ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶಿಕ್ಷಣದ ಮುಖ್ಯವಾಹಿನಿಯಿಂದ ದೂರವಾಗುತ್ತಿರುವ ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 6,467 ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪದವಿ ಶಿಕ್ಷಣದಿಂದ ದೂರ ಉಳಿದಿದ್ದು, ಒಟ್ಟು 9,248 ಮಕ್ಕಳು ಶಾಲಾ-ಕಾಲೇಜು ಶಿಕ್ಷಣದಿಂದ ಹೊರಗುಳಿದಿದ್ದಾರೆ. ಕಲ್ಯಾಣ ಕರ್ನಾಟಕ ಭಾಗವೊಂದರಲ್ಲೇ 2,066 ವಿದ್ಯಾರ್ಥಿಗಳು ಡ್ರಾಪ್‌ಔಟ್ ಆದರೆ, ರಾಯಚೂರು ಜಿಲ್ಲೆಯಲ್ಲಿ 413 ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿದಿದ್ದಾರೆ.
ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೊತ್ತಿರುವ ರಾಯಚೂರು ಜಿಲ್ಲೆಯಲ್ಲಿ ಈ ಪ್ರಮಾಣದ ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿದಿರುವುದು ಆತಂಕಕಾರಿ ವಿಚಾರವಾಗಿದೆ. ಶಿಕ್ಷಣದ ಮೂಲಕ ಸಾಮಾಜಿಕ ಹಾಗೂ ಆರ್ಥಿಕವಾಗಿ ಮುಂದೆ ಬರಬೇಕಾದ ಸಮುದಾಯದ ಮಕ್ಕಳೇ ಶಾಲಾ-ಕಾಲೇಜಿನಿಂದ ಹೊರಗುಳಿಯುತ್ತಿರುವುದು ಸರ್ಕಾರದ ಶೈಕ್ಷಣಿಕ ಯೋಜನೆಗಳ ಪರಿಣಾಮಕಾರಿತ್ವದ ಬಗ್ಗೆಯೂ ಪ್ರಶ್ನೆ ಮೂಡಿಸಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚು
ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ಎಸ್‌ಟಿ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಲು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಬಡತನ, ವಸತಿ ನಿಲಯಗಳ ಕೊರತೆ, ಸಾರಿಗೆ ಸಮಸ್ಯೆ, ಉನ್ನತ ಶಿಕ್ಷಣಕ್ಕಾಗಿ ಮಕ್ಕಳನ್ನು ನಗರಗಳಿಗೆ ಕಳುಹಿಸಲು ಪಾಲಕರ ಹಿಂಜರಿಕೆ ಪ್ರಮುಖ ಕಾರಣಗಳಾಗಿವೆ.
ಇದರ ಜೊತೆಗೆ ಉದ್ಯೋಗ ಅರಸಿ ಕುಟುಂಬಗಳು ವಲಸೆ ಹೋಗುವುದು, ಶಿಕ್ಷಣದ ಮಹತ್ವದ ಕುರಿತು ಅರಿವಿನ ಕೊರತೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉನ್ನತ ಶಿಕ್ಷಣಕ್ಕೆ ಅಗತ್ಯ ಸೌಲಭ್ಯಗಳ ಕೊರತೆಯೂ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕುಗೊಳಿಸಲು ಕಾರಣವಾಗುತ್ತಿದೆ.
ವಿಶೇಷವಾಗಿ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಗ್ರಾಮದಿಂದ ನಗರಕ್ಕೆ ಪ್ರತಿನಿತ್ಯ ಪ್ರಯಾಣಿಸುವುದು ಅಥವಾ ನಗರದಲ್ಲಿ ವಾಸ್ತವ್ಯ ಕಲ್ಪಿಸಿಕೊಳ್ಳುವುದು ಆರ್ಥಿಕವಾಗಿ ಕಷ್ಟಕರವಾಗುತ್ತಿದೆ. ಪರಿಣಾಮವಾಗಿ ಶಿಕ್ಷಣ ಮುಂದುವರಿಸುವ ಬದಲು ಅನಿವಾರ್ಯವಾಗಿ ಶಾಲೆ ಅಥವಾ ಕಾಲೇಜು ತೊರೆಯುವ ಪರಿಸ್ಥಿತಿ ಎದುರಾಗುತ್ತಿದೆ.
ರಾಯಚೂರಿಗೆ ವಿಶೇಷ ಗಮನ ಅಗತ್ಯ
ರಾಯಚೂರು ಜಿಲ್ಲೆಯಲ್ಲಿ 413 ಎಸ್‌ಟಿ ವಿದ್ಯಾರ್ಥಿಗಳು ಡ್ರಾಪ್‌ಔಟ್ ಆಗಿರುವುದು ಸಾಮಾನ್ಯ ಅಂಕಿ-ಅಂಶವಾಗಿ ಪರಿಗಣಿಸದೆ ಗಂಭೀರವಾಗಿ ವಿಶ್ಲೇಷಿಸುವ ಅಗತ್ಯವಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಪ್ರತಿ ವಿದ್ಯಾರ್ಥಿ ಶಿಕ್ಷಣದಿಂದ ಏಕೆ ಹೊರಗುಳಿದಿದ್ದಾನೆ ಎಂಬುದನ್ನು ಗುರುತಿಸಿ, ಕಾರಣವಾರು ಪರಿಹಾರ ರೂಪಿಸಬೇಕಾಗಿದೆ.
ವಿದ್ಯಾರ್ಥಿಗಳ ಡ್ರಾಪ್‌ಔಟ್ ತಡೆಯಲು ಕೇವಲ ವಿದ್ಯಾರ್ಥಿವೇತನ ನೀಡುವುದಷ್ಟೇ ಸಾಕಾಗುವುದಿಲ್ಲ. ಅಗತ್ಯವಿರುವ ಕಡೆ ವಸತಿ ನಿಲಯಗಳ ಸಂಖ್ಯೆ ಹೆಚ್ಚಿಸುವುದು, ಸಾರಿಗೆ ವ್ಯವಸ್ಥೆ ಕಲ್ಪಿಸುವುದು, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು ಹಾಗೂ ಶಾಲೆ-ಕಾಲೇಜುಗಳಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಪುನಃ ಶಿಕ್ಷಣಕ್ಕೆ ಕರೆತರುವ ವ್ಯವಸ್ಥೆ ರೂಪಿಸಬೇಕಾಗಿದೆ.
ರಾಯಚೂರು ಜಿಲ್ಲೆಯಲ್ಲಿ ನಾಲ್ವರು ಎಸ್‌ಟಿ ಮೀಸಲು ಕ್ಷೇತ್ರದ ಶಾಸಕರು ಹಾಗೂ ಒಬ್ಬರು ಎಸ್‌ಟಿ ಸಂಸದರು ಇದ್ದರೂ, ಜಿಲ್ಲೆಯಲ್ಲಿ ಎಸ್‌ಟಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣದಿಂದ ಹೊರಗುಳಿದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಜಿಲ್ಲೆಯ ಜನರು ಅಭಿಪ್ರಾಯಪಟ್ಟಿದ್ದಾರೆ.
ವಿಶೇಷ ಕಾರ್ಯಪಡೆ ರಚನೆಗೆ ಒತ್ತಾಯ
ಎಸ್‌ಟಿ ವಿದ್ಯಾರ್ಥಿಗಳ ಡ್ರಾಪ್‌ಔಟ್ ಸಮಸ್ಯೆ ಪರಿಹರಿಸಲು ಸರ್ಕಾರ ವಿಶೇಷ ಕಾರ್ಯಪಡೆ ರಚಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಶಾಲೆ ಮತ್ತು ಕಾಲೇಜು ತೊರೆದ ಪ್ರತಿಯೊಬ್ಬ ವಿದ್ಯಾರ್ಥಿಯ ಮಾಹಿತಿಯನ್ನು ಸಂಗ್ರಹಿಸಿ, ಶಿಕ್ಷಣದಿಂದ ದೂರ ಉಳಿಯಲು ಕಾರಣವೇನು ಎಂಬುದನ್ನು ಪತ್ತೆಹಚ್ಚಿ, ಅವರ ಪರಿಸ್ಥಿತಿಗೆ ಅನುಗುಣವಾಗಿ ಪರಿಹಾರ ಒದಗಿಸುವ ವ್ಯವಸ್ಥೆ ಜಾರಿಗೆ ಬರಬೇಕಿದೆ.
ಬಡತನ, ವಸತಿ ನಿಲಯಗಳ ಕೊರತೆ ಮತ್ತು ಸಾರಿಗೆ ಸಮಸ್ಯೆಗಳನ್ನು ಮೊದಲ ಆದ್ಯತೆಯಲ್ಲಿ ಪರಿಹರಿಸಿ, ಶಿಕ್ಷಣದಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಮತ್ತೆ ಅಕ್ಷರ ಲೋಕಕ್ಕೆ ಕರೆತರುವ ಸಮಗ್ರ ಕಾರ್ಯಯೋಜನೆ ರೂಪಿಸುವುದು ಇಂದಿನ ಅಗತ್ಯವಾಗಿದೆ.
ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಯೊಂದಿಗೆ ರಾಯಚೂರು ಮುಂದುವರಿಯಬೇಕೋ, ಅಥವಾ ಶಿಕ್ಷಣದ ಮೂಲಕ ಈ ಹಿಂದುಳಿತನದಿಂದ ಹೊರಬರಬೇಕೋ ಎಂಬ ಪ್ರಶ್ನೆಗೆ ಸರ್ಕಾರ ತನ್ನ ಕಾರ್ಯತತ್ಪರತೆಯ ಮೂಲಕ ಉತ್ತರಿಸಬೇಕಿದೆ.





