ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತಿಕ ಲೋಕಮಂಚ್ ಟ್ರಸ್ಟ್, ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘ, ಬೀದರ್ ಹಾಗೂ ಮಾದರ ಚನ್ನಯ್ಯ ಮಾದಿಗ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಹಕಾರಿ ನಿಯಮಿತ, ಬೀದರ್ ಇವರ ಸಹಯೋಗದಲ್ಲಿ ಅಣ್ಣಾಭಾವು ಸಾಠೆ ಅವರ 106ನೇ ಜಯಂತೋತ್ಸವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ.
ಬೀದರನ ಪ್ರತಾಪನಗರದ ಸರ್ಕಾರಿ ನೌಕರರ ಭವನದಲ್ಲಿ ಆಗಸ್ಟ್ 30ರಂದು ಬೆಳಿಗ್ಗೆ 11.30ಕ್ಕೆ ಸಮಾರಂಭ ಆಯೋಜಿಸಲಾಗಿದೆ. ಮಾಜಿ ಸಚಿವ, ಶಾಸಕ ರಹೀಮ್ ಖಾನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಬೀದರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ, ಆದಿ ಜಾಂಬವ ಮಾದಿಗ ಸಮಾಜದ ರಾಜ್ಯ ಉಪಾಧ್ಯಕ್ಷ ರಾಜು ಕಡ್ಯಾಳ್, ಶಾಹೀನ್ ಶಿಕ್ಷಣ ಸಂಸ್ಥೆಯ ಅಬ್ದುಲ್ ಖದೀರ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಕಲೆ, ಸಾಹಿತ್ಯ, ಮಾಧ್ಯಮ, ವಿಜ್ಞಾನ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆಗೈದ ಮಹನೀಯರನ್ನು ಗೌರವಿಸಲಾಗುವುದು. ಇದರೊಂದಿಗೆ ಸಮಾಜಕ್ಕೆ ಮಾದರಿಯಾಗಿರುವ ಆದರ್ಶ ದಂಪತಿಗಳಿಗೂ ವಿಶೇಷ ಸನ್ಮಾನ ನೆರವೇರಿಸಲಾಗುವುದು. ಸಾಹಿತ್ಯ ರತ್ನ ಅಣ್ಣಾ ಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತಿಕ ಲೋಕಲ್ ಮಂಚ್ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮನೋಹರ ಅಧ್ಯಕ್ಷತೆ ವಹಿಸುವರು. ಅಣ್ಣಾಭಾವು ಸಾಠೆ ಕುರಿತು ಹಿರಿಯ ಸಾಹಿತಿ ರಜೀಯಾ ಬಳಬಟ್ಟಿ ಉಪನ್ಯಾಸ ನೀಡಲಿದ್ದಾರೆ.

ಅಣ್ಣಾ ಭಾವು ಸಾಠೆ ಅವರು ತಮ್ಮ ಸಾಹಿತ್ಯ, ಕಲೆ ಹಾಗೂ ಸಾಮಾಜಿಕ ಚಿಂತನೆಗಳ ಮೂಲಕ ಶೋಷಿತರು, ದುರ್ಬಲರು ಮತ್ತು ದುಡಿಯುವ ವರ್ಗದ ಜನರ ಬದುಕಿಗೆ ಧ್ವನಿಯಾದವರು. ಅವರ ಸಾಮಾಜಿಕ ಕಳಕಳಿ, ಮಾನವೀಯತೆ ಹಾಗೂ ಸಮಾನತೆಯ ಸಂದೇಶವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಇದನ್ನೂ ಓದಿ : ಬೀದರ್ | ಬಿಎಸ್ಎಸ್ಕೆ ಹರಾಜು ಪ್ರಕ್ರಿಯೆ ತಡೆಗೆ ಬಿಜೆಪಿ ಸ್ವಾಗತ
ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಕಲಾವಿದರು, ಪತ್ರಕರ್ತರು, ವಿಜ್ಞಾನಿಗಳು, ಸಮಾಜ ಸೇವಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರಾದ ಡಾ.ದೇವಿದಾಸ ತುಮಕುಂಟೆ, ಸುಮಂತ್ ಕಟ್ಟಿಮನಿ, ಡಾ.ಜೈಭಾರತ್ ಮಂಗೇಶಕರ್, ಪ್ರವೀಣ ಮಿರಗಂಜಕರ್, ಡಾ.ಮನೋಹರ ಮೇತ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




