ಗಣೇಶೋತ್ಸವವನ್ನು ಶಾಂತಿ, ಸೌಹಾರ್ದತೆ ಹಾಗೂ ಭಕ್ತಿಭಾವದಿಂದ ಆಚರಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ. ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ ಎಂದು ಸಿಪಿಐ ರಾಘವೇಂದ್ರ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಮೂರ್ತಿ ಪ್ರತಿಷ್ಠಾಪನೆ, ಪೂಜೆ ಹಾಗೂ ವಿಸರ್ಜನಾ ಮೆರವಣಿಗೆಗೆ ಸಂಬಂಧಿಸಿದಂತೆ ಅಗತ್ಯ ಅನುಮತಿ ಪಡೆಯಬೇಕು. ಅನುಮತಿ ಇಲ್ಲದೆ ಧ್ವನಿವರ್ಧಕ ಬಳಸುವುದು, ನಿಗದಿತ ಶಬ್ದ ಮಿತಿಯನ್ನು ಮೀರುವುದು ಸೇರಿದಂತೆ ಯಾವುದೇ ನಿಯಮ ಉಲ್ಲಂಘನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಡಿಜೆ ಬದಲಿಗೆ ಡೋಲು, ಕಂಸಾಳೆ ಸೇರಿದಂತೆ ಸ್ಥಳೀಯ ಸಾಂಪ್ರದಾಯಿಕ ಮತ್ತು ಜನಪದ ವಾದ್ಯಗಳಿಗೆ ಆದ್ಯತೆ ನೀಡುವಂತೆ ಸೂಚಿಸಿದರು.
ಪಿಎಸ್ಐ ರಾಜೇಶ್ವರಿ ಮಾತನಾಡಿ, ಡಿಜೆ ಹಾಗೂ ಅತಿಯಾದ ಶಬ್ದದಿಂದ ಶಬ್ದ ಮಾಲಿನ್ಯ ಉಂಟಾಗಿ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಬಹುದು. ಆದ್ದರಿಂದ ಸಾಂಪ್ರದಾಯಿಕ ವಾದ್ಯಗಳ ಮೂಲಕ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಮನವಿ ಮಾಡಿದರು.
ಯುವಕರು ಹಾಗೂ ಗಣೇಶೋತ್ಸವ ಆಯೋಜಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಪಪಂ ಮಾಜಿ ಸದಸ್ಯ ಮಹಮ್ಮದ್ ಸಾದಿಕ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗಣೇಶೋತ್ಸವ ಆಯೋಜಕರು, ಸಾರ್ವಜನಿಕರು ಹಾಗೂ ಮಾಧ್ಯಮದವರು ಉಪಸ್ಥಿತರಿದ್ದರು.





