ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆ, ಮೂಲಸೌಕರ್ಯಗಳ ಅಭಾವ ಮತ್ತು ಪೋಷಕರ ಖಾಸಗಿ ಶಾಲೆಗಳತ್ತದ ಒಲವಿನಿಂದ ಒಂದರ ಹಿಂದೆ ಒಂದರಂತೆ ಮುಚ್ಚುವ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕಿನ ಹೊನ್ನಾಳದ ಬೊಕ್ಕಪಟ್ನ ಸರ್ಕಾರಿ ಉರ್ದು (ಆಂಗ್ಲ ಮಾಧ್ಯಮ) ಹಿರಿಯ ಪ್ರಾಥಮಿಕ ಶಾಲೆ ಒಂದು ಮಾದರಿ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಈ ಶಾಲೆ ಮಾತ್ರ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿರುವುದು ವಿಶೇಷ.

ಕೆಲವು ವರ್ಷಗಳ ಹಿಂದೆ ಕೇವಲ 40ಕ್ಕೂ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿದ್ದ ಈ ಶಾಲೆಯಲ್ಲಿ ಇಂದು 112ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಿರುವುದು ಶಾಲೆಯ ಮೇಲಿನ ಪೋಷಕರ ವಿಶ್ವಾಸ, ಶಿಕ್ಷಕರ ಬದ್ಧತೆ ಹಾಗೂ ಸಮುದಾಯದ ಸಹಕಾರಕ್ಕೆ ಸಾಕ್ಷಿಯಾಗಿದೆ.
ಈ ಸಾಧನೆಯ ಹಿಂದೆ ಹೃದಯ ಶ್ರೀಮಂತಿಕೆಯ ದಾನಿಗಳು, ಹಳೆ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಶಿಕ್ಷಣಾಭಿಮಾನಿಗಳ ಮಹತ್ತರ ಕೊಡುಗೆ ಇದೆ. ಶಾಲೆಯ ಅಭಿವೃದ್ಧಿಗೆ ನಿರಂತರವಾಗಿ ಕೈಜೋಡಿಸುತ್ತಿರುವ ಹಳೆ ವಿದ್ಯಾರ್ಥಿ ಸಂಘವು ಕೇವಲ ಮೂಲಸೌಕರ್ಯ ನಿರ್ಮಾಣಕ್ಕೆ ಮಾತ್ರ ಸೀಮಿತವಾಗದೆ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಶಾಲೆಯಲ್ಲಿ ಆರು ಮಂದಿ ಸರ್ಕಾರಿ ಶಿಕ್ಷಕರಿದ್ದರೂ, ಇನ್ನೂ ಆರು ಮಂದಿ ಅತಿಥಿ ಶಿಕ್ಷಕರನ್ನು ಹಳೆ ವಿದ್ಯಾರ್ಥಿ ಸಂಘವೇ ನೇಮಿಸಿ ಅವರಿಗೆ ವೇತನವನ್ನು ನೀಡುತ್ತಿದೆ. ತಿಂಗಳಿಗೆ ಸುಮಾರು 50 ಸಾವಿರ ರೂಪಾಯಿಗೂ ಅಧಿಕ ವೆಚ್ಚವನ್ನು ಭರಿಸುತ್ತಿರುವುದು ಅವರ ಶಿಕ್ಷಣಪ್ರೇಮವನ್ನು ತೋರಿಸುತ್ತದೆ.

ಇಂದು ಶಾಲೆಗೆ ಸುಮಾರು 14 ಲಕ್ಷ ರೂಪಾಯಿ ವೆಚ್ಚದ ಹವಾನಿಯಂತ್ರಿತ (ಎಸಿ) ಶಾಲಾ ಬಸ್‌ನ್ನು ದಾನಿಗಳ ನೆರವಿನಿಂದ ಹಸ್ತಾಂತರಿಸಿರುವುದು ಮತ್ತೊಂದು ಮೈಲಿಗಲ್ಲಾಗಿದೆ. ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಬಸ್ ವ್ಯವಸ್ಥೆಯೇ ಅಪರೂಪ. ಬಸ್ ಖರೀದಿಸುವುದಕ್ಕಿಂತ ಅದರ ನಿರ್ವಹಣೆ, ಇಂಧನ, ಚಾಲಕ ಮತ್ತು ಮಾಸಿಕ ವೆಚ್ಚಗಳನ್ನು ನಿಭಾಯಿಸುವುದು ದೊಡ್ಡ ಸವಾಲು. ಈ ಕಾರಣದಿಂದ ಅನೇಕ ಶಾಲೆಗಳು ಬಸ್ ವ್ಯವಸ್ಥೆಯಿಂದ ದೂರ ಉಳಿಯುತ್ತವೆ. ಆದರೆ ಬೊಕ್ಕಪಟ್ನ ಶಾಲೆಯ ಹಳೆ ವಿದ್ಯಾರ್ಥಿ ಸಂಘವು ಆ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವುದು ಗಮನಾರ್ಹ ಸಂಗತಿ.

ಶಾಲಾ ಬಸ್ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದ ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, “ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿರುವಾಗ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದು ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಸಕಾರಾತ್ಮಕ ಬದಲಾವಣೆಯ ಸಂಕೇತವಾಗಿದೆ. ಹಣವಂತರಿಗಿಂತ ಹೃದಯವಂತ ದಾನಿಗಳೇ ಇಂತಹ ಅಭಿವೃದ್ಧಿಗೆ ಕಾರಣರಾಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯೊಂದು ಇಂತಹ ಮಟ್ಟದ ಸಾಧನೆ ಮಾಡುತ್ತಿರುವುದು ವಿದ್ಯಾಕ್ರಾಂತಿಯೇ ಸರಿ” ಎಂದು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನಿವಾಸಿ ಭಾರತೀಯ ಉದ್ಯಮಿ ಅಶ್ಮತ್ ಅಲಿ ಕೂಡ ಶಾಲೆಯ ಪ್ರಗತಿಯನ್ನು ಶ್ಲಾಘಿಸಿದರು. ಶಾಲೆಯಲ್ಲಿರುವ ಶಿಕ್ಷಕರ ಬೋಧನಾ ಗುಣಮಟ್ಟವೇ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 400ಕ್ಕೂ ಹೆಚ್ಚು ಏರಬೇಕು ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದಲ್ಲಿ ಮಾದರಿ ಶಾಲೆಯಾಗಿ ಗುರುತಿಸಿಕೊಳ್ಳಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳ ಬಗ್ಗೆ ನಿರಾಸೆಯ ಮಾತುಗಳು ಕೇಳಿಬರುತ್ತಿರುವ ಈ ಕಾಲದಲ್ಲಿ ಬೊಕ್ಕಪಟ್ನ ಸರ್ಕಾರಿ ಉರ್ದು (ಆಂಗ್ಲ ಮಾಧ್ಯಮ) ಹಿರಿಯ ಪ್ರಾಥಮಿಕ ಶಾಲೆ ಆಶಾಕಿರಣವಾಗಿ ಕಾಣುತ್ತಿದೆ. ಸಮುದಾಯದ ಸಹಭಾಗಿತ್ವ, ಹಳೆ ವಿದ್ಯಾರ್ಥಿಗಳ ಬದ್ಧತೆ, ದಾನಿಗಳ ಉದಾರತೆ ಮತ್ತು ಶಿಕ್ಷಕರ ಶ್ರಮ ಒಂದಾದರೆ ಸರ್ಕಾರಿ ಶಾಲೆಗಳೂ ಖಾಸಗಿ ಶಾಲೆಗಳಿಗೆ ಸಮಾನವಾಗಿ ಸ್ಪರ್ಧಿಸಬಲ್ಲವು ಎಂಬುದನ್ನು ಈ ಶಾಲೆ ಸಾಬೀತುಪಡಿಸಿದೆ. ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಹೊಸ ಚೈತನ್ಯ ತುಂಬುತ್ತಿರುವ ಈ ಶಾಲೆ ನಿಜಕ್ಕೂ ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ.


ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.






