ತುಮಕೂರು ಜಿಲ್ಲೆಯ ಗ್ರಾಮೀಣ ರಾಜಕೀಯದ ಮುಂದಿನ ಚಿತ್ರಣಕ್ಕೆ ಮುನ್ನುಡಿ ಬರೆಯುವಂತೆ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ಮೀಸಲು ಅಂತಿಮಗೊಂಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸಿರುವ ಅಧಿಸೂಚನೆಯಂತೆ, ಜಿಲ್ಲಾ ಪಂಚಾಯಿತಿಯ ಸ್ಥಾನಗಳ ಸಂಖ್ಯೆ ಹಿಂದಿನಂತೆಯೇ 57ಕ್ಕೆ ಸೀಮಿತವಾಗಿದ್ದರೆ, ತಾಲ್ಲೂಕು ಪಂಚಾಯಿತಿಗಳ ಸ್ಥಾನಗಳ ಸಂಖ್ಯೆ 212ರಿಂದ 196ಕ್ಕೆ ಇಳಿಕೆಯಾಗಿದೆ.
ಇದರ ನಡುವೆ ಗಮನ ಸೆಳೆಯುವ ಅಂಶವೆಂದರೆ, ಜಿಪಂ ಹಾಗೂ ತಾಪಂ ಎರಡರಲ್ಲೂ ಮಹಿಳೆಯರಿಗೆ ಶೇ.50ಕ್ಕೂ ಅಧಿಕ ಪ್ರಾತಿನಿಧ್ಯ ಕಲ್ಪಿಸಿರುವುದು. ಹೀಗಾಗಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗ್ರಾಮೀಣ ರಾಜಕೀಯದ ಅಂಗಳದಲ್ಲಿ ಮಹಿಳಾ ಪ್ರಾತಿನಿಧ್ಯ ಮತ್ತಷ್ಟು ಹೆಚ್ಚುವ ಸಾಧ್ಯತೆ ಮೂಡಿದೆ.
ತುಮಕೂರು ಜಿಲ್ಲಾ ಪಂಚಾಯಿತಿಯ ಒಟ್ಟು 57 ಸ್ಥಾನಗಳಲ್ಲಿ 29 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪ್ರವರ್ಗವಾರು ಮೀಸಲಾತಿ ನೋಡಿದರೆ, ಪ.ಜಾತಿಗೆ 12 ಸ್ಥಾನಗಳಿದ್ದು, ಅದರಲ್ಲಿ 6 ಮಹಿಳೆಯರಿಗೆ ಮೀಸಲಾಗಿದೆ. ಪ.ಪಂಗಡಕ್ಕೆ 5 ಸ್ಥಾನಗಳಲ್ಲಿ 3 ಮಹಿಳೆಯರಿಗೆ, ಹಿಂದುಳಿದ ವರ್ಗ–ಅಗೆ 9 ಸ್ಥಾನಗಳಲ್ಲಿ 5 ಮಹಿಳೆಯರಿಗೆ ಹಾಗೂ ಹಿಂದುಳಿದ ವರ್ಗ–ಬಗೆ 2 ಸ್ಥಾನಗಳಲ್ಲಿ 1 ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಸಾಮಾನ್ಯ ವರ್ಗದ 29 ಸ್ಥಾನಗಳ ಪೈಕಿ 14 ಸ್ಥಾನಗಳು ಮಹಿಳೆಯರ ಪಾಲಾಗಿವೆ.
ಜಿಪಂ ಮೀಸಲು ಚಿತ್ರಣ
This video cannot be played in your browser. Open the video directly
ಪ್ರವರ್ಗ| ಒಟ್ಟು ಸ್ಥಾನ| ಮಹಿಳಾ ಮೀಸಲು
ಪ.ಜಾತಿ | 12 | 6
ಪ.ಪಂಗಡ| 5 | 3
ಹಿಂ.ವರ್ಗ–ಅ| 9 | 5
ಹಿಂ.ವರ್ಗ–ಬ| 2| 1
ಸಾಮಾನ್ಯ| 29| 14
ಒಟ್ಟು| 57| 29
ತಾಪಂ ಸ್ಥಾನಗಳಲ್ಲಿ 16ರಷ್ಟು ಕುಸಿತ
ಜಿಲ್ಲೆಯ ಹತ್ತು ತಾಲ್ಲೂಕು ಪಂಚಾಯಿತಿಗಳ ಒಟ್ಟು ಸ್ಥಾನಗಳ ಸಂಖ್ಯೆಯಲ್ಲಿ ಈ ಬಾರಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. 2016ರ ಚುನಾವಣೆಯಲ್ಲಿ 212 ಸ್ಥಾನಗಳಿದ್ದರೆ, ಇದೀಗ 196ಕ್ಕೆ ಇಳಿಸಲಾಗಿದೆ. ಅಂದರೆ 16 ಸ್ಥಾನಗಳು ಕಡಿಮೆಯಾಗಿವೆ.
ಒಟ್ಟು 196 ಸ್ಥಾನಗಳ ಪೈಕಿ 100 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಪ.ಜಾತಿಗೆ 40 ಸ್ಥಾನಗಳಿದ್ದು, 23 ಮಹಿಳೆಯರಿಗೆ, ಪ.ಪಂಗಡಕ್ಕೆ 19ರಲ್ಲಿ 11, ಹಿಂದುಳಿದ ವರ್ಗ–ಅಗೆ 29ರಲ್ಲಿ 17, ಹಿಂದುಳಿದ ವರ್ಗ–ಬಗೆ 8ರಲ್ಲಿ 4 ಹಾಗೂ ಸಾಮಾನ್ಯ ವರ್ಗದ 100 ಸ್ಥಾನಗಳಲ್ಲಿ 45 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಪ್ರವರ್ಗ| ಒಟ್ಟು ಸ್ಥಾನ| ಮಹಿಳಾ ಮೀಸಲು
ಪ.ಜಾತಿ | 40 | 23
ಪ.ಪಂಗಡ | 19 | 11
ಹಿಂ.ವರ್ಗ–ಅ | 29 | 17
ಹಿಂ.ವರ್ಗ–ಬ | 8 | 4
ಸಾಮಾನ್ಯ | 100 | 45
ಒಟ್ಟು | 196 | 100
ಯಾವ ತಾಪಂನಲ್ಲಿ ಎಷ್ಟು ಸ್ಥಾನ?
ತಾಲ್ಲೂಕುವಾರು ನೋಡಿದರೆ, ಕೆಲವು ಕಡೆ ಸ್ಥಾನಗಳ ಸಂಖ್ಯೆ ಬದಲಾಗಿದ್ದರೆ, ಇನ್ನೂ ಕೆಲವು ಕಡೆ ಹಿಂದಿನ ಸಂಖ್ಯೆಯೇ ಮುಂದುವರಿದಿದೆ. ಕೊರಟಗೆರೆ: 15 ಸ್ಥಾನ — 8 ಮಹಿಳಾ ಮೀಸಲು. ಹಿಂದಿನ ಸಂಖ್ಯೆಯಲ್ಲೇ ಮುಂದುವರಿಕೆ.
– ತುರುವೇಕೆರೆ: 17ರಿಂದ 16ಕ್ಕೆ ಇಳಿಕೆ — 8 ಮಹಿಳಾ ಮೀಸಲು.
– ತಿಪಟೂರು: 17 ಸ್ಥಾನ — 9 ಮಹಿಳಾ ಮೀಸಲು. ಹಿಂದಿನ ಸಂಖ್ಯೆಯೇ ಮುಂದುವರಿಕೆ.
– ಚಿಕ್ಕನಾಯಕನಹಳ್ಳಿ: 18 ಸ್ಥಾನ — 9 ಮಹಿಳಾ ಮೀಸಲು. ಹಿಂದಿನ 19 ಸ್ಥಾನದಿಂದ ಒಂದು ಸ್ಥಾನ ಕಡಿಮೆ.
– ಕುಣಿಗಲ್: 20 ಸ್ಥಾನ — 10 ಮಹಿಳಾ ಮೀಸಲು. ಹಿಂದಿನ 21ರಿಂದ ಒಂದು ಸ್ಥಾನ ಇಳಿಕೆ.
– ಪಾವಗಡ: 22 ಸ್ಥಾನ — ಹಿಂದಿನ ಸಂಖ್ಯೆಯಲ್ಲೇ ಮುಂದುವರಿಕೆ.
– ಮಧುಗಿರಿ: 24ರಿಂದ 20ಕ್ಕೆ ಇಳಿಕೆ — 11 ಮಹಿಳಾ ಮೀಸಲು.
– ಗುಬ್ಬಿ: 24ರಿಂದ 21ಕ್ಕೆ ಇಳಿಕೆ — 3 ಸ್ಥಾನ ಕಡಿಮೆ.
– ಶಿರಾ: 26ರಿಂದ 22ಕ್ಕೆ ಇಳಿಕೆ — 11 ಮಹಿಳಾ ಮೀಸಲು.
– ತುಮಕೂರು: 27ರಿಂದ 25ಕ್ಕೆ ಇಳಿಕೆ — 13 ಮಹಿಳಾ ಮೀಸಲು.
ಕ್ಷೇತ್ರವಾರು ಮೀಸಲು ಯಾರ ಪಾಲಿಗೆ?
ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸ್ಥಾನಗಳ ಒಟ್ಟು ಮೀಸಲು ಚಿತ್ರಣ ಅಂತಿಮಗೊಂಡಿದ್ದರೂ, ಯಾವ ಕ್ಷೇತ್ರ ಯಾವ ಪ್ರವರ್ಗಕ್ಕೆ ಮೀಸಲಾಗಲಿದೆ ಎಂಬ ಕ್ಷೇತ್ರವಾರು ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.
ಈ ಪಟ್ಟಿ ಬಿಡುಗಡೆಯಾದ ಬಳಿಕವೇ ಯಾವ ಹಾಲಿ ಸದಸ್ಯರ ಕ್ಷೇತ್ರ ಬದಲಾಗಲಿದೆ, ಯಾವ ಕ್ಷೇತ್ರ ಮಹಿಳೆಯರ ಪಾಲಾಗಲಿದೆ, ಯಾವ ರಾಜಕೀಯ ಮುಖಂಡರು ಹೊಸ ಕ್ಷೇತ್ರ ಹುಡುಕಬೇಕಾಗುತ್ತದೆ ಎಂಬುದು ಸ್ಪಷ್ಟವಾಗಲಿದೆ.
ಗ್ರಾಮೀಣ ರಾಜಕೀಯದಲ್ಲಿ ಚುನಾವಣಾ ಲೆಕ್ಕಾಚಾರಕ್ಕೆ ಈ ಪಟ್ಟಿ ಅತ್ಯಂತ ಮಹತ್ವದ್ದಾಗಿದ್ದು, ಕ್ಷೇತ್ರವಾರು ಮೀಸಲು ಪಟ್ಟಿ ಇಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವರು ತಿಳಿಸಿದ್ದಾರೆ.
ಹೀಗಾಗಿ ಈಗಾಗಲೇ ಚುನಾವಣಾ ಸಿದ್ಧತೆಯಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು, ಆಕಾಂಕ್ಷಿಗಳು ಹಾಗೂ ಹಾಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಕಣ್ಣು ಇದೀಗ ಕ್ಷೇತ್ರವಾರು ಮೀಸಲು ಪಟ್ಟಿಯತ್ತ ನೆಟ್ಟಿದೆ.
ಮಹಿಳಾ ಮೀಸಲಿನಿಂದ ಬದಲಾಗಲಿದೆಯೇ ಗ್ರಾಮೀಣ ರಾಜಕೀಯದ ಸಮೀಕರಣ?
ಜಿಪಂನಲ್ಲಿ 57ಕ್ಕೆ 29 ಹಾಗೂ ತಾಪಂನಲ್ಲಿ 196ಕ್ಕೆ 100 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರುವುದು ಈ ಬಾರಿಯ ಮೀಸಲು ಹಂಚಿಕೆಯ ಪ್ರಮುಖ ವಿಶೇಷತೆಯಾಗಿದೆ. ಪರಿಣಾಮವಾಗಿ ಹಲವು ಕ್ಷೇತ್ರಗಳಲ್ಲಿ ಪುರುಷ ಆಕಾಂಕ್ಷಿಗಳು ಹಿಂದೆ ಸರಿದು ಕುಟುಂಬದ ಮಹಿಳಾ ಸದಸ್ಯರನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ.
ಒಟ್ಟಿನಲ್ಲಿ, ಸ್ಥಾನಗಳ ಸಂಖ್ಯೆಯ ಇಳಿಕೆ, ಪ್ರವರ್ಗವಾರು ಮೀಸಲು ಹಂಚಿಕೆ ಹಾಗೂ ಮಹಿಳೆಯರಿಗೆ ದೊರೆತಿರುವ ಹೆಚ್ಚಿನ ಪ್ರಾತಿನಿಧ್ಯ—ಈ ಮೂರು ಅಂಶಗಳು ತುಮಕೂರು ಜಿಲ್ಲೆಯ ಮುಂಬರುವ ಗ್ರಾಮ ಪಂಚಾಯಿತಿ ನಂತರದ ಗ್ರಾಮೀಣ ರಾಜಕೀಯದ ಲೆಕ್ಕಾಚಾರವನ್ನೇ ಬದಲಿಸುವ ಸೂಚನೆ ನೀಡಿವೆ.
ಈಗ ಉಳಿದಿರುವ ಕುತೂಹಲ ಒಂದೇ, ಯಾವ ಕ್ಷೇತ್ರ ಯಾರ ಪಾಲಾಗಲಿದೆ? ಕ್ಷೇತ್ರವಾರು ಮೀಸಲು ಪಟ್ಟಿ ಹೊರಬಿದ್ದ ಬಳಿಕವೇ ಜಿಲ್ಲೆಯ ಗ್ರಾಮೀಣ ರಾಜಕೀಯದ ನಿಜವಾದ ಚುನಾವಣಾ ಚಿತ್ರಣ ಸ್ಪಷ್ಟವಾಗಲಿದೆ.





