ಶಿರಸಿ: ವಿಷಪೂರಿತ ಹಾವಿನ ಕಡಿತದಿಂದ 12 ವರ್ಷದ ಬಾಲಕ ಮೃತಪಟ್ಟಿದ್ದು, ಆತನ ಸಹೋದರಿ ಚಿಕಿತ್ಸೆ ಪಡೆಯುತ್ತಿರುವ ದುರ್ಘಟನೆ ಬನವಾಸಿ ಸಮೀಪದ ಸಹಸ್ರಳ್ಳಿ ಗ್ರಾಮದಲ್ಲಿ ಬುಧವಾರ ಮುಂಜಾನೆ ನಡೆದಿದೆ. ಮೃತ ಬಾಲಕನನ್ನು ಮಿಥುನ್ ಪುಟ್ಟಪ್ಪ ನಾಯ್ಕ (12) ಎಂದು ಗುರುತಿಸಲಾಗಿದೆ. ಹಾವಿನ ಕಡಿತಕ್ಕೊಳಗಾದ ಆತನ ಸಹೋದರಿ ದೀಕ್ಷಾ ಪುಟ್ಟಪ್ಪ ನಾಯ್ಕ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ತಿಳಿದು ಬಂದಿದೆ.

ಘಟನೆಯ ವಿವರ: ರಾತ್ರಿ ಎಂದಿನಂತೆ ಮಿಥುನ್ ಮತ್ತು ದೀಕ್ಷಾ ತಮ್ಮ ತಂದೆಯ ಜೊತೆ ಊಟ ಮುಗಿಸಿ ಮಲಗಿದ್ದರು. ಆದರೆ, ಮುಂಜಾನೆ ವೇಳೆ ಮಕ್ಕಳಿಬ್ಬರು ಹಠಾತ್ತನೆ ಎದ್ದು ವಾಂತಿ ಮಾಡಲು ಪ್ರಾರಂಭಿಸಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು ತಕ್ಷಣವೇ ಲೈಟ್ ಹಾಕಿ ನೋಡಿದಾಗ, ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಸುತ್ತಮುತ್ತಲಿನ ನೆರೆಹೊರೆಯವರನ್ನು ಸಹಾಯಕ್ಕೆ ಕರೆಯುವಷ್ಟರಲ್ಲಿ, ಹಾವೊಂದು ಕತ್ತಲಲ್ಲಿ ಮನೆಯಿಂದ ಹೊರಗೆ ಓಡಿಹೋಗಿರುವುದು ಕಂಡುಬಂದಿದೆ.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ಅಡಿಕೆ ಬೆಳೆಗಾರರ ಬದುಕಿನೊಂದಿಗೆ ಚೆಲ್ಲಾಟ ಬೇಡ: ಶಾಸಕ ಶಿವರಾಮ ಹೆಬ್ಬಾರ್
ತಕ್ಷಣ ಇಬ್ಬರು ಮಕ್ಕಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿರಸಿಯ ಮಹಾಲಕ್ಷ್ಮೀ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಿಥುನ್ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ದೀಕ್ಷಾ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ವೈದ್ಯರ ಪರಿಶೀಲನೆ ವೇಳೆ ಮಿಥುನ್‌ನ ಕಿವಿ ಭಾಗಕ್ಕೆ ಹಾಗೂ ದೀಕ್ಷಾಳ ಕೈ ಬೆರಳಿಗೆ ಹಾವು ಕಚ್ಚಿರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಘಟನೆಯ ಕುರಿತು ಮಾಹಿತಿ ಪಡೆದ ಬನವಾಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.




