ಇಂದಿನ ಯುವಪೀಳಿಗೆಗೆ ಕನ್ನಡ ಸಾಹಿತ್ಯ ಚರಿತ್ರೆಯ ಅರಿವು ಅತ್ಯಗತ್ಯವಾಗಿದ್ದು, ವಿದ್ಯಾರ್ಥಿಗಳು ಸಾಹಿತ್ಯ ಚರಿತ್ರೆಯನ್ನು ತಿಳಿದುಕೊಳ್ಳುವ ಮೂಲಕ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಎಂ. ಗೋವಿಂದರಾಯ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಚರಿತ್ರೆ–ಒಂದು ಅವಲೋಕನ’ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ನಿರಂತರ ಅಧ್ಯಯನ ಮಾಡಬೇಕು. ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಗುರುಹಿರಿಯರಿಗೆ ಗೌರವ ನೀಡಬೇಕು ಎಂದರು.
ಮನಸ್ಸಿನಲ್ಲಿರುವ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಾಗ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಕುಟುಂಬದಲ್ಲಿ ಪರಸ್ಪರ ಪ್ರೀತಿ ಮತ್ತು ವಿಶ್ವಾಸವನ್ನು ಬೆಳೆಸಿಕೊಂಡಾಗ ಕೌಟುಂಬಿಕ ಕಲಹಗಳನ್ನು ತೊಡೆದುಹಾಕಬಹುದು ಎಂದು ಹೇಳಿದರು.
ಗುಬ್ಬಿ ತಾಲೂಕು ಸಾಹಿತ್ಯ ಪರಂಪರೆಯಲ್ಲಿ ಶ್ರೀಮಂತವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಾಹಿತ್ಯ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡಬೇಕು. ಸಾಹಿತ್ಯದ ವಿವಿಧ ಪ್ರಕಾರಗಳು, ರತ್ನತ್ರಯರ ಕಾವ್ಯಶೈಲಿ ಹಾಗೂ ಹಳಗನ್ನಡ ಸಾಹಿತ್ಯದ ಭಾಷಾ ಪ್ರೌಢಿಮೆಯ ಕುರಿತು ಅವರು ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಓ. ನಾಗರಾಜು ಮಾತನಾಡಿ, ಜ್ಞಾನಿಗಳಿಂದ ವಿದ್ಯಾರ್ಥಿಗಳಿಗೆ ದೊರೆಯುವ ಉಪನ್ಯಾಸಗಳು ಅವರ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತವೆ. ಕನ್ನಡ ಸಾಹಿತ್ಯ ಲೋಕಕ್ಕೆ ಗಣನೀಯ ಕೊಡುಗೆ ನೀಡಿದ ಕವಿವರ್ಯರಿಗೆ ರಾಜವಂಶಸ್ಥರು ಪೋಷಣೆ ನೀಡಿದ್ದರು. ಧರ್ಮ ಮತ್ತು ರಾಜಾಶ್ರಯದ ಮೂಲಕ ಸಾಹಿತ್ಯ ಬೆಳೆದಿದ್ದು, ಇತಿಹಾಸದ ಅಧ್ಯಯನಕ್ಕೂ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು. ಹೊಸ ಸಾಹಿತ್ಯದ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಅರುಣ ಕುಮಾರಿ, ಇತಿಹಾಸ ವಿಭಾಗದ ಮುಖ್ಯಸ್ಥ ತಿಮ್ಮೇಗೌಡ, ಪ್ರಾಧ್ಯಾಪಕರಾದ ಕಾಳಪ್ಪ, ಹೆಚ್. ಜ್ಯೋತಿಲಕ್ಷ್ಮೀ, ಕಂಚಿರಾಯಪ್ಪ, ಗ್ರಂಥಪಾಲಕ ಡಾ. ರಾಘವೇಂದ್ರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




