಗೆ ತೆಗೆದುಕೊಂಡರು

ಸೋತ ದೇವೇಗೌಡರು, ತಮ್ಮ ಹಿಡಿತದಲ್ಲಿದ್ದ ಧರಂಸಿಂಗ್ ಸರ್ಕಾರದಲ್ಲಿ 2006ರಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡುವಾಗ, ಡಿಕೆಯವರ ಸಾತನೂರು ಕ್ಷೇತ್ರವನ್ನು ಇಲ್ಲದಂತೆ ಮಾಡಿ, ಅವರ ರಾಜಕೀಯ ಅಸ್ತಿತ್ವಕ್ಕೇ ಧಕ್ಕೆ ತಂದರು. ಎದೆಗುಂದದ ಡಿಕೆ, 2008ರ ಚುನಾವಣೆಯಲ್ಲಿ ಕನಕಪುರವೆಂಬ ಹೊಸ ಕ್ಷೇತ್ರದಿಂದಲೂ ಗೆದ್ದರು. ಅಷ್ಟೇ ಅಲ್ಲ, 2013ರಲ್ಲಿಯೂ ಗೆಲುವು ಸಾಧಿಸಿದರು. ಆದರೆ, 2004ರಿಂದ 2014ರವರೆಗೆ ಯಾವುದೇ ಅಧಿಕಾರದ ಸ್ಥಾನವಿಲ್ಲದೆ ಇದ್ದ ಶಿವಕುಮಾರ್, ಆ ವೇಳೆಯಲ್ಲಿ ತೋರಿದ ಪಕ್ಷನಿಷ್ಠೆ ಪ್ರಶ್ನಾತೀತವಾದುದು. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರೂ, ಡಿಕೆ ಶಿವಕುಮಾರ್ ಮಂತ್ರಿ ಮಾಡಲು ಒಂದು ವರ್ಷ ಸತಾಯಿಸಲಾಯಿತು. ಕೊನೆಗೆ ಹೈಕಮಾಂಡ್ ಮೇಲೆ ಒತ್ತಡ ಹೇರಿ, 2014ರಲ್ಲಿ ಇಂಧನ ಖಾತೆ ಸಚಿವರಾದರು. ಜಡ್ಡುಗಟ್ಟಿದ ಇಂಧನ ಇಲಾಖೆಗೆ ಚುರುಕು ಮುಟ್ಟಿಸಿ, ಆಡಳಿತದಲ್ಲಿ ಸುಧಾರಣೆ ತಂದರು. ರೈತ ಸೂರ್ಯ ಯೋಜನೆ ಜಾರಿಗೆ ತಂದು, 3 ಮೆಗಾ ವ್ಯಾಟ್‌ವರೆಗೆ ವಿದ್ಯುತ್ ಉತ್ಪಾದಿಸುವ, ಹೆಚ್ಚುವರಿ ವಿದ್ಯುತ್ತನ್ನು ಸರ್ಕಾರಕ್ಕೆ ಮಾರುವ ಅವಕಾಶ ಕಲ್ಪಿಸಿದರು. ರಾಜ್ಯ ಸರ್ಕಾರದ ಈ ಯೋಜನೆಯನ್ನು ಕೇಂದ್ರ ಕೂಡ ಶ್ಲಾಘಿಸಿ, ಉಳಿದ ರಾಜ್ಯಗಳಿಗೂ ವಿಸ್ತರಿಸಿತು, ಕರ್ನಾಟಕದ ಮಾದರಿ ಅನುಸರಿಸುವಂತೆ ಕರೆ ನೀಡಿತು.

ರಾಜಕೀಯವಾಗಿ ಬೆಳೆಯುತ್ತಲೇ ಹೋದ ಡಿಕೆ ಶಿವಕುಮಾರ್ ಅವರಿಗೆ ಬ್ರೇಕ್ ಹಾಕಲೋ ಎಂಬಂತೆ, 2017ರಲ್ಲಿ ಒಂದು ಘಟನೆ ಜರುಗಿತು. ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ, ಪಕ್ಷದ ಸೂಚನೆಯಂತೆ ಅಲ್ಲಿನ ಶಾಸಕರನ್ನು ಬೆಂಗಳೂರಿಗೆ ಕರೆತಂದು, ಆಗಬಹುದಾಗಿದ್ದ ಕುದುರೆ ವ್ಯಾಪಾರವನ್ನು ತಪ್ಪಿಸಿದವರು ಇದೇ ಡಿಕೆ ಶಿವಕುಮಾರ್. ಅಂದು ಅಹ್ಮದ್ ಪಟೇಲ್ ಗೆದ್ದು ರಾಜ್ಯಸಭಾ ಸದಸ್ಯರಾದರೆ, ಡಿಕೆ ಟ್ರಬಲ್ ಶೂಟರ್ ಎಂಬ ಹೆಸರು ಗಳಿಸಿದರು. ಅತ್ತ ಬಿಜೆಪಿಯ ಸೋಲನ್ನು ಸಹಿಸಿಕೊಳ್ಳಲಾಗದ ಅಮಿತ್ ಶಾ ಕೆಂಡಾಮಂಡಲರಾದರು. ಇದರ ಪ್ರತೀಕಾರವಾಗಿ, ಕೇಂದ್ರದ ಐಟಿ ಇಲಾಖೆಯ 300 ಅಧಿಕಾರಿಗಳು ಡಿಕೆ ಮನೆ, ಕಚೇರಿಗಳ ಮೇಲೆ ಏಕಾಏಕಿ ದಾಳಿ ಇಟ್ಟರು. ಲೆಕ್ಕವಿಲ್ಲದ 8 ಕೋಟಿ ಹಣವನ್ನು ವಶಪಡಿಸಿಕೊಂಡು ಕೇಸು ದಾಖಲಿಸಿದರು. ಡಿಕೆಗೆ ರಾಜಕಾರಣದಲ್ಲೊಂದು ಕಪ್ಪು ಚುಕ್ಕೆ ಅಂಟಿಕೊಂಡಿತು.

ಇದರಿಂದ ವಿಚಲಿತರಾದರೂ ತೋರ್ಪಡಿಸಿಕೊಳ್ಳದ ಡಿಕೆ, 2018ರ ಚುನಾವಣೆಯಲ್ಲಿ ಮತ್ತೆ ಗೆದ್ದು, ಕಾಂಗ್ರೆಸ್ ಬಹುಮತ ಗಳಿಸುವಲ್ಲಿ ವಿಫಲವಾದಾಗ, ಕ್ಷಿಪ್ರಕ್ರಾಂತಿಗೆ ಕೈಹಾಕಿ, ಬಿಜೆಪಿ ವಿರುದ್ಧ ಬಹಿರಂಗ ಸಮರ ಸಾರಿದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಜಾತ್ಯತೀತ ಶಕ್ತಿಗಳು ಒಂದಾಗಿ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಈ ತಂತ್ರ ಫಲಿಸಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಡಿಕೆ ಶಿವಕುಮಾರ್ ಜಲ ಸಂಪನ್ಮೂಲ, ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾದರು. ಆದರೆ ಈ ಸರ್ಕಾರ ಬಹಳ ದಿನ ಬದುಕಲಿಲ್ಲ. 2019ರಲ್ಲಿ ಕುದುರೆ ವ್ಯಾಪಾರಕ್ಕೆ ಕೈಹಾಕಿದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೇರುತ್ತಿದ್ದಂತೆ, ಕೇಂದ್ರದ ತೆರಿಗೆ ಇಲಾಖೆಯ ದೂರಿನನ್ವಯ ಸೆಪ್ಟೆಂಬರ್ 2019ರಂದು ಡಿಕೆ ಶಿವಕುಮಾರ್ ಬಂಧನವಾಯಿತು. ಡಿಕೆ ನೋಡಿ ಧೈರ್ಯ ತುಂಬಲು ತಿಹಾರ್ ಜೈಲಿಗೇ ತೆರಳಿದ ಸೋನಿಯಾ ಗಾಂಧಿ, ಹೊರಬಂದು ಕೆಪಿಸಿಸಿ ಅಧ್ಯಕ್ಷ ಸ್ಥಾನದಂತಹ ಮಹತ್ವದ ಜವಾಬ್ದಾರಿಯನ್ನು ಡಿಕೆ ಹೆಗಲಿಗೆ ಹಾಕಿದ್ದರು.

ಈ ಸುದ್ದಿ ಓದಿದ್ದೀರಾ: ನಮ್ಮ ಸಚಿವರು | ಆರ್‌ ಬಿ ತಿಮ್ಮಾಪೂರ್‌ ಮಂತ್ರಿಯಾದರೂ ಮುಧೋಳ ಕ್ಷೇತ್ರದ ಜನರಿಗೆ ನೀಗದ ಬವಣೆ  

2020ರಿಂದ ಇಲ್ಲಿಯವರೆಗೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂತ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಶ್ರಮ ಸುರಿದಿದ್ದಾರೆ. ಜಡತ್ವದಿಂದ ನರಳುತ್ತಿದ್ದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದ್ದಾರೆ. ಕೋವಿಡ್ ಕಾಲದಲ್ಲಿ ಆಡಳಿತ ಪಕ್ಷ ಬಿಜೆಪಿ ಕೈ ಚೆಲ್ಲಿ ಕೂತಾಗ, ರಸ್ತೆಗಿಳಿದು ಜನರಲ್ಲಿ ಧೈರ್ಯ ತುಂಬಿದ್ದಾರೆ. ಜೇಬಿನಿಂದ ಒಂದು ಕೋಟಿ ಕೊಟ್ಟು ವಲಸೆ ಕಾರ್ಮಿಕರನ್ನು ಮನೆ ಸೇರಿಸಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ 160 ಕಿ.ಮೀ. ಪಾದಯಾತ್ರೆ ಕೈಗೊಂಡು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಕೇಂದ್ರದ ಕೆಂಗಣ್ಣಿಗೂ ಗುರಿಯಾಗಿ ಇಡಿ, ಸಿಬಿಐ, ಐಟಿ ದಾಳಿಗೂ ಒಳಗಾಗಿದ್ದಾರೆ. ಜೈಲಿಗೂ ಹೋಗಿ ಬಂದಿದ್ದಾರೆ. ಹತ್ತಾರು ವಿವಾದಗಳು, ಕೋರ್ಟ್‌ ಪ್ರಕರಣಗಳು ಡಿಕೆಶಿಯವರನ್ನು ಸುತ್ತುವರಿದಿವೆ. ಸುಪ್ರೀಂ ಕೋರ್ಟ್‌ನಲ್ಲಿಯೂ ಹಲವು ಕೇಸ್‌ಗಳಿವೆ.

ಹೀಗೆ ಸದಾ ಸುದ್ದಿಯಲ್ಲಿರುವ, 8 ಸಲ ಗೆದ್ದು ಶಾಸಕರಾಗಿ, ಮಂತ್ರಿಯಾಗಿ ಪ್ರಭಾವಿ ನಾಯಕ ಎನಿಸಿಕೊಂಡಿರುವ ಡಿ ಕೆ ಶಿವಕುಮಾರ್‌, ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಸಾವಿರ ಚಿಲ್ಲರೆ ಕೋಟಿಯ ಒಡೆಯನೆಂದು ಘೋಷಿಸಿಕೊಂಡಿದ್ದಾರೆ. ಸಾಮಾನ್ಯ ಕೃಷಿ ಕುಟುಂಬದಿಂದ ಬಂದ ಡಿಕೆ, ಅಧಿಕೃತವಾಗಿಯೇ ಸಾವಿರ ಕೋಟಿಯ ಆಸ್ತಿವಂತನಾಗಿದ್ದು ಹೇಗೆ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ಜೊತೆಗೆ ಅವರ ನ್ಯಾಷನಲ್ ಎಜುಕೇಶನ್ ಫೌಂಡೇಷನ್‌, ಇಂಜಿನಿಯರಿಂಗ್, ನರ್ಸಿಂಗ್ ಕಾಲೇಜುಗಳು, ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಹಾಗೂ ಹತ್ತು ಹಲವು ಉದ್ದಿಮೆಗಳು ಅವರು ಸಂತರಲ್ಲ, ಶುದ್ಧಹಸ್ತರಲ್ಲ ಎನ್ನುವುದನ್ನು ಸಾರುತ್ತವೆ.

ರಾಜಕಾರಣವೆಂದರೆ ಏರಿಳಿತದ ಜತೆಗೆ ಮುಳ್ಳಿನ ಮೇಲಿನ ನಡಿಗೆ ಕೂಡ ಎನ್ನುವುದನ್ನು ಅನುಭವದಿಂದ ಅರಿತಿರುವ ಡಿಕೆ ಶಿವಕುಮಾರ್, ಬಿಕ್ಕಟ್ಟುಗಳನ್ನೇ ಮೆಟ್ಟಿಲುಗಳನ್ನಾಗಿ ಬಳಸಿದ ರಾಜಕಾರಣಿ. ತಮ್ಮ ರಾಜಕೀಯ ಚಾಣಾಕ್ಷತನ, ದಾಢಸೀತನದ ಜೊತೆಗೆ ಅಹಂಕಾರದ ಮುದ್ದೆಯಂತೆ ಕಾಣುವ ಡಿಕೆ, ಅಪಾರ ದೈವಭಕ್ತರು. ಕಬ್ಬಾಳಮ್ಮನ ಕುಲದವರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂಬುವುದನ್ನು ನಂಬಿಯೂ, ನೊಣವಿನಕೆರೆ ಅಜ್ಜಯ್ಯನ ಪಾದಕ್ಕೆ ಅಡ್ಡಬೀಳುವವರು. ಮತದಾರರು ಮತ್ತು ಸಂವಿಧಾನದಿಂದಾಗಿ ಇಂದು ಉಪಮುಖ್ಯಮಂತ್ರಿಯಾಗಿರುವ ಡಿ.ಕೆ ಶಿವಕುಮಾರ್, ನಾಡಿನ ಜನತೆಯ ಆಶೋತ್ತರಗಳಿಗೆ ತಕ್ಕನಾಗಿ ಕೆಲಸ ಮಾಡಲಿ. ಅವರೂ ಬೆಳೆದು ನಾಡನ್ನೂ ಬೆಳೆಸಲಿ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ ಟಿಕೆಟ್‌ | ಬಣ ಬಡಿದಾಟಕ್ಕೆ ಪೂರ್ಣವಿರಾಮವಿಟ್ಟ ಸಿಎಂ, ಡಿಸಿಎಂ; ಅಭ್ಯರ್ಥಿ ಯಾರು?

ಕೋಲಾರ ಟಿಕೆಟ್‌ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ಉಂಟಾಗಿದ್ದ ಬಣಗಳ ಬಡಿದಾಟವನ್ನು...

ಕಂಗನಾ ರಣಾವತ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ

ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಖ್ಯಾತ ನಟಿ ಕಂಗನಾ ರಣಾವತ್...

ಬೀದರ್‌ | ಕೇಂದ್ರ ಸಚಿವ ಭಗವಂತ ಖೂಬಾಗೆ ಇದು ಕೊನೆ ಚುನಾವಣೆ: ಸಚಿವ ಈಶ್ವರ ಖಂಡ್ರೆ

ಕೇಂದ್ರ ಸಚಿವ ಭಗವಂತ ಖೂಬಾ ಅವರ ದುರಂಕಾರ, ಅಧಿಕಾರದ ದರ್ಪ ಹಾಗೂ...

ಲೋಕಸಭೆ ಕದನ | ಸಂಘರ್ಷ ಪೀಡಿತ ಮಣಿಪುರದಲ್ಲಿ ಬಿಜೆಪಿ ಸ್ಥಿತಿ ಏನಾಗಿದೆ?

ಮಣಿಪುರದಲ್ಲಿ ಬಿಜೆಪಿ ಕಳೆದೆರಡು ಚುನಾವಣೆಯಲ್ಲೂ ಮತಪ್ರಮಾಣದಲ್ಲಿ ಏರಿಕೆ ಕಂಡಿದ್ದರೂ ಈ ಬಾರಿ...