ಭಾರತ ರತ್ನ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ 35ನೇ ಪುಣ್ಯಸ್ಮರಣೆ ಕಾರ್ಯಕ್ರಮವು ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಭಾವಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ವಕೀಲ ಶೇಖರ್ ಮಡಿವಾಳ್, ರಾಜೀವ್ ಗಾಂಧಿಯವರು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿಯೇ ಮೂಲವೆಂದು ನಂಬಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದರು. ಗ್ರಾಮೀಣ ಮಟ್ಟದ ಬಡಜನರಿಗೆ ಆಡಳಿತದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಹೊಸ ದಿಕ್ಕು ನೀಡಿದರು ಎಂದು ಹೇಳಿದರು. ಭಾರತವು ಇಂದು ಆಧುನಿಕ ತಂತ್ರಜ್ಞಾನ ಹೊಂದಿದ ಅಭಿವೃದ್ಧಿಶೀಲ ರಾಷ್ಟ್ರವಾಗಿ ಬೆಳೆಯಲು ಅವರ ದೂರದೃಷ್ಟಿಯ ಆಡಳಿತವೇ ಪ್ರಮುಖ ಕಾರಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಮಾತನಾಡಿ, 18 ವರ್ಷದ ಯುವಕರಿಗೆ ಮತದಾನದ ಹಕ್ಕು ನೀಡುವ ಮೂಲಕ ಯುವಜನತೆಯನ್ನು ದೇಶದ ರಾಜಕೀಯ ಮುಖ್ಯವಾಹಿನಿಗೆ ತಂದವರು ರಾಜೀವ್ ಗಾಂಧಿಯವರು ಎಂದರು. ಬೊಫೋರ್ಸ್ ಹಗರಣದ ಮೂಲಕ ಅವರ ತೇಜೋವಧೆ ಮಾಡಲು ಪ್ರಯತ್ನಿಸಿದರೂ, ದೇಶದ ಅಖಂಡತೆ ಹಾಗೂ ಸೈದ್ಧಾಂತಿಕ ಬದ್ಧತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ನಾಯಕ ಎಂದು ಸ್ಮರಿಸಿದರು. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿಯೂ ಅವರ ನೆನಪು ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸದಾಶಿವ ದೇವಾಡಿಗ, ಹಿರ್ಗಾನ ಸೊಸೈಟಿ ಅಧ್ಯಕ್ಷ ಸೀರಿಯಣ್ಣ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್ ಪೂಜಾರಿ, ಹಿರಿಯ ಕಾಂಗ್ರೆಸ್ ನಾಯಕ ಪ್ರಭಾಕರ್ ಬಂಗೇರ, ಭೂನ್ಯಾಯ ಮಂಡಳಿ ಸದಸ್ಯ ಸುನಿಲ್ ಭಂಡಾರಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೀನಾ ಡಿಸೋಜಾ, ಆಶಾ ಬೈಲೂರ್, ಸಂತೋಷ ದೇವಾಡಿಗ ಬೋಳ, ದೀಪಕ್ ಶೆಟ್ಟಿ ದೊಂಡೆರಂಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು. ಬ್ಲಾಕ್ ಉಪಾಧ್ಯಕ್ಷ ಜಾರ್ಜ್ ಕಾಸ್ಟಲಿನ್ ಧನ್ಯವಾದ ಸಲ್ಲಿಸಿದರು.





