ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ದಿಟ್ಟ ನಿರ್ಧಾರಗಳನ್ನು ಕೈಗೊಂಡ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಆಶಯ ದೀನದಲಿತರು ಹಾಗೂ ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದಾಗಿತ್ತು. ಈ ಕಾರಣದಿಂದಲೇ ರಾಜ್ಯದ ಮುಖ್ಯಮಂತ್ರಿಗಳ ಸಾಲಿನಲ್ಲಿ ಅರಸು ಅವರು ವಿಶಿಷ್ಟ ಸ್ಥಾನ ಪಡೆದಿದ್ದಾರೆ ಎಂದು ತಹಶೀಲ್ದಾರ್ ಆರತಿ ಬಿ. ಹೇಳಿದರು.
ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 111ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರಸು ಅವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಹಿಂದುಳಿದ ವರ್ಗಗಳ ಮಕ್ಕಳಿಗಾಗಿ ವಸತಿ ನಿಲಯಗಳನ್ನು ನಿರ್ಮಿಸಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದರ ಪರಿಣಾಮ ಇಂದು ಅನೇಕ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಸಾಮಾಜಿಕ ಕ್ರಾಂತಿಗೆ ಕಾರಣರಾದ ಅರಸು ಅವರು ಶೋಷಿತ ಸಮುದಾಯಗಳಿಗೆ ರಾಜಕೀಯ ಹಾಗೂ ಸಾಮಾಜಿಕ ಶಕ್ತಿ ತುಂಬಿದರು. ಅವರು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಭೂ ಸುಧಾರಣಾ ಕಾಯ್ದೆಯಿಂದ ಬಡ ರೈತರಿಗೆ ಭೂಮಿ ದೊರೆತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. ಜೀತ ಪದ್ಧತಿ ನಿರ್ಮೂಲನೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕಠಿಣವಾಗಿ ಜಾರಿಗೊಳಿಸುವ ಮೂಲಕ ಆಡಳಿತದಲ್ಲಿ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದರು ಎಂದು ಶ್ಲಾಘಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸಿ ಕರ್ನಾಟಕದ ರಾಜಕಾರಣಕ್ಕೆ ಹೊಸ ದಿಕ್ಕು ನೀಡಿದವರು ದೇವರಾಜ ಅರಸು. ಅವರ ದೂರದೃಷ್ಟಿಯ ಫಲವಾಗಿ ನಿರ್ಮಾಣಗೊಂಡ ವಸತಿ ನಿಲಯಗಳಲ್ಲಿ ಶಿಕ್ಷಣ ಪಡೆದ ಬಡ ಮಕ್ಕಳು ಇಂದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಅರಸು ಅವರ ಕೊಡುಗೆ ಅಪಾರ ಎಂದರು.
ರಾಜು ಕ್ಷತ್ರಿಯ ಸಮಾಜದ ಅಧ್ಯಕ್ಷ ಲಕ್ಷ್ಮೀಕಾಂತರಾಜ ಅರಸು ಮಾತನಾಡಿ, ಎಲ್ಲ ಜಾತಿ ಮತ್ತು ಧರ್ಮದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಸಂವಿಧಾನದ ಆಶಯಗಳಿಗೆ ಬಲ ತುಂಬಿದವರು ದೇವರಾಜ ಅರಸು. ‘ಉಳುವವನೇ ಭೂಮಿಯ ಒಡೆಯ’ ಕಾಯ್ದೆ ಜಾರಿಗೊಳಿಸುವ ಮೂಲಕ ಬಡ ರೈತರಿಗೆ ಭೂಮಿಯ ಹಕ್ಕು ದೊರಕಿಸಿದರು. ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡುವ ಮೂಲಕ ರಾಜ್ಯದ ಅಸ್ಮಿತೆಗೆ ಹೊಸ ಆಯಾಮ ನೀಡಿದರು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಪವಿತ್ರಾ ಮಾತನಾಡಿ, ಸಮಾಜದಲ್ಲಿ ಸಮಾನತೆಯನ್ನು ಅನುಷ್ಠಾನಗೊಳಿಸಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ವಸತಿ ನಿಲಯಗಳ ಮೂಲಕ ಹೆಣ್ಣುಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸಿದ್ದು ಸಮಾನತೆಯ ಪ್ರಮುಖ ಹೆಜ್ಜೆಯಾಗಿದೆ. ಬಡತನ ನಿರ್ಮೂಲನೆ, ಜೀತ ಪದ್ಧತಿ ನಿರ್ಮೂಲನೆ, ಎಲ್ಲರಿಗೂ ಸಮಾನ ಅವಕಾಶ ಹಾಗೂ ಕೃಷಿ ಭೂಮಿಯ ಹಕ್ಕು ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಅರಸು ಅವರು ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮಿತಿಯ ಸದಸ್ಯ ಮಲ್ಲಿಕಾರ್ಜುನಸ್ವಾಮಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಗ್ರಾಮೀಣ ಪಂಚಾಯತ್ ರಾಜ್ ಇಲಾಖೆಯ ಎಇಇ ಚಂದ್ರಶೇಖರ್, ರಾಜು ಕ್ಷತ್ರಿಯ ಸಮಾಜದ ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ಪುರುಷೋತ್ತಮ್, ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




