ಜುಲೈ ತಿಂಗಳಲ್ಲಿ ಸಮರ್ಪಕ ಮಳೆಯಾದರೆ ಈಗಿನ ವಿಳಂಬವನ್ನು ಬಹುತೇಕ ಸರಿದೂಗಿಸಬಹುದು. ಆದರೆ ಮಳೆ ಮತ್ತೆ ಕೈಕೊಟ್ಟರೆ ಭತ್ತದ ಇಳುವರಿ ಮಾತ್ರವಲ್ಲದೆ, ನೀರಿನ ಸಂಗ್ರಹ, ಕುಡಿಯುವ ನೀರಿನ ಲಭ್ಯತೆ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೂ ಅದರ ಪರಿಣಾಮ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸದ್ಯಕ್ಕೆ ರೈತರ ಕಣ್ಣು ಆಕಾಶದತ್ತ ನೆಟ್ಟಿದ್ದು, ಮುಂದಿನ ಹದಿನೈದು ದಿನಗಳ ಮಳೆಯೇ ಈ ವರ್ಷದ ಕೃಷಿಯ ದಿಕ್ಕನ್ನು ನಿರ್ಧರಿಸಲಿದೆ.
ಕರಾವಳಿ ಜಿಲ್ಲೆಗಳ ಪಾಲಿಗೆ ಜೂನ್ ತಿಂಗಳೆಂದರೆ ಧಾರಾಕಾರ ಮಳೆ, ತುಂಬಿ ಹರಿಯುವ ನದಿಗಳು, ನೀರಿನಿಂದ ತುಂಬಿದ ಗದ್ದೆಗಳು ಹಾಗೂ ಬಿರುಸಿನ ಕೃಷಿ ಚಟುವಟಿಕೆಗಳ ಸಮಯ. ಆದರೆ ಈ ಬಾರಿ ಉಡುಪಿ ಜಿಲ್ಲೆಯ ಚಿತ್ರಣ ಸಂಪೂರ್ಣ ಬದಲಾಗಿದೆ. ವಿಜ್ಞಾನಿಗಳು ಎಲ್ ನಿನೋ ಪರಿಣಾಮದ ಬಗ್ಗೆ ಮುಂಚಿತವಾಗಿಯೇ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ, ಜಿಲ್ಲೆಯು ಮುಂಗಾರು ಮಳೆಯ ಮೊದಲ ತಿಂಗಳಲ್ಲೇ ಶೇ.50ರಷ್ಟು ಮಳೆ ಕೊರತೆಯನ್ನು ಎದುರಿಸಿದೆ. ಈ ಬೆಳವಣಿಗೆ ಜಿಲ್ಲೆಯ ಪ್ರಮುಖ ಬೆಳೆಯಾದ ಭತ್ತದ ಕೃಷಿಯ ಮೇಲೆ ನೇರ ಪರಿಣಾಮ ಬೀರಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಜಿಲ್ಲಾ ವಿಕೋಪ ನಿರ್ವಹಣಾ ಕೇಂದ್ರದ ಅಂಕಿಅಂಶಗಳ ಪ್ರಕಾರ, ಜೂನ್ 1ರಿಂದ 30ರವರೆಗೆ ಜಿಲ್ಲೆಯಲ್ಲಿ ಕೇವಲ 558 ಮಿಲಿ ಮೀಟರ್ ಮಳೆಯಾಗಿದೆ. ಇದೇ ಅವಧಿಯಲ್ಲಿ ವಾಡಿಕೆಯಂತೆ 1,106 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಅಂದರೆ ನಿರೀಕ್ಷಿತ ಮಳೆಯ ಅರ್ಧದಷ್ಟು ಮಾತ್ರ ಈ ಬಾರಿ ಮಳೆ ಸುರಿದಿದೆ. ಪರಿಣಾಮವಾಗಿ ಸಾಮಾನ್ಯವಾಗಿ ಈ ವೇಳೆಗೆ ತುಂಬಿ ತುಳುಕಬೇಕಿದ್ದ ಬಾವಿಗಳು, ಕೆರೆಗಳು, ಹಳ್ಳಗಳು ಹಾಗೂ ತೋಡುಗಳಲ್ಲಿ ನೀರಿನ ಮಟ್ಟ ತೀರಾ ಕಡಿಮೆಯಾಗಿದೆ. ಹಲವೆಡೆ ನೀರು ತಳದಲ್ಲಿ ಮಾತ್ರ ಕಾಣಿಸುತ್ತಿದ್ದು, ಜೂನ್ ತಿಂಗಳಲ್ಲೇ ನೀರಿನ ಅಭಾವದ ಚಿತ್ರಣ ಕಂಡುಬಂದಿರುವುದು ಅಪರೂಪದ ಬೆಳವಣಿಗೆಯಾಗಿದೆ.
ಮಳೆ ಕೊರತೆಯ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಿಂದಲೇ ಗದ್ದೆಗಳಲ್ಲಿ ನಾಟಿ ಕಾರ್ಯ ಆರಂಭವಾಗುತ್ತದೆ. ಕೃಷಿ ಕಾರ್ಮಿಕರ ಓಡಾಟ, ಟ್ರ್ಯಾಕ್ಟರ್ ಹಾಗೂ ನಾಟಿ ಯಂತ್ರಗಳ ಸದ್ದು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ದೃಶ್ಯವಾಗಿರುತ್ತದೆ. ಆದರೆ ಈ ಬಾರಿ ಮಳೆಯ ಕೊರತೆಯಿಂದ ನಾಟಿ ಪೂರ್ವ ಸಿದ್ಧತೆಗಳೇ ವಿಳಂಬವಾಗಿವೆ. ಗದ್ದೆಗಳು ಇನ್ನೂ ಸಾಕಷ್ಟು ನೀರು ಕಾಣದೆ ಒಣಗುವಂತಾಗುತ್ತಿದ್ದು, ರೈತರು ಕೆಲಸ ಆರಂಭಿಸಲು ಮಳೆಯನ್ನೇ ಕಾಯುವಂತಾಗಿದೆ.
ಇದಕ್ಕೆ ವ್ಯತಿರಿಕ್ತವಾಗಿ ಕಳೆದ ವರ್ಷದ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು. 2025ರ ಜೂನ್ ತಿಂಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 1,162.8 ಮಿಲಿ ಮೀಟರ್ ಮಳೆಯಾಗಿ ವಾಡಿಕೆಗಿಂತ ಶೇ.5ರಷ್ಟು ಅಧಿಕ ಮಳೆಯಾಗಿತ್ತು. ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಪಡೆದ ಜಿಲ್ಲೆಗಳಲ್ಲಿ ಉಡುಪಿ ಮುಂಚೂಣಿಯಲ್ಲಿತ್ತು. ಸಮಯಕ್ಕೆ ಸರಿಯಾಗಿ ನಾಟಿ ಕಾರ್ಯ ಪೂರ್ಣಗೊಂಡು ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿದ್ದವು. ಆದರೆ ಕೇವಲ ಒಂದು ವರ್ಷದ ಅಂತರದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿರುವುದು ರೈತರ ಚಿಂತೆಯನ್ನು ಹೆಚ್ಚಿಸಿದೆ.
ಈ ವರ್ಷದ ಜನವರಿಯಿಂದಲೇ ಮಳೆಯ ಕೊರತೆ ಮುಂದುವರಿದಿರುವುದು ಮತ್ತೊಂದು ಆತಂಕಕಾರಿ ಅಂಶವಾಗಿದೆ. ಜನವರಿ 1ರಿಂದ ಜೂನ್ 30ರವರೆಗೆ ಜಿಲ್ಲೆಯ ವಾಡಿಕೆ ಮಳೆ 1,163 ಮಿಲಿ ಮೀಟರ್ ಆಗಿದ್ದರೆ, ಈ ಬಾರಿ ಕೇವಲ 727 ಮಿಲಿ ಮೀಟರ್ ಮಳೆಯಾಗಿದೆ. ಅಂದರೆ ಒಟ್ಟಾರೆ ಶೇ.44ರಷ್ಟು ಮಳೆ ಕೊರತೆ ದಾಖಲಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಜಿಲ್ಲೆಯಲ್ಲಿ 2,101.6 ಮಿಲಿ ಮೀಟರ್ ಮಳೆಯಾಗಿ ವಾಡಿಕೆಗಿಂತ ಶೇ.61ರಷ್ಟು ಅಧಿಕ ಮಳೆಯಾಗಿತ್ತು.
ತಾಲೂಕುವಾರು ಅಂಕಿಅಂಶಗಳನ್ನು ನೋಡಿದರೆ ಪರಿಸ್ಥಿತಿಯ ಗಂಭೀರತೆ ಇನ್ನಷ್ಟು ಸ್ಪಷ್ಟವಾಗುತ್ತದೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಹೆಬ್ರಿ ತಾಲೂಕಿನಲ್ಲಿ ಈ ಬಾರಿ ಶೇ.60ರಷ್ಟು ಮಳೆ ಕೊರತೆ ದಾಖಲಾಗಿದೆ. ವಾಡಿಕೆಯ 1,315 ಮಿಲಿ ಮೀಟರ್ ಮಳೆಯ ಬದಲು ಕೇವಲ 531 ಮಿಲಿ ಮೀಟರ್ ಮಳೆಯಾಗಿದೆ. ಬ್ರಹ್ಮಾವರದಲ್ಲಿ ಶೇ.54ರಷ್ಟು, ಉಡುಪಿ ಹಾಗೂ ಕಾರ್ಕಳದಲ್ಲಿ ತಲಾ ಶೇ.49ರಷ್ಟು, ಕಾಪುವಿನಲ್ಲಿ ಶೇ.44ರಷ್ಟು, ಬೈಂದೂರಿನಲ್ಲಿ ಶೇ.43ರಷ್ಟು ಹಾಗೂ ಕುಂದಾಪುರದಲ್ಲಿ ಶೇ.41ರಷ್ಟು ಮಳೆ ಕೊರತೆ ಕಂಡುಬಂದಿದೆ. ಸಾಮಾನ್ಯವಾಗಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದ ಕೊರತೆ ಕಂಡುಬಂದಿರುವುದು ಹವಾಮಾನದಲ್ಲಿನ ಬದಲಾವಣೆಯ ಗಂಭೀರತೆಯನ್ನು ಸೂಚಿಸುತ್ತಿದೆ.
ಆದರೆ ಈ ಎಲ್ಲ ಆತಂಕದ ನಡುವೆಯೂ ರೈತರಿಗೆ ಆಶಾದಾಯಕ ಬೆಳವಣಿಗೆಯೊಂದು ಕಂಡುಬಂದಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಮುಂದಿನ 15 ದಿನಗಳವರೆಗೆ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮುನ್ಸೂಚನೆ ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಕೃಷಿ ಇಲಾಖೆ ಕೂಡ ರೈತರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಮಳೆ ಸುಮಾರು ಮೂರು ವಾರ ತಡವಾಗಿ ಆರಂಭವಾಗಿರುವುದರಿಂದ ಸಸಿ ಮಡಿ ತಯಾರಿ ವಿಳಂಬವಾಗಿದೆ. ಆದರೆ ಇದಕ್ಕಾಗಿ ಬೀಜದ ತಳಿಯನ್ನು ಬದಲಾಯಿಸುವ ಅಗತ್ಯವಿಲ್ಲ. ರೈತರು ಎಂದಿನಂತೆ ಬಳಸುವ ಭತ್ತದ ಬೀಜವನ್ನೇ ಬಿತ್ತಬಹುದು. ಕೃಷಿ ಪದ್ಧತಿಯಲ್ಲಿಯೂ ಯಾವುದೇ ಬದಲಾವಣೆ ಮಾಡಬೇಕಾದ ಅವಶ್ಯಕತೆಯಿಲ್ಲ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ನಾಟಿ ಕಾರ್ಯಗಳು ವೇಗ ಪಡೆದು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿದ್ದೀರಾ? ಬೀದರ್ | ಕೈಕೊಟ್ಟ ಮುಂಗಾರು : ಜೂನ್ ಕಳೆದರೂ ಶೇ.50ರಷ್ಟು ದಾಟದ ಬಿತ್ತನೆ
ಉಡುಪಿ ಜಿಲ್ಲೆಯ ಕೃಷಿ ಸಂಪೂರ್ಣವಾಗಿ ಮುಂಗಾರು ಮಳೆಯನ್ನೇ ಅವಲಂಬಿಸಿದೆ. ಜುಲೈ ತಿಂಗಳಲ್ಲಿ ಸಮರ್ಪಕ ಮಳೆಯಾದರೆ ಈಗಿನ ವಿಳಂಬವನ್ನು ಬಹುತೇಕ ಸರಿದೂಗಿಸಬಹುದು. ಆದರೆ ಮಳೆ ಮತ್ತೆ ಕೈಕೊಟ್ಟರೆ ಭತ್ತದ ಇಳುವರಿ ಮಾತ್ರವಲ್ಲದೆ, ನೀರಿನ ಸಂಗ್ರಹ, ಕುಡಿಯುವ ನೀರಿನ ಲಭ್ಯತೆ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೂ ಅದರ ಪರಿಣಾಮ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸದ್ಯಕ್ಕೆ ರೈತರ ಕಣ್ಣು ಆಕಾಶದತ್ತ ನೆಟ್ಟಿದ್ದು, ಮುಂದಿನ ಹದಿನೈದು ದಿನಗಳ ಮಳೆಯೇ ಈ ವರ್ಷದ ಕೃಷಿಯ ದಿಕ್ಕನ್ನು ನಿರ್ಧರಿಸಲಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




