ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ನಿವಾಸಗಳು ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಇತ್ತೀಚಿನ ಶೋಧ ಕಾರ್ಯಾಚರಣೆಯ ಬಗ್ಗೆ ಉದ್ಯಮಿ ವಿಜಯ್ ಮಲ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದೇಶದಲ್ಲಿ ನೆಲೆಸಿರುವ ವಿಜಯ್ ಮಲ್ಯ ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಸಾಲು ಸಾಲು ಪೋಸ್ಟ್ ಮಾಡುವ ಮೂಲಕ ಕೇಂದ್ರ ತನಿಖಾ ಸಂಸ್ಥೆಯ ಕಾರ್ಯವೈಖರಿಯನ್ನು ಕಟುವಾಗಿ ವಿಮರ್ಶಿಸಿದ್ದಾರೆ.
ಇದನ್ನೂ ಓದಿ: ಆಸ್ತಿ ಜಪ್ತಿ, ಸಾಲ ಮರುಪಾವತಿಯಿಂದ ಮಲ್ಯ ವಿರುದ್ಧದ ಮನಿ ಲಾಂಡರಿಂಗ್ ಕೇಸ್ ರದ್ದಾಗಲ್ಲ: ಬಾಂಬೆ ಹೈಕೋರ್ಟ್‌ಗೆ ಇಡಿ ಸ್ಪಷ್ಟನೆ
ಸಚಿವ ಸತೀಶ್ ಜಾರಕಿಹೊಳಿ ಅವರ ಸ್ವತ್ತುಗಳು ಹಾಗೂ ಹೂಡಿಕೆಗಳಿಗೆ ಸಂಬಂಧಿಸಿದಂತೆ ಇಡಿ ಬಿಡುಗಡೆ ಮಾಡಿದ ಪ್ರಕಟಣೆಯನ್ನು ಶೇರ್ ಮಾಡಿರುವ ಮಲ್ಯ, “ಯಾವುದೇ ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ, ನ್ಯಾಯಯುತವಾದ ವಿಚಾರಣೆಯೂ ನಡೆದಿಲ್ಲ. ಆದರೆ ಸಾರ್ವಜನಿಕವಾಗಿ ವ್ಯಕ್ತಿಗಳ ಚಾರಿತ್ರ್ಯ ವಧೆ ಮಾಡಲಾಗುತ್ತಿದೆ. ವಿಶ್ವದ ಬೇರೆ ಯಾವುದೇ ಪ್ರಜಾಪ್ರಭುತ್ವ ದೇಶದಲ್ಲೂ ತನಿಖಾ ಸಂಸ್ಥೆಗಳು ಈ ರೀತಿ ನಡೆದುಕೊಳ್ಳುವುದಿಲ್ಲ. ನಾಗರಿಕರು ಈ ಬಗ್ಗೆ ಸ್ವತಃ ಯೋಚಿಸಬೇಕು” ಎಂದು ಬರೆದುಕೊಂಡಿದ್ದಾರೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಜಾರಕಿಹೊಳಿ ಕುಟುಂಬ ಮತ್ತು ಅವರ ಆಪ್ತರ 18ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಡಿ ಇತ್ತೀಚೆಗೆ ದಾಳಿ ನಡೆಸಿ ಶೋಧ ನಡೆಸಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಮಲ್ಯ ಅವರು ಜಾರಕಿಹೊಳಿ ಅವರ ಪರವಾಗಿ ನಿಂತಿದ್ದು, ಇಡಿ ಮತ್ತು ಸಿಬಿಐ ಸಂಸ್ಥೆಗಳು ಸಾರ್ವಜನಿಕವಾಗಿ ವ್ಯಕ್ತಿಗಳ ಪ್ರತಿಷ್ಠೆಗೆ ಧಕ್ಕೆ ತರುವುದನ್ನೇ ಕಾಯಕ ಮಾಡಿಕೊಂಡಿವೆ ಎಂದು ಆರೋಪಿಸಿದ್ದಾರೆ.
ತಮ್ಮ ವಿರುದ್ಧದ ಪ್ರಕರಣಗಳನ್ನು ಉಲ್ಲೇಖಿಸಿರುವ ಮಲ್ಯ, “ತನಿಖಾ ಸಂಸ್ಥೆಗಳು ಹೆಣೆದಿರುವ ಸುಳ್ಳು ಹಾಗೂ ಕಲ್ಪಿತ ಆರೋಪಗಳ ನೈಜತೆಯನ್ನು ನಾನು ಶೀಘ್ರದಲ್ಲೇ ಹಂತ ಹಂತವಾಗಿ ಸಾರ್ವಜನಿಕರ ಮುಂದೆ ತರಲಿದ್ದೇನೆ. ಸತ್ಯವೇ ಅಂತಿಮವಾಗಿ ಜಯಗಳಿಸುತ್ತದೆ” ಎಂದಿದ್ದಾರೆ.





