ಪಶ್ಚಿಮ ಘಟ್ಟದ ಸಂರಕ್ಷಣೆಯ ಹೆಸರಿನಲ್ಲಿ ಕಳೆದ ಒಂದು ದಶಕದಿಂದ ಚರ್ಚೆಯಲ್ಲಿರುವ ಕಸ್ತೂರಿ ರಂಗನ್ ವರದಿ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ವಾಸಿಸುವ ಮಲೆಕುಡಿಯ ಹಾಗೂ ಇತರ ಅರಣ್ಯ ಬುಡಕಟ್ಟುಗಳ ಜನಜೀವನಕ್ಕೆ ತೀವ್ರ ಸಮಸ್ಯೆ ಎದುರಾಗುವ ಆತಂಕವಿದೆ ಎಂದು ರಾಜ್ಯ ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ್ ಗೌಡ ಈದು ಹೇಳಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪಶ್ಚಿಮ ಘಟ್ಟ ಪ್ರದೇಶದ ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಜುಲೈ 27ರಂದು ಏಳನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಇದರನ್ವಯ ಕರ್ನಾಟಕದ ಪಶ್ಚಿಮ ಘಟ್ಟ ವ್ಯಾಪ್ತಿಯ ಹತ್ತು ಜಿಲ್ಲೆಗಳ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ ಎಂದರು.
ಈ ಹಿಂದೆ ಪ್ರಕಟಿಸಲಾದ ಕರಡು ಅಧಿಸೂಚನೆಗಳಿಗೆ ಈ ಭಾಗದ ಗ್ರಾಮಸ್ಥರಿಂದ ತೀವ್ರ ವಿರೋಧ ಹಾಗೂ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಇದೀಗ ಏಳನೇ ಕರಡು ಅಧಿಸೂಚನೆಯಲ್ಲೂ ಮೊದಲ ಕರಡು ಅಧಿಸೂಚನೆಯಲ್ಲಿದ್ದ ಬಹುತೇಕ ಪ್ರದೇಶವನ್ನೇ ಪರಿಸರ ಸೂಕ್ಷ್ಮ ಪ್ರದೇಶವಾಗಿ ಗುರುತಿಸಲಾಗಿದ್ದು, ಯಾವುದೇ ಮಹತ್ವದ ಬದಲಾವಣೆ ಮಾಡಲಾಗಿಲ್ಲ. ಇದರಿಂದ ಎಂಟು ಜಿಲ್ಲೆಗಳ ಪಶ್ಚಿಮ ಘಟ್ಟ ವ್ಯಾಪ್ತಿಯ 40 ತಾಲೂಕುಗಳ 1,576 ಗ್ರಾಮಗಳ ಸಾವಿರಾರು ಕುಟುಂಬಗಳಲ್ಲಿ ಆತಂಕ ಉಂಟಾಗಿದೆ ಎಂದು ಹೇಳಿದರು.
ಯಥಾಸ್ಥಿತಿ ಯೋಜನೆ ಜಾರಿಯಾದರೆ ಹಲವು ವರ್ಷಗಳಿಂದ ಈ ಭಾಗದಲ್ಲಿ ಬದುಕು ಕಟ್ಟಿಕೊಂಡಿರುವ ಕೃಷಿಕರು, ಕೂಲಿಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಸ್ಥರ ಜೀವನ ಅತಂತ್ರವಾಗುವ ಸಾಧ್ಯತೆಯಿದೆ. ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಜುಲೈ 27ರಿಂದ 60 ದಿನಗಳ ಕಾಲಾವಕಾಶ ನೀಡಲಾಗಿದ್ದು, ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಈ ಕುರಿತು ತಕ್ಷಣ ಸಭೆ ಕರೆದು ಯೋಜನೆಯ ಸಾಧಕ-ಬಾಧಕಗಳ ಕುರಿತು ವಿಸ್ತೃತ ಚರ್ಚೆ ನಡೆಸಬೇಕು. ಬಳಿಕ ಜನವಸತಿ ಪ್ರದೇಶಗಳ ವಾಸ್ತವ ಸ್ಥಿತಿಯನ್ನು ಪರಿಗಣಿಸಿ ಬಲವಾದ ವಿರೋಧ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ಆಗ್ರಹಿಸಿದರು.
ಮಲೆಕುಡಿಯರು ಪರಿಸರ ಸಂರಕ್ಷಣೆಯ ವಿರೋಧಿಗಳಲ್ಲ. ಆದರೆ ಜನರ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ಸಮರ್ಪಕ ಭೌತಿಕ ಸಮೀಕ್ಷೆ ನಡೆಸಿ, ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯದಿಂದ ಹೊರಗಿಡುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಪಶ್ಚಿಮ ಘಟ್ಟ ಪ್ರದೇಶ ಇದೀಗ ನಕ್ಸಲ್ ಮುಕ್ತವಾಗಿದ್ದು, ಜನವಿರೋಧಿ ಯೋಜನೆಗಳನ್ನು ಬಲವಂತವಾಗಿ ಹೇರಿದರೆ ಮತ್ತೆ ನಕ್ಸಲ್ ಚಟುವಟಿಕೆಗಳು ಸಕ್ರಿಯವಾಗುವ ಆತಂಕ ಜನರಲ್ಲಿ ಮೂಡಿದೆ. ಆದ್ದರಿಂದ ಜನರು ಆಕ್ರೋಶಕ್ಕೆ ಒಳಗಾಗುವ ಮೊದಲು ಈ ಭಾಗದ ಎಲ್ಲ ಶಾಸಕರು ಹಾಗೂ ಸಂಸದರು ಎಚ್ಚೆತ್ತುಕೊಂಡು ಜನರ ನೆಮ್ಮದಿಯ ಬದುಕಿಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಶ್ರೀಧರ್ ಗೌಡ ಈದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷೆ ವಸಂತಿ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಎಳನೀರು, ಉಡುಪಿ ಜಿಲ್ಲಾಧ್ಯಕ್ಷ ಗಂಗಾಧರ ಗೌಡ, ಪ್ರಧಾನ ಕಾರ್ಯದರ್ಶಿ ಅಶೋಕ್ ಗೌಡ ಹಾಗೂ ಪ್ರಮುಖರಾದ ನವೀನ್ ಉಪಸ್ಥಿತರಿದ್ದರು.





