ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ 8 ದಿನಗಳ ಮಟ್ಟಿಗೆ ತೆರಳಿದ್ದ ನಾಸಾ ಗಗನಯಾತ್ರಿಗಳಾದ ಭಾರತ ಮೂಲದ ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಇನ್ನು ಕೂಡ ಭೂಮಿಗೆ ಮರಳಿಲ್ಲ. ಕಳೆದ ಎರಡು ತಿಂಗಳಿನಿಂದ ಈ ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಸಿಕ್ಕಿಹಾಕಿಕೊಂಡಿದ್ದು, ಅಲ್ಲಿಯೇ ದಿನಗಳನ್ನು ದೂಡುವಂತಾಗಿದೆ.
ಎಂಟು ದಿನಗಳಲ್ಲಿ ಭೂಮಿಗೆ ಮರಳುವ ಯೋಜನೆಯೊಂದಿಗೆ ಜೂನ್ 5ರಂದು ಬಾಹ್ಯಾಕಾಶ ನೌಕೆ ಸ್ಟಾರ್‌ಲೈನ್‌ಅನ್ನು ಹೊತ್ತೊಯ್ದಿದ್ದ ರಾಕೆಟ್ ಅಮೆರಿಕದ ಫ್ಲಾರಿಡಾದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ (ಐಎಸ್ಎಸ್) ಚಿಮ್ಮಿತ್ತು.
ಜೂನ್ 6ರಂದು ಬಾಹ್ಯಾಕಾಶ ನಿಲ್ದಾಣದ ಬಳಿ ರಾಕೆಟ್ ತಲುಪಿದೆ. ಈ ವೇಳೆ, ಬೋಯಿಂಗ್ ಸ್ಟಾರ್ ಲೈನರ್ ಏರ್ಕ್ರಾಫ್ಟ್‌ನಲ್ಲಿ ಹೀಲಿಯಂ ಸೋರಿಕೆ ಕಾಣಿಸಿಕೊಂಡಿದ್ದರಿಂದ ಥ್ರಸ್ಟರ್‌ನಲ್ಲಿ ಸಮಸ್ಯೆಯಾಗಿರುವುದು ಕಂಡುಬಂದಿದೆ. ಥ್ರಸ್ಟರ್ ಅಂದರೆ ಸಣ್ಣ ಇಂಜಿನ್‌ಗಳಾಗಿದ್ದು, ‘ಸ್ಟಾರ್ ಲೈನರ್’ ಅಂತಹ ಒಟ್ಟು 28 ಇಂಜಿನ್‌ಗಳನ್ನು ಹೊಂದಿದೆ. ಇವುಗಳು ಬಾಹ್ಯಾಕಾಶ ನೌಕೆ ಚಲಿಸುವ ಪಥವನ್ನು ನಿಯಂತ್ರಿಸಲು ನೆರವಾಗುತ್ತವೆ. ಈಗ 5 ಥ್ರಸ್ಟರ್‌ಗಳಲ್ಲಿ ತೊಂದರೆ ಕಾಣಿಸಿಕೊಂಡಿವೆ ಎಂದು ಹೇಳಲಾಗುತ್ತಿದೆ.
ಅಲ್ಲದೇ, ನೌಕೆಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಜೋಡಿಸಲು ಇಬ್ಬರೂ ಗಗನಯಾತ್ರಿಗಳು ಪ್ರಯಾಸ ಪಡುತ್ತಿದ್ದಾರೆ. ಸ್ವಯಂಚಾಲಿತವಾಗಿ ನಡೆಯಬೇಕಾಗಿದ್ದ ಈ ಪ್ರಕ್ರಿಯೆಯನ್ನು ಗಗನಯಾತ್ರಿಗಳು ಮಧ್ಯಪ್ರವೇಶಿಸಿ ಮಾಡಬೇಕಾಗಿದೆ. ಇನ್ನು ಜೂನ್ 14ರಂದು ಸ್ಟಾರ್‌ಲೈನರ್, ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟು ಭೂಮಿಗೆ ಮರಳಿ ಬರಬೇಕಾಗಿತ್ತು. ಆದರೆ, ತಾಂತ್ರಿಕ ದೋಷ ಕಂಡುಬಂದ ಕಾರಣ ಪೂರ್ವನಿಗದಿಯಂತೆ ಭೂಮಿಗೆ ವಾಪಸ್ ಬರಲಾಗಿಲ್ಲ. ದೋಷ ಇನ್ನೂ ಕೂಡ ಸರಿಹೋಗಿಲ್ಲ. ಹೀಗಾಗಿ ಸುನಿತಾ ಮತ್ತು ವಿಲ್ಮೋರ್ ಬಾಹ್ಯಾಕಾಶದಲ್ಲೇ ದಿನದೂಡುತ್ತಿದ್ದು, ಬಾಹ್ಯಾಕಾಶ ನಿಲ್ದಾಣದಲ್ಲಿ ನಾನಾ ಪ್ರಯೋಗಗಳಲ್ಲಿ ತೊಡಗಿರುವ ಇತರ ಏಳು ಗಗನಯಾತ್ರಿಗಳ ಕೆಲಸಗಳಿಗೆ ಇವರಿಬ್ಬರು ನೆರವಾಗುತ್ತಿದ್ದಾರೆ. ವಿಜ್ಞಾನಿಗಳಿಂದ ಸಂಶೋಧನೆ ಕೂಡ ನಡೆಯುತ್ತಿದೆ. ಐಎಸ್ಎಸ್ಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಇದನ್ನು ಸರಿಪಡಿಸಬೇಕಿದೆ. ಇದೊಂದು ದೊಡ್ಡ ಸವಾಲು ಕೂಡ ಆಗಿದೆ ಎಂದೆನ್ನುತ್ತಾರೆ ವಿಜ್ಞಾನಿಗಳು.
ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಹೋಗಿದ್ದೇಕೆ?
ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯನ್ನು ರೂಪಿಸಿದೆ. ಈ ನೌಕೆಯೂ ಏಳು ಗಗನಯಾತ್ರಿಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. 2019ರಲ್ಲಿ ಮಾನವರಹಿತವಾಗಿ ಈ ಸ್ಟಾರ್‌ಲೈನರ್‌ನ ಮೊದಲ ಪರೀಕ್ಷಾರ್ಥ ಪ್ರಯಾಣ ನಡೆದಿತ್ತು. ಆಗ ಕಕ್ಷೆಗೆ ಸೇರಲು ಯಶಸ್ವಿಯಾಗಿದ್ದ ಈ ನೌಕೆಗೆ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ. ಮತ್ತೊಮ್ಮೆ 2022ರಲ್ಲಿ ನಡೆಸಿದ ಪರೀಕ್ಷೆ ಯಶಸ್ವಿಯಾಗಿತ್ತು. ಭೂಮಿಗೆ ಹಿಂದಿರುಗಿದ ಕೋಶದಲ್ಲಿ ಹಲವು ದೋಷಗಳು ಇದ್ದುದನ್ನು ನಂತರ ಪತ್ತೆ ಮಾಡಲಾಗಿತ್ತು. ಇನ್ನು ಮೂರನೇ ಹಂತದಲ್ಲಿ ನಾಸಾ ಮತ್ತು ಬೋಯಿಂಗ್ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣ ನಡೆಸಲು ಸಿದ್ಧತೆ ನಡೆಸಿದ್ದವು.
ಸ್ಟಾರ್‌ಲೈನರ್‌ನ ಅಭಿವೃದ್ಧಿಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಮೊದಲ ಮಾನವ ಸಹಿತ ಪರೀಕ್ಷಾರ್ಥ ಬಾಹ್ಯಾಕಾಶ ಪ್ರಯಾಣಕ್ಕೆ ಆಯ್ಕೆಯಾಗಿದ್ದರು. ಬಾಹ್ಯಾಕಾಶಕ್ಕೆ ಈ ನೌಕೆ ಚಿಮ್ಮಲು ಜೂನ್ 1ಕ್ಕೆ ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಆದರೆ, ಇದನ್ನು ಹೊತ್ತೊಯ್ಯಬೇಕಿದ್ದ ಅಟ್ಲಾಸ್–5 ರಾಕೆಟ್‌ನಲ್ಲಿ ದೋಷ ಕಂಡು ಬಂದ ಕಾರಣ, ಕೊನೆ ಕ್ಷಣದಲ್ಲಿ ಉಡಾವಣೆ ಮುಂದೂಡಲಾಗಿತ್ತು. ಬಳಿಕ, ಜೂನ್ 5ರಂದು ಫ್ಲಾರಿಡಾದಿಂದ ಬಾಹ್ಯಾಕಾಶದತ್ತ ಸ್ಟಾರ್‌ಲೈನರ್ ಹೊತ್ತು ರಾಕೆಟ್ ಗಗನಕ್ಕೆ ಚಿಮ್ಮಿತು.
ಮೂಲ ಯೋಜನೆಯ ಪ್ರಕಾರ, ಸ್ಟಾರ್‌ಲೈನರ್ ನೌಕೆ ಜೂನ್ 18ರಂದು ಭೂಮಿಗೆ ಮರಳಬೇಕಿತ್ತು. ನಾಸಾ ಅದನ್ನು ಜೂನ್ 26ಕ್ಕೆ ಮುಂದೂಡಿತು. ಬಳಿಕ, ಜೂನ್ 21 ರಂದು ನಾಸಾ ಸ್ಟಾರ್‌ಲೈನರ್ ಪುನರಾಗಮನವನ್ನು ಇನ್ನಷ್ಟು ವಿಳಂಬಗೊಳಿಸಿ, ಜುಲೈಗೆ ಮುಂದೂಡಿತು. ತನ್ನ ತಂಡಗಳು ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲಿಸಲು ಇನ್ನಷ್ಟು ಸಮಯ ಬೇಕಾಗಿರುವುದರಿಂದ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಾಸಾ ತಿಳಿಸಿತು.
ಇದೀಗ, ತಾಂತ್ರಿಕ ದೋಷ ಸರಿ ಹೋಗದೇ, ಸಮಸ್ಯೆ ಮುಂದುವರೆದರೆ 2025ರ ಫೆಬ್ರುವರಿಯವರೆಗೂ ಇಬ್ಬರು ಗಗನಯಾತ್ರಿಗಳು ಅಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಬರಬಹುದು. ಅಲ್ಲದೇ, ಈ ಸಮಯದಲ್ಲಿ ಇದು ಅತ್ಯಂತ ಸವಾಲಿನ ಕೆಲಸವಾಗುತ್ತದೆ. ಗಗನಯಾತ್ರಿಗಳಿಗೆ ಆರೋಗ್ಯ ಸಮಸ್ಯೆಗಳು ಕೂಡ ಕಾಡಬಹುದು. ವಿಕಿರಣಗಳಿಗೆ ಸುಲಭವಾಗಿ ತೆರೆದುಕೊಳ್ಳುವುದರಿಂದ ನಾನಾ ಕಾಯಿಲೆಗಳಿಗೆ ಬಹುಬೇಗನೇ ಒಳಗಾಗುವ ಸಾಧ್ಯತೆ ಇರುತ್ತದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಶೂನ್ಯ ಗುರುತ್ವ ಇರುವುದರಿಂದ ಮೂಳೆ ಸಾಂದ್ರತೆ ಕಡಿಮೆಯಾಗುವ, ಮಾಂಸ ಖಂಡಗಳು ಕ್ಷೀಣಿಸುವ ಅಪಾಯ ಎದುರಾಗಬಹುದು. ಮಾನಸಿಕವಾಗಿ ಕುಗ್ಗಬಹುದು. ಆದರೆ, ಇಬ್ಬರೂ ಅನುಭವಿ ಗಗನಯಾತ್ರಿಗಳಾಗಿದ್ದು, ಬಾಹ್ಯಾಕಾಶದಲ್ಲಿ ಎದುರಾಗುವ ಎಂತಹದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲರು ಎಂಬ ವಿಶ್ವಾಸವನ್ನು ನಾಸಾ ವಿಜ್ಞಾನಿಗಳು, ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಬಾಹ್ಯಾಕಾಶ ನೌಕೆ ಭೂಮಿಗೆ ಮರಳುವ ನಿರ್ದಿಷ್ಟ ದಿನಾಂಕವನ್ನು ನಾಸಾ ಇನ್ನೂ ಘೋಷಿಸದಿರುವುದರಿಂದ, ಇಬ್ಬರು ಗಗನಯಾತ್ರಿಗಳು ಯಾವಾಗ ಭೂಮಿಗೆ ಮರಳುತ್ತಾರೆ ಎಂಬ ಕುರಿತು ಅನಿಶ್ಚಿತತೆಗಳು ಮುಂದುವರಿದಿವೆ.
ಐಎಸ್ಎಸ್ ಭೂಮಿಯಿಂದ 400 ಕಿ.ಮೀ ದೂರವಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಬರುವುದು ಸುಲಭದ ಮಾತಲ್ಲ. ಪ್ರತಿ 90 ನಿಮಿಷಕ್ಕೆ ಭೂಮಿಗೆ ಒಂದು ಬಾರಿ ಪರಿಭ್ರಮಣೆ ನಡೆಸುತ್ತದೆ. ಪ್ರತಿದಿನ 16 ಬಾರಿ ಐಎಸ್ಎಸ್ ಭೂಮಿಯ ಸುತ್ತ ಸುತ್ತುತಿರುತ್ತದೆ. ದಿನದಲ್ಲಿ 16 ಬಾರಿ ಕತ್ತಲು ಹಾಗೂ 16 ಬಾರಿ ಬೆಳಕಾಗುತ್ತದೆ. ಐಎಸ್ಎಸ್‌ನ ಒಟ್ಟು ವಿಸ್ತೀರ್ಣ 375 ಅಡಿಯಷ್ಟು ಅಗಲ ಉದ್ದವಿರುತ್ತದೆ. ಸುಮಾರು ಅಮೆರಿಕಾದ ಫುಟ್ಬಾಲ್ ಗ್ರೌಂಡ್‌ನಷ್ಟು ದೊಡ್ಡದಾಗಿರುತ್ತೆ. ಅದರಲ್ಲಿ 6 ಕೊಠಡಿಗಳು, ಬಾತ್ ರೂಮುಗಳೂ, ಜಿಮ್ ಹಾಗೂ ಅಡುಗೆ ಮಾಡಿಕೊಳ್ಳಲು ಸ್ಥಳ ಕೂಡ ಲಭ್ಯವಿರುತ್ತೆ. ಗಗನಯಾತ್ರಿಗಳಿಗೆ ಸಂಶೋಧನೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಕೂಡ ಅದರಲ್ಲಿ ಇರುತ್ತವೆ. ಬಾಹ್ಯಾಕಾಶದಲ್ಲಿ ಒಂದು ಬಾರಿಗೆ ಆರರಿಂದ ಏಳು ಜನರು ಮಾತ್ರ ಇರಲು ಸಾಧ್ಯ. ಬಾಹ್ಯಾಕಾಶದಲ್ಲಿ ಸಾಮಾನ್ಯವಾಗಿ ಗಗನಯಾನಿಗಳು 6 ತಿಂಗಳು ಕಾಲ ಇರುತ್ತಾರೆ. ಕೆಲವೊಮ್ಮೆ ವರ್ಷದವರೆಗೂ ಉಳಿಯಬೇಕಾದ ಪರಿಸ್ಥಿತಿ ಕೂಡ ಬರಬಹುದು. ಗಗನಯಾನಿಗಳು ಇದೆಲ್ಲದಕ್ಕೂ ಸಜ್ಜಾಗಿರುತ್ತಾರೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಸಹ ಮಾಡಿಕೊಂಡಿರುತ್ತಾರೆ.
ಈ ವರದಿ ಓದಿದ್ದೀರಾ?: ಅದಾನಿ – ಸೆಬಿ ಮುಖ್ಯಸ್ಥರ ಬಂಡವಾಳ ಬಯಲು ಮಾಡಿದ ಹಿಂಡೆನ್‌ಬರ್ಗ್ ಆಂಡರ್ಸನ್ ಯಾರು ಗೊತ್ತೆ?
ಕೆಲವೊಮ್ಮೆ ಎಂಟು ದಿನ ಆರು ದಿನ ಇರುವ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಭೂಮಿಯಿಂದ ಆಗಾಗ್ಗೆ ಕಾರ್ಗೋ ರಾಕೆಟ್‌ಗಳ ಮೂಲಕ ಕೆಲ ವಸ್ತುಗಳನ್ನು ರವಾನೆ ಮಾಡುತ್ತಾರೆ. ನೀರನ್ನು ಭೂಮಿಯಿಂದ ತೆಗೆದುಕೊಂಡು ಹೋಗಲಾಗುತ್ತೆ. ಆದರೆ, ಅಲ್ಲಿ ಕುಡಿಯುವ ಶೈಲಿ ಬೇರೆಯಾಗಿರುತ್ತದೆ. ಅಲ್ಲಿ ಗುರುತ್ವಾಕರ್ಷಣೆ ಬಲವಿಲ್ಲದಿರುವುದರಿಂದ ನೀರು ಮೇಲಕ್ಕೆ ಹೋಗುತ್ತಿರುತ್ತದೆ. ಇತ್ತೀಚಿನ ವಿಜ್ಞಾನ ಬಹಳ ಮುಂದುವರೆದಿದ್ದು, ಚಪಾತಿ ರೋಲ್‌ಗಳನ್ನು ತೆಗೆದುಕೊಂಡು ಹೋಗಬಹುದು. ಅಲ್ಲಿ ಕೆಲ ಗಿಡಗಳನ್ನು ಬೆಳೆಯಲಾಗುತ್ತೆ ಅದನ್ನು ಸೇವನೆ ಮಾಡಬಹುದು.
ಇವತ್ತಿನ ದಿನ ಐಎಸ್ಎಸ್‌ನಲ್ಲಿ ಆರು ಸ್ಪೇಸ್ ಕ್ರಾಫ್ಟ್‌ಗಳಿವೆ. ಒಂದು ರಷ್ಯಾದ ಸೋಯೂಸ್, ಕ್ರೂ ಡ್ರ್ಯಾಗನ್ ಸ್ಪೇಸ್ ಎಕ್ಸ್, ಸ್ಟಾರ್ ಲೈನರ್ ಸೇರಿ ಆರು ಕ್ರಾಫ್ಟ್‌ಗಳು ಅಲ್ಲಿವೆ. ಬೋಯಿಂಗ್‌ನಲ್ಲಿ ತಾಂತ್ರಿಕತೆ ಸರಿಯಾಗದೇ ಇದ್ದಲ್ಲಿ ಇಬ್ಬರೂ ಗಗನಯಾತ್ರಿಗಳು ಸ್ಪೇಸ್‌ನಲ್ಲಿ ಇರುವಂತಹ ಕ್ರೂ-18 ಕಾರ್ಗೋದಲ್ಲಿ ಭೂಮಿಗೆ ಮರಳಬಹುದು. ಅಲ್ಲದೆ, ರಷ್ಯಾದ ಸೋಯುಸ್‌ನಲ್ಲಿಯೂ ಅವರು ಮರಳಲು ಅವಕಾಶಗಳಿವೆ. ಇದೇ ಸೆಪ್ಟಂಬರ್‌ನಲ್ಲಿ ‘ಕ್ರೂ ನೈನ್’ ಸ್ಪೇಸ್ ಕ್ರಾಫ್ಟ್ ಬಾಹ್ಯಾಕಾಶಕ್ಕೆ ಹೋಗಲಿದೆ. ಅದು ಮುಂದಿನ ಫೆಬ್ರುವರಿಯಲ್ಲಿ ವಾಪಸ್ ಬರಬಹುದು. ಸುನಿತಾ ಹಾಗೂ ಬುಚ್ ವಿಲ್ಮೋರ್ ವಾಪಸ್ ಬರುವುದಕ್ಕೆ ಹಲವು ದಾರಿಗಳಿವೆ. ಆದರೆ, ಬೋಯಿಂಗ್ ಸಂಸ್ಥೆಗೆ ಇದೊಂದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇದು ಅವರ ಮೊದಲ ಸ್ಪೇಸ್ ಏರ್ ಕ್ರಾಫ್ಟ್ ಆಗಿರುವುದರಿಂದ ಯಾವುದೇ ತೊಂದರೆ ಆಗದಂತೆ ಸರಿಪಡಿಸಲು ಕ್ರಮತೆಗೆದುಕೊಳ್ಳುತ್ತಿದ್ದಾರೆ.
ಓರ್ವ ಗಗನಯಾತ್ರಿ ಎಷ್ಟು ದಿನಗಳ ಐಎಸ್ಎಸ್‌ನಲ್ಲಿ ಇರಬಹುದು..? ಐಎಸ್ಎಸ್‌ಗೆ ವ್ಯಾಲಿಡಿಟಿ ಏನಾದ್ರೂ ಇದ್ಯಾ..?
ಗಿರೀಶ್ ಲಿಂಗಣ್ಣ – ಓರ್ವ ಗಗನಯಾತ್ರಿ 660 ದಿನಗಳ ಕಾಲ ಅಲ್ಲಿದ್ದರು. ಇನ್ನೋರ್ವ 475 ದಿನ, ಮತ್ತೋರ್ವ 335 ದಿನಗಳು – ಹೀಗೆ ವರ್ಷಾನುಗಟ್ಟಲೇ ಬಾಹ್ಯಾಕಾಶದಲ್ಲಿ ಇದ್ದು ಬಂದಿದ್ದಾರೆ. ಒಟ್ಟು 275 -300 ಗಗನಯಾತ್ರಿಗಳು ಈಗಾಗಲೇ ಬಾಹ್ಯಾಕಾಶ ಪ್ರಯಾಣ ಮಾಡಿದ್ದಾರೆ. ಎರಡ್ಮೂರು ತಿಂಗಳು ಅಲ್ಲಿ ನೆಲೆಸೋದು ದೊಡ್ಡ ವಿಷಯ ಅಲ್ಲವೇ ಅಲ್ಲ. ಸದ್ಯಕ್ಕಿರೋ ಐಎಸ್ಎಸ್‌ನ ಆಯುಷ್ಯ 2040 ಅಥವಾ 2050ಕ್ಕೆ ಮುಗಿಯುತ್ತದೆ. ಇನ್ನೊಂದು ಸ್ಪೇಸ್ ಸ್ಟೇಷನ್ ತಯಾರಿಕೆಗೆ ಕೆಲ ದೇಶಗಳ ಒಡಂಬಡಿಕೆಯೊಂದಿಗೆ ಯೋಜನೆಗಳು ನಡೆಯುತ್ತಿವೆ. ಭಾರತವೂ ಸಹ ಸ್ಪೇಸ್ ಸ್ಟೇಷನ್ ನಿರ್ಮಿಸಲು ಯೋಜನೆ ರೂಪಿಸುತ್ತಿದೆ.