ರಾಯಚೂರು ಗಿಣಗೇರಾ ಹೆದ್ದಾರಿ ರಸ್ತೆ ನಿರ್ಮಾಣದ ಹೆಸರಿನಲ್ಲಿ ರೈತರಿಗೆ ಮಾಹಿತಿ ನೀಡದೆ ಭೂ-ಸ್ವಾಧೀನ ಪ್ರಕ್ರಿಯೆ ನಡೆಸದೇ ಅಕ್ರಮವಾಗಿ ಒತ್ತುವರಿ ಮಾಡುತ್ತಿರುವ ವಿರುದ್ಧ ಸಂಘಟಿತ ಹೋರಾಟ ನಡೆಸಲು ನೀರಮಾನವಿ ಶ್ರೀ ಯಲ್ಲಮ್ಮದೇವಿ ದೇವಸ್ಥಾನದ ಕಲ್ಯಾಣಮಂಟಪದಲ್ಲಿ ಏಪ್ರಿಲ್ 13ರಂದು ಭೂ ಸಂತ್ರಸ್ಥರ ರೈತರ ಸಮಾಲೋಚನಾ ಸಭೆ ಕರೆಯಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “90 ಕಿಮೀ ಉದ್ದದ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ₹1600 ಕೋಟಿ ವೆಚ್ಚ ಕಾಮಗಾರಿ ಪ್ರಾರಂಭಿಸಲಾಗಿದೆ. ಸಾಥ್ ಮೈಲ್ ಕ್ರಾಸ್‌ನಿಂದ ಸಿಂಧನೂರುವರೆಗೆ ಹೋಗುವ ರಸ್ತೆಯ ಇಕ್ಕೆಲ್ಲಗಳಲ್ಲಿ 75 ಅಡಿ ಭೂಮಿಯನ್ನು ಪಡೆಯಲಾಗುತ್ತಿದೆ. ರೈತರಿಗೆ ಪರಿಹಾರ ನೀಡದೆ ಭೂಮಿ ಪಡೆಯತ್ತಿರುವುದು ರೈತರಿಗೆ ಮಾಡುತ್ತಿರುವ ದ್ರೋಹವಾಗಿದೆ” ಎಂದು ಆರೋಪಿಸಿದರು.
“1990ರಿಂದ ರಸ್ತೆಗೆ ಯಾವುದೇ ಭೂಮಿ ಸ್ವಾಧೀನಪಡಿಸಿಕೊಂಡಿಲ್ಲವೆಂದು ಲೋಕೊಪಯೋಗಿ ಇಲಾಖೆ ದಾಖಲೆ ನೀಡಿದೆ. ಹೆದ್ದಾರಿ ಕಾಮಗಾರಿಯನ್ನು ಕೆಶಿಪ್ ಮೂಲಕ ನಿರ್ವಹಿಸಲಾಗುತ್ತಿದೆ. ರೈತರಿಗೆ ಯಾವುದೇ ರೀತಿ ಮಾಹಿತಿ ಇಲ್ಲದೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. 2002ರ ಏಪ್ರಿಲ್‌ನಲ್ಲಿ 75 ಅಡಿ ಭೂಮಿ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಳ್ಳುವುದಾಗಿ ಹೇಳಲಾಗಿತ್ತು. ಅಲ್ಲಿಂದ ಈವರೆಗೆ ಯಾವುದೇ ಕಾಮಗಾರಿ ನಡೆಸಿಲ್ಲ. ಈಗ ಏಕಾಏಕಿ ಎರಡು ಇಕ್ಕೆಲಗಳಿಗೆ ನೂರು ಅಡಿ ಜಾಗ ಪಡೆಯಲಾಗುತ್ತಿರುವುದಾಗಿ ಹೇಳಲಾಗುತ್ತಿದೆ” ಎಂದರು.
“ಜಿಲ್ಲಾಧಿಕಾರಿಯವರು ಕೂಡಲೇ ಮಧ್ಯಪ್ರವೇಶಿಸಿ ರೈತರ ಸಮಸ್ಯೆ ಬಗೆಹರಿಸಬೇಕು. ಚುನಾಯಿತ ಜನಪ್ರತಿನಿಧಿಗಳು ನೀತಿ ಸಂಹಿತೆ ನೆಪ ಹೇಳದೆ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಹಂತ ಹಂತವಾಗಿ ಹೋರಾಟ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮತದಾನ ಜಾಗೃತಿ ಮೂಡಿಸಲು ವಿಕಲಚೇತನರ ಬೈಕ್ ರ್‍ಯಾಲಿ
ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾ, ಬೂದೆಯ್ಯಸ್ವಾಮಿ, ಶರಣಬಸವ ಬೆಟ್ಟದೂರು, ದೇವರಾಜನಾಯಕ, ಭೀಮಣ್ಣ ಇದ್ದರು.
ವರದಿ : ಹಫೀಜುಲ್ಲ