ಕಾರು ಖರೀದಿಗಾಗಿ ಪಡೆದ ಸಾಲದ ಮರುಪಾವತಿ ಅವಧಿಯನ್ನು ಗ್ರಾಹಕರ ಅನುಮತಿಯಿಲ್ಲದೆ ಏಕಪಕ್ಷೀಯವಾಗಿ ವಿಸ್ತರಿಸಿ, ಹೆಚ್ಚುವರಿ ಬಡ್ಡಿ ಹಾಗೂ ಅನಧಿಕೃತ ದಂಡ ವಿಧಿಸಿದ್ದ ಪ್ರಕರಣದಲ್ಲಿ ಬೆಳಗಾವಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಐಸಿಐಸಿಐ ಬ್ಯಾಂಕ್ ವಿರುದ್ಧ ಮಹತ್ವದ ಆದೇಶ ನೀಡಿದೆ.
ರೈತ ಮುಖಂಡ ಸಿದಗೌಡ ಮೋದಗಿ ಅವರು 2019ರಲ್ಲಿ ಟಿಳಕವಾಡಿಯ ಐಸಿಐಸಿಐ ಬ್ಯಾಂಕ್‌ನಿಂದ ಹೊಸ ಕಾರು ಖರೀದಿಸಲು ₹6.06 ಲಕ್ಷ ಸಾಲ ಪಡೆದಿದ್ದರು. ಮಾಸಿಕ ₹12,807ರಂತೆ 60 ಕಂತುಗಳಲ್ಲಿ ಸಾಲ ಮರುಪಾವತಿಸಲು ಒಪ್ಪಂದವಾಗಿತ್ತು.
ಆದರೆ ಕೋವಿಡ್-19 ಅವಧಿಯಲ್ಲಿ ಗ್ರಾಹಕರ ಲಿಖಿತ ಸಮ್ಮತಿ ಪಡೆಯದೆ ಬ್ಯಾಂಕ್ ಸಾಲದ ಅವಧಿಯನ್ನು 60 ಕಂತುಗಳಿಂದ 74 ಕಂತುಗಳಿಗೆ ಏರಿಸಿತ್ತು. ಇದರಿಂದ ಸುಮಾರು ₹1.53 ಲಕ್ಷ ಹೆಚ್ಚುವರಿ ಮೊತ್ತ ವಸೂಲಿ ಮಾಡಲು ಸಾಲದ ಷರತ್ತುಗಳನ್ನು ಏಕಪಕ್ಷೀಯವಾಗಿ ಬದಲಾಯಿಸಿದ್ದಲ್ಲದೆ, ₹1 ಲಕ್ಷಕ್ಕೂ ಅಧಿಕ ಅನಧಿಕೃತ ಚಾರ್ಜ್ ಹಾಗೂ ದಂಡ ವಿಧಿಸಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕ್ರಮದಿಂದ ನೊಂದ ಸಿದಗೌಡ ಮೋದಗಿ ಅವರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು. ಸಿ.ಸಿ. ನಂ. 213/2023 ಪ್ರಕರಣದ ವಿಚಾರಣೆ ನಡೆಸಿದ ಆಯೋಗ, ಬ್ಯಾಂಕ್ ಸೇವಾ ಲೋಪ ಎಸಗಿದೆ ಎಂದು ತೀರ್ಮಾನಿಸಿ, ಮೂಲ ಒಪ್ಪಂದದಂತೆ ಸಾಲದ ಅವಧಿಯನ್ನು 74ರಿಂದ 60 ಕಂತುಗಳಿಗೆ ಮರುಸ್ಥಾಪಿಸಲು ಆದೇಶಿಸಿದೆ.
ಇದಲ್ಲದೆ, ಹೆಚ್ಚುವರಿಯಾಗಿ ವಸೂಲಿ ಮಾಡಿದ ಕಂತುಗಳು ಹಾಗೂ ಅನಧಿಕೃತ ಚಾರ್ಜ್‌ಗಳನ್ನು ಗ್ರಾಹಕರಿಗೆ ಮರುಪಾವತಿಸಬೇಕು ಎಂದು ಸೂಚಿಸಿದೆ. ಮಾನಸಿಕ ಹಿಂಸೆ ಹಾಗೂ ಸೇವಾ ಲೋಪಕ್ಕೆ ₹10,000 ಪರಿಹಾರ ಮತ್ತು ₹5,000 ದಾವೆ ವೆಚ್ಚವನ್ನು ಪಾವತಿಸುವಂತೆ ಆದೇಶಿಸಿದೆ.
ಈ ಆದೇಶವನ್ನು 60 ದಿನಗಳೊಳಗೆ ಪಾಲಿಸದಿದ್ದರೆ, ಶೇ.12ರ ಬಡ್ಡಿಯೊಂದಿಗೆ ಹೆಚ್ಚುವರಿಯಾಗಿ ₹20,000 ಪರಿಹಾರ ನೀಡುವಂತೆ ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಪ್ರಕರಣದಲ್ಲಿ ಗ್ರಾಹಕರ ಪರವಾಗಿ ನ್ಯಾಯವಾದಿ ಸುನೀಲ ಎಸ್. ಸಾಣಿಕೊಪ್ಪ ವಾದ ಮಂಡಿಸಿದ್ದರು.



