ನಗರದ ಹೊರವಲಯದ ಜೇವರ್ಗಿ ರಸ್ತೆಯಲ್ಲಿರುವ ಕೇಂದ್ರ ಕಾರಾಗೃಹದಿಂದ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮೂವರು ಸಜಾ ಕೈದಿಗಳು ಮಂಗಳವಾರ ನಸುಕಿನ ವೇಳೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಗಿನ ಸುಮಾರು 4 ಗಂಟೆ ವೇಳೆಗೆ ಜೈಲಿನ ಕಾಂಪೌಂಡ್ ಗೋಡೆ ಹಾರಿ ತಪ್ಪಿಸಿಕೊಂಡಿರುವ ಕೈದಿಗಳನ್ನು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದ ಮಸ್ತಾನ್ ತಂದೆ ಮಾಣಿಕಪ್ಪ, ಔರಾದ್ ತಾಲೂಕಿನ ಸಂತಾಪುರ ಗ್ರಾಮದ ಸಂತೋಷ ತಂದೆ ಬಸಪ್ಪ ಹಾಗೂ ಬೀದರ್ ತಾಲೂಕಿನ ಬಕ್ಕಚೌಡಿ ಗ್ರಾಮದ ಸಾಗರ ತಂದೆ ಭೀಮರಾಯ ಎಂದು ಗುರುತಿಸಲಾಗಿದೆ.
ಪರಾರಿಯಾದ ಮೂವರು ಕೈದಿಗಳು ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಅವರ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಅಕ್ರಮ ಮರಳು ದಂಧೆ ವಿರುದ್ಧ ದೂರು; ಕರವೇ ಜಿಲ್ಲಾಧ್ಯಕ್ಷನಿಗೆ ಜೀವ ಬೆದರಿಕೆ, ಪ್ರಕರಣ ದಾಖಲು
ಗಮನಾರ್ಹವಾಗಿ, ಸೋಮವಾರ ಬೆಳಿಗ್ಗೆಯಷ್ಟೇ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದರು. ಈ ಬೆನ್ನಲ್ಲೇ ಕೈದಿಗಳ ಪರಾರಿಯಾಗಿರುವುದು ಜೈಲು ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.





