ಮತದಾರರ ಹೆಸರು ಪರಿಷ್ಕರಣೆ ಎಂಬುದು ಪ್ರತಿ ವರ್ಷ ನಡೆಯುವ ಒಂದು ಸಾಮಾನ್ಯ ಪ್ರಕ್ರಿಯೆ. ಆದರೆ ಬಿಜೆಪಿ ಪಕ್ಷದ ಮುಂದಿನ ಐವತ್ತು ವರ್ಷ ತಾನೇ ಅಧಿಕಾರದಲ್ಲಿ ಇರಬೇಕೆಂಬ ದುರುದ್ದೇಶದಿಂದ ವಿಶೇಷ ಪರಿಷ್ಕರಣೆ ಎಂಬ ಹೆಸರಿನಲ್ಲಿ ಬಿಜೆಪಿಯೇತರ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಕೆಲಸಕ್ಕೆ ಕೈ ಹಾಕಿದೆ ಎಂದು ಜಾಗೃತ ಕರ್ನಾಟಕದ ಬಿ. ಸಿ. ಬಸವರಾಜು ತಿಳಿಸಿದರು
ತುಮಕೂರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್.ಐ.ಆರ್) ಕುರಿತು ಸೋಮವಾರ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆದ ಎಸ್.ಐ.ಆರ್.ಕುರಿತ ವಿಶೇಷ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಈಗಾಗಲೇ ಪಶ್ಚಿಮ ಬಂಗಾಲ, ಬಿಹಾರ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ವಾಮ ಮಾರ್ಗದಿಂದ ಅಧಿಕಾರ ಹಿಡಿದಿದೆ.ಅವರ ಮುಂದಿನ ಗುರಿ ಕರ್ನಾಟಕ. ಹಾಗಾಗಿ ನಾವುಗಳು ಎಚ್ಚೆತ್ತುಕೊಂಡು,ನಮ್ಮ ಹಕ್ಕಿನ ಜೊತೆಗೆ, ನಮ್ಮ ಅಕ್ಕಪಕ್ಕದವರ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕಿದೆ.ಜೂನ್ 30 ರಿಂದ ನಿಜವಾದ ಮ್ಯಾಫೀಂಗ್ ಆರಂಭವಾಗಲಿದೆ.ಎನ್ಯುಮರೇಷನ್ ಫಾರಂ ತುಂಬಿದರೆ ಮಾತ್ರ ಮತದಾರರ ಕರಡು ಪಟ್ಟಿಯಲ್ಲಿ ಹೆಸರು ಬರುತ್ತದೆ. ಹಾಗೆ ಹೆಣ್ಣು ಮಕ್ಕಳು ಎಚ್ಚರಿಕೆಯಿಂದ ಮತದಾನದ ಹಕ್ಕು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಮತದಾನದ ಹಕ್ಕು ಉಳಿಸುವ ಎರಡನೇ ಸ್ವಾತಂತ್ರ್ಯ ಹೋರಾಟ ಮಾಡಬೇಕಿದೆ ಎಂದರು

ಎಸ್.ಐ.ಆರ್.ಕುರಿತ ಪಿಪಿಟಿ ಮೂಲಕ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಯಾವ ಯಾವ ಹಂತಗಳಲ್ಲಿ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಜಾಗೃತ ಕರ್ನಾಟಕದ ಬಿ. ಸಿ.ಬಸವರಾಜು ಮಾಹಿತಿ ನೀಡಿದರು
ವಿಧಾನಪರಿಷತ್ ಸದಸ್ಯ ಡಾ.ರಮೇಶಬಾಬು ಮಾತನಾಡಿ,ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಂತರವು ಆರ್ಹ ಮತದಾರ ತನ್ನ ಹಕ್ಕಿನಿಂದ ವಂಚಿತರಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಎರಡನೇ ಸ್ವಾತಂತ್ರ ಹೋರಾಟ ಇದಾಗಿದೆ. ಹಾಗಾಗಿ ಪ್ರತಿಯೊಬ್ಬ ಮತದಾರರು ಫಾರಂ ತುಂಬುವ ಮೂಲಕ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮತದಾರರನ್ನು ಸಂಪರ್ಕಿಸಿ,ಅವರಲ್ಲಿ ಜಾಗೃತಿ ಮೂಡಿಸುವ ಮೂಲಕ ಅವರ ಹಕ್ಕುಗಳನ್ನು ಕಾಪಾಡಬೇಕಿದೆ ಎಂದರು.

ಕೇಂದ್ರ ಸರಕಾರ ಈಗಾಗಲೇ ಎಸ್.ಐ.ಆರ್.ನಂತರ ಅಧಿಕೃತ ಮತಪಟ್ಟಿಯಲ್ಲಿ ಇರುವ ಮತದಾರರಿಗೆ ಮಾತ್ರ ಸರಕಾರದ ಸೌಲಭ್ಯಗಳು ನೀಡಲಾಗುವುದು ಎಂದು ಹೇಳಿದೆ.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಹ ಇದೇ ವಿಚಾರವನ್ನು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.ಎಸ್.ಐ.ಆರ್.ವೇಳೆ ನಾವು ಕೊಂಚ ಎಡವಿದರು ಮತದಾನದ ಹಕ್ಕಿನ ಜೊತೆಗೆ,ಸರಕಾರದ ಸವಲತ್ತುಗಳಿಂದಲು ವಂಚಿತವಾಗಬೇಕಾಗುತ್ತಿದೆ.ಹಾಗಾಗಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಎಲ್ಲಾ ಕಾರ್ಯಕರ್ತರು ಸಹ ಪ್ರತಿ ಮಾಹಿತಿಯನ್ನು ಅರ್ಥ ಮಾಡಿಕೊಂಡು,ಜನರಿಗೆ ಅದನ್ನು ಅರ್ಥಮಾಡಿಸಿ,ಫಾರಂ ತುಂಬುವಂತೆ ಮಾಡಿ,ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಡಾ.ರಮೇಶಬಾಬು ತಿಳಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ಎಸ್.ಐ.ಆರ್.ನಿಂದಾಗಿ ಎಷ್ಟೇ ಅತಿರಥ,ಮಹಾರಥ ರೆನಿಸಿಕೊಂಡ ರಾಜಕೀಯ ಧುರೀಣರು ಸಹ ತೆಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಸೋಲು ಕಂಡಿದ್ದಾರೆ. ಎಸ್.ಐ.ಆರ್ ನಿಂದ ಶಾಸನ ಸಭೆ, ಸಂಸತ್ ಸದಸ್ಯರಿಗೆ ಮಾತ್ರ ತೊಂದರೆಯಾಗುವುದಿಲ್ಲ.ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ,ಗ್ರಾಮಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವವರಿಗೂ ಹೊಡೆತ ಬೀಳಲಿದೆ.ಹಾಗಾಗಿ ಪ್ರತಿ ಹಳ್ಳಿಯಲ್ಲಿಯೂ ಮತದಾರರ ಹಕ್ಕು ರಕ್ಷಣೆಗೆ ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕಾಗಿದೆ.ಒಂದು ವೇಳೆ ಮೈಮರೆತರೆ ನಾವು ಸೋಲುವ ಜೊತೆಗೆ, ಪಕ್ಷವೂ ಅಧಿಕಾರ ಕಳೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಮಂತ್ರಿ ಟಿ.ಬಿ.ಜಯಚಂದ್ರ ಮಾತನಾಡಿ,ಇತ್ತೀಚನ ದಿನಗಳಲ್ಲಿ ನಡೆದ ಚುನಾವಣೆಗಳಲ್ಲಿ ಆಗಿರುವ ಏರುಪೇರು ಗಮನಿಸಿದರೆ ಎಸ್.ಐ.ಆರ್.ನಿಂದ ಸಾಕಷ್ಟು ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗುತಿದ್ದಾರೆ.ಹಾಗಾಗಿ ಕಾಂಗ್ರೆಸ್ ಪಕ್ಷ ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡು,ಮತದಾನದ ಹಕ್ಕಿನಿಂದ ಆರ್ಹರು ವಂಚಿತರಾಗಬಾರದು ಎಂಬ ಆಶಯದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರಾಜ್ಯದಾದ್ಯಂತ “ಕಾಂಗ್ರೆಸ್ ನಡೆ ನಿಮ್ಮ ಮತರಕ್ಷಣೆಯ ಕಡೆ” ಎಂಬ ಜಾಗೃತಿ ಅಭಿಯಾನವನ್ನು ಆಯೋಜಿಸಿದೆ.ಪ್ರಮುಖವಾಗಿ ಬೂತ್ ಮಟ್ಟದ ಕಾರ್ಯಕರ್ತರು,ಬೂತ್ ಮಟ್ಟದ ಎಜೆಂಟರುಗಳು ಮುಂದಿನ ಮೂರು ತಿಂಗಳ ಕಾಲ ಹೆಚ್ಚು ಸಕ್ರಿಯರಾಗಿ ಕೆಲಸ ಮಾಡಬೇಕಿದೆ.2002ರ ಮತಪಟ್ಟಿ ಮತ್ತು 2025ರ ಮತಪಟ್ಟಿಗೆ ಹೊಲಿಕೆ ಸಮಯದಲ್ಲಿ ನಾವುಗಳು ಎಚ್ಚೆತ್ತು ಕೆಲಸ ಮಾಡಬೇಕಾಗಿದೆ.ಎಲ್ಲರೂ ಹೊಸದಾಗಿ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಕೆಲಸ ಆಗಬೇಕಾಗಿದೆ ಎಂದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,ಎಸ್.ಐ.ಆರ್ ಎಂಬುದು ಒಂದು ಸಾಮಾನ್ಯ ಪ್ರಕ್ರಿಯೆ ಯಾಗಿದ್ದರೂ ತಾನು ಅಧಿಕಾರದಲ್ಲಿ ಮುಂದುವರೆಯಬೇಕೆಂಬ ಉದ್ದೇಶದಿಂದ ವಿಶೇಷ ಪರೀಕ್ಷರಣೆಗೆ ಕೇಂದ್ರ ಮುಂದಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿದೆ.ನಮ್ಮೊಂದಿಗೆ ಅನೇಕ ಸಂಘ ಸಂಸ್ಥೆಗಳು ಕೈಜೋಡಿಸಿವೆ. ಬೂತ್ ಲೆವಲ್ ಏಜೆಂಟರು ಪ್ರತಿ ಮತದಾರರ ಹಕ್ಕು ರಕ್ಷಿಸಲು ಹೋರಾಟಕ್ಕೆ ಅಣಿಯಾಗಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ,ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಎಂಬುದು ಸ್ವಾಯತ್ತ ಸಂಸ್ಥೆಗಳು ಒಗ್ಗೂಡಿ,ಬಿಜೆಪಿಯನ್ನು ನಿರಂತರವಾಗಿ ಅಧಿಕಾರದಲ್ಲಿ ಇಡುವ ಹುನ್ನಾರ ವಾಗಿದೆ.ಇದರ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್ ಇಡೀ ರಾಜ್ಯದಾದ್ಯಂತ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾಂಗ್ರೆಸ್ ಪಕ್ಷದ ಮುಖಂಡರು, ಮಂಚೂಣಿ ಘಟಕದ ಮುಖ್ಯಸ್ಥರು, ಹಾಗೂ ಬಿಎಲ್‌ಓ 02 ಅವರು ಬಿ.ಎಲ್.ಓ 01 ರ ಜೊತೆಗೆ ಸಂಪರ್ಕ ಪಡೆದು, ಮತದಾರರ ನೊಂದಣಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಈಗಾಗಲೇ ಬಿಜೆಪಿ ಎಸ್.ಐ.ಆರ್. ಮೂಲಕ ಹಾಲಿ ಕಾಂಗ್ರೆಸ್ ಪಕ್ಷದ 97 ಶಾಸಕರನ್ನು ಸೋಲಿಸುವ ಮಾತನಾಡುತ್ತಿದ್ದಾರೆ. ಅಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ತೊಂದರೆಯಾಗಲಿದೆ.ಹಾಗಾಗಿ ನಾವು ಮುಂದಿನ ಮೂರು ತಿಂಗಳ ಕಾಲ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡಬೇಕಾಗಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್, ಮಾಜಿ ಶಾಸಕರಾದ ಕೆ.ಎಸ್.ಕಿರಣ್‌ಕುಮಾರ್, ತಿಪಟೂರು ಕಾಂಗ್ರೆಸ್ ಮುಖಂಡ ಟೂಡ ಶಶಿಧರ್, ಡಾ.ಎಸ್.ಷಪಿಅಹಮದ್,ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ.ಆರ್,ಷಣ್ಮುಗಪ್ಪ, ಕೆಂಚಮಾರಯ್ಯ, ಹೆಚ್.ಸಿ.ಹನುಮಂತಯ್ಯ, ಜಾಗೃತ ಕರ್ನಾಟಕದ ಬಸವರಾಜು, .ಅನಿಲ್‌ಕುಮಾರ್ ಚಿಕ್ಕದಾಳವಾಟ,ಚಂದನ್, ಏದ್ದೇಳು ಕರ್ನಾಟಕದ ಇಂದಿರಮ್ಮ, ರಾಮಚಂದ್ರಯ್ಯ,ತಾಜುದ್ದೀನ್ ಷರೀಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




