ಮಾರ್ಚ್ 15ರ ನಂತರ ತೀವ್ರ ಬೇಸಿಗೆ ಆರಂಭವಾಗಿದ್ದು, ತುಮಕೂರು ಜಿಲ್ಲೆಯಲ್ಲಿ 100 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುವ ಬಗ್ಗೆ ಗುರುತಿಸಿದ್ದು, ಈ ಹಳ್ಳಿಗಳಿಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆಯಾಗದಿರುವಂತೆ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಹೇಳಿದ್ದಾರೆ.
ನಗರದ ಸ್ಮಾರ್ಟ್ ಸಿಟಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಹಂತದ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ತುಮಕೂರು ಜಿಲ್ಲೆಯ ಪಾವಗಡ ಹೊರತುಪಡಿಸಿ ಎಲ್ಲಾ ತಾಲ್ಲೂಕುಗಳೂ ಸೇರಿದಂತೆ 100 ಹಳ್ಳಿಗಳಲ್ಲಿ ಕುಡಿಯುವ ನೀರಿನ ತತ್ವಾರ ಎದುರಾಗಬಹುದೆಂದು ಗುರುತಿಸಲಾಗಿದ್ದು, ಈ ಹಳ್ಳಿಗಳಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ, ಖಾಸಗಿ ಬೋರ್‌ವೆಲ್‌ಗಳ ಮೂಲಕ ಹಾಗೂ ಸಮೀಪದ ನೀರಿನ ಲಭ್ಯತೆಯನುಸಾರ ಸರಬರಾಜಿಗೆ ಕ್ರಮಕೈಗೊಳ್ಳಲಾಗಿದೆ. ಇದಲ್ಲದೆ 4ನೇ ಹಂತವಾಗಿ ಈ ಮೂರೂ ಕ್ರಮಗಳು ಸಾಧ್ಯವಾಗದಿದ್ದಲ್ಲಿ ಬೋರ್‌ವೆಲ್ ಕೊರೆಸಿ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬೋರ್‌ವೆಲ್ ಕೊರೆಸಲು ಬೇಕಿರುವ ಅನುಮತಿಯನ್ನು ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಕ್ಷಣ ನೀಡುವಂತೆ ಹಾಗೂ ಬೆಸ್ಕಾಂ ಅಧಿಕಾರಿಗಳು ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ ಬೇಸಿಗೆಗೆ ಯಾವುದೇ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಭಾರತೀಯ ಭೂವಿಜ್ಞಾನ ಸಮೀಕ್ಷೆ ವರದಿ ಪ್ರಕಾರ ತುಮಕೂರು ಜಿಲ್ಲೆಯ ಬಹುತೇಕ ಎಲ್ಲಾ ಪ್ರದೇಶವು ಭೂಭಾಗದ ತಳಭಾಗದಲ್ಲಿ ಗ್ರಾನೈಟ್ ಪದರ ಇರುವುದನ್ನು ಪತ್ತೆಹಚ್ಚಿದ್ದು, ಈ ಕಾರಣದಿಂದ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ನೀರಿನ ಅಂತರ್ಜಲಮಟ್ಟ ಬೇಗ ಕುಸಿಯಲು ಕಾರಣವಾಗಿದೆ. ಇದರಲ್ಲಿ ಕೋಲಾರ ಮತ್ತು ತುಮಕೂರು ಜಿಲ್ಲೆಗಳನ್ನು ಅತಿಹೆಚ್ಚು ನೀರಿನ ಶೋಷಣೆ ಮಾಡಿದ ಜಿಲ್ಲೆಗಳೆಂದು ಅದು ಗುರುತಿಸಿದೆ. ಈ ಹಿಂದೆ ಕೋಲಾರ ಜಿಲ್ಲೆಯಲ್ಲಿ ಬೋರ್‌ವೆಲ್ ಕೊರೆಯದಂತೆ ನಿರ್ಬಂಧ ಹೇರಲಾಗಿತ್ತು. ಅಂತೆಯೇ, ತುಮಕೂರು ಜಿಲ್ಲೆಯಲ್ಲಿಯೂ ಅಂತಹ ಸ್ಥಿತಿ ನಿರ್ಮಾಣವಾಗಲು ಅಚ್ಚರಿಯಿಲ್ಲ. ಈ ಹಿನ್ನೆಲೆಯಲ್ಲಿ ಅಂತರ್ಜಲ ವೃದ್ಧಿಸಿಕೊಳ್ಳುವ ಹಾಗೂ ನೀರಿನ ಸಮಸ್ಯೆ ನೀಗಿಸಲು ಶಾಶ್ವತ ಯೋಜನೆಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲೂ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿದ್ದು, ಕನಿಷ್ಠ 2 ದಿನಕ್ಕೊಮ್ಮೆಯಾದರೂ ನೀರು ಸರಬರಾಜು ಮಾಡುವ ಮೂಲಕ ಸಾರ್ವಜನಿಕರಿಗೆ ನೆರವಾಗುವಂತೆ ಸೂಚಿಸಿರುವುದಾಗಿ ಸಚಿವರು ತಿಳಿಸಿದರು.
ತುಮಕೂರು ನಗರದ ನೀರಿನ ಮೂಲವಾಗಿರುವ ಹೇಮಾವತಿ ನೀರಿನ ಶೇಖರಣಾ ಘಟಕ ಬುಗುಡನಹಳ್ಳಿ ಕೆರೆಯಲ್ಲಿ ನೀರಿನ ಪ್ರಮಾಣದ ಆಧಾರದ ಮೇಲೆ ಹೇಮಾವತಿ ನೀರು ಹರಿಸುವಂತೆ ಈಗಾಗಲೇ ಹಾಸನದ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗಿದೆ. ಜಿಲ್ಲಾಡಳಿತವು ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಿದ್ದು, ಕನಿಷ್ಠ 2 ಟಿಎಂಸಿ ನೀರು ಹರಿಸುವಂತೆ ಕೋರುವುದಾಗಿ ತಿಳಿಸಿದರು.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿರುಬೇಸಿಗೆ ಕಾರಣ ಕಾಡ್ಗಿಚ್ಚು ಹಬ್ಬುವ ಸಂದರ್ಭವಿದೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ಇಲಾಖೆಯವರು ತಮ್ಮ ವ್ಯಾಪ್ತಿಯ ಘಟಕಗಳೊಂದಿಗೆ ಪರಿಶೀಲನೆ ನಡೆಸಿ ತೀವ್ರ ನಿಗಾವಹಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಜಿಲ್ಲೆಯ ಕೆಲವೆಡೆ ಚಿರತೆಯ ಕಾಟ ಹೆಚ್ಚಿರುವ ಕಾರಣ ಸಾಕಷ್ಟು ಬೋನುಗಳ ದಾಸ್ತಾನು ಇಟ್ಟುಕೊಳ್ಳುವಂತೆ ಸೂಚಿಸಿರುವುದಾಗಿ ಹೇಳಿದರು.
ಮಾರ್ಚ್ 17ರಂದು ಜಿಲ್ಲೆಯ ಶಿರಾ ಭಾಗದಲ್ಲಿ ಸುರಿದ ಭಾರಿ ಆಲಿಕಲ್ಲು ಮಳೆಯಿಂದಾಗಿ ಅಂದಾಜು ಸುಮಾರು 4ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ, ಅಡಿಕೆ, ರೇಷ್ಮೆ ಇತ್ಯಾದಿ ಬೆಳೆಗಳು ನಷ್ಟವಾಗಿವೆ. ಈ ಬಗ್ಗೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಲಾಯಿತು. ನಷ್ಟಕ್ಕೊಳಗಾದ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವ ಸಂಬಂಧ ಹಾಗೂ ವಿಪತ್ತು ನಿರ್ವಹಣೆ ನಿಧಿಯಿಂದ ರೈತರಿಗೆ ಪರಿಹಾರ ನೀಡುವ ಸಂಬAಧ ಚರ್ಚಿಸಲಾಗಿದೆ ಎಂದರು.
ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿ ತೋಟಗಾರಿಕೆ ಬೆಳೆ ಬೆಳೆದಿರುವ ರೈತರು ಸಂಕಷ್ಟಕ್ಕೀಡಾಗಿರುವುದು ಅತ್ಯಂತ ನೋವಿನ ವಿಚಾರ. ಸರ್ಕಾರ ಎಂದಿಗೂ ರೈತರ ಪರವಾಗಿ ನಿಲ್ಲಲಿದ್ದು, ಪರಿಹಾರ ಒದಗಿಸಲು ಸೂಕ್ತ ಕ್ರಮವಹಿಸಲಿದೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದರು.
ಇಂದಿನ ಶಿರಾ ಭೇಟಿ ಸಂದರ್ಭದಲ್ಲಿ ಅಲ್ಲಿನ ಆಸ್ಪತ್ರೆಗೆ ಭೇಟಿ ನೀಡಲಾಯಿತು. ಶಿರಾ ತಾಲ್ಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದ ಅವರು, ಕೊಳಚೆ ನಿರ್ಮೂಲನ ಮಂಡಳಿಯಿಂದ ಬಡವರಿಗಾಗಿ ನಿರ್ಮಿಸಿರುವ 1800 ಮನೆಗಳನ್ನು ಸದ್ಯದಲ್ಲಿಯೇ ಹಂಚಿಕೆ ಮಾಡಲು ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.




